
ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಪೊಲೀಸರು ಹಾಗೂ ಎನ್‌ಡಿಆರ್‌ಎಫ್ ತಂಡ
ಭೀಕರ ಮಳೆಗೆ ಮೂರು ಅಂತಸ್ತಿನ ಮನೆ ಕುಸಿತ: ಆರು ಜನರ ದಾರುಣ ಸಾವು
ಮಂಡಲ ಪ್ರದೇಶದ ಹನುಮಾನ್ ಮಂದಿರದ ಹಿಂಭಾಗದಲ್ಲಿರುವ ಜನತಾ ನಗರದ 'ಚಾಲ್ ಸಂಖ್ಯೆ 5' ರಲ್ಲಿ ರಾತ್ರಿ 8.30 ರ ಸುಮಾರಿಗೆ ಈ ದುರಂತ ಸಂಭವಿಸಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮೂರು ಅಂತಸ್ತಿನ ಮನೆ ಕುಸಿದು ಬಿದ್ದ ಪರಿಣಾಮ ಕನಿಷ್ಠ ಆರು ಜನರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಮನ್ಖುರ್ಡ್ ಪ್ರದೇಶದಲ್ಲಿ ಸಂಭವಿಸಿದೆ. ಮಂಡಲ ಪ್ರದೇಶದ ಹನುಮಾನ್ ಮಂದಿರದ ಹಿಂಭಾಗದಲ್ಲಿರುವ ಜನತಾ ನಗರದ 'ಚಾಲ್ ಸಂಖ್ಯೆ 5' ರಲ್ಲಿ ರಾತ್ರಿ 8.30 ರ ಸುಮಾರಿಗೆ ಈ ದುರಂತ ಸಂಭವಿಸಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೂರು ಅಂತಸ್ತಿನ ಕಟ್ಟಡದ ಭಾಗವಾಗಿದ್ದ ಎರಡು ಮೂರು ವಸತಿಗೃಹಗಳು ಏಕಾಏಕಿ ಕುಸಿದು ಬಿದ್ದಿವೆ.
ಆಸ್ಪತ್ರೆಗೆ ತರುವಷ್ಟರಲ್ಲೇ ಸಾವು
ದುರಂತದ ಬೆನ್ನಲ್ಲೇ ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅವಶೇಷಗಳ ಅಡಿಯಲ್ಲಿದ್ದವರನ್ನು ಹೊರತೆಗೆದಿದ್ದಾರೆ. ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಬಿಎಂಸಿ ನಡೆಸುವ ಶತಾಬ್ದಿ ಆಸ್ಪತ್ರೆಗೆ ಕರೆತರಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ರಾಜವಾಡಿ ಆಸ್ಪತ್ರೆಯಲ್ಲಿ ಮತ್ತೊಬ್ಬ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಗಾಯಗೊಂಡಿರುವ ಮತ್ತೊಬ್ಬ ವ್ಯಕ್ತಿಗೆ ಸದ್ಯ ರಾಜವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮುಂದುವರಿದ ಶೋಧ ಕಾರ್ಯ
ಇನ್ನೂ ಒಬ್ಬ ವ್ಯಕ್ತಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಮುಂಬೈ ಅಗ್ನಿಶಾಮಕ ದಳ, ಪೊಲೀಸ್ ಮತ್ತು ಬಿಎಂಸಿ ಸಿಬ್ಬಂದಿ ಜಂಟಿಯಾಗಿ ಬಹು-ಸಂಸ್ಥೆಗಳ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಬಿಜೆಪಿ ಕಾರ್ಪೊರೇಟರ್ ನವನಾಥ್ ಬಾನ್ ಮಾತನಾಡಿ, "ಗುಡಿಸಲಿನ ಮೇಲೆಯೇ ಈ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಒಬ್ಬ ವ್ಯಕ್ತಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ. ಆದರೆ ಮುಂಬೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯು ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಪಡಿಸುತ್ತಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

