
Fake Baba Arrest| ಮದ್ಯ, ಮಾಂಸದ ನೈವೇದ್ಯ, ನಡುರಾತ್ರಿ ವಿಚಿತ್ರ ಪೂಜೆ- ಜಿಮ್ ಟ್ರೈನರ್ ಈಗ ದೇವಮಾನವ!
ಮುಂಬೈನ ಮಲಾಡ್‌ನಲ್ಲಿ ಜಿಮ್ ಟ್ರೈನರ್‌ನಿಂದ ನಕಲಿ ದೇವಮಾನವನಾಗಿ ಬದಲಾಗಿ ಜನರನ್ನು ವಂಚಿಸುತ್ತಿದ್ದ 'ಮಾಂಟಿ ಬಾಬಾ'ನನ್ನು ಪೊಲೀಸರು ಬಂಧಿಸಿದ್ದಾರೆ.
ಆಧ್ಯಾತ್ಮದ ಹೆಸರಿನಲ್ಲಿ ಮುಗ್ಧ ಜನರನ್ನು ವಂಚಿಸಿ, ಮೌಢ್ಯದ ಬಲೆಗೆ ಬೀಳಿಸುತ್ತಿದ್ದ ನಕಲಿ ದೇವಮಾನವನೊಬ್ಬನ ಮುಖವಾಡವನ್ನು ಮುಂಬೈ ಪೊಲೀಸರು ಕಳಚಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಜಿಮ್‌ನಲ್ಲಿ ತರಬೇತುದಾರನಾಗಿದ್ದ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಆಧ್ಯಾತ್ಮಿಕ ವೈದ್ಯನಾಗಿ ಬದಲಾಗಿ ನಡೆಸುತ್ತಿದ್ದ ಕರಾಳ ದಂಧೆ ಈಗ ಬಯಲಾಗಿದೆ.
ಸಿಗರೇಟ್ ಸೇದುತ್ತಾ, ಅಘೋರಿ ಪೂಜೆ ಮಾಡುತ್ತಾ, ದೆವ್ವ ಬಿಡಿಸುವ ನೆಪದಲ್ಲಿ ಭಕ್ತರಿಂದ ಹಣದ ಜೊತೆಗೆ ಮದ್ಯ ಮತ್ತು ಮಾಂಸವನ್ನು ಬೇಡಿಕೆಯಿಡುತ್ತಿದ್ದ ಈ 'ಮಾಂಟಿ ಬಾಬಾ'ನ ನಂಬಿಕೆ ದ್ರೋಹದ ಕಥೆ ಬೆಚ್ಚಿಬೀಳಿಸುವಂತಿದೆ.
ಜಿಮ್ ಟ್ರೈನರ್ ಆಗಿದ್ದವನು 'ಮಾಂಟಿ ಬಾಬಾ' ಆಗಿದ್ದು ಹೇಗೆ?
ಮುಂಬೈನ ಮಲಾಡ್ (ಪೂರ್ವ) ಭಾಗದಲ್ಲಿ ರಿದಮ್ ಪಂಚಾಲ್ ಅಲಿಯಾಸ್ ಮಾಂಟಿ (37) ಎಂಬಾತನನ್ನು ದಿಂಡೋಶಿ ಪೊಲೀಸರು ಬಂಧಿಸಿದ್ದಾರೆ. ಈತನ ಕಥೆ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ನಾಲ್ಕು ವರ್ಷಗಳ ಹಿಂದೆ ಈತ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ದಿಢೀರನೆ ತನಗೆ ದೈವಿಕ ಶಕ್ತಿ ಬಂದಿದೆ ಎಂದು ಹೇಳಿಕೊಂಡು ಮಲಾಡ್‌ನ ಖಾಲಿ ನಿವೇಶನವೊಂದರಲ್ಲಿ 'ದರ್ಬಾರ್' ನಡೆಸಲು ಆರಂಭಿಸಿದ.
ಗುರುವಾರ ಮತ್ತು ಶನಿವಾರ ರಾತ್ರಿ 8 ರಿಂದ ಬೆಳಿಗ್ಗೆ 7 ರವರೆಗೆ ಈತ ಪೂಜೆ ನಡೆಸುತ್ತಿದ್ದ. ಬಾಯಲ್ಲಿ ಉರಿಯುತ್ತಿರುವ ಸಿಗರೇಟ್ ಹಿಡಿದುಕೊಂಡು, ಮೈಮೇಲೆ ದೇವಿ ಬಂದಿದ್ದಾಳೆ ಎಂದು ನಂಬಿಸಿ ಭಕ್ತರ ದಾರಿ ತಪ್ಪಿಸುತ್ತಿದ್ದ. ಈತ ಕೇವಲ ಹಣವನ್ನು ಮಾತ್ರ ಸುಲಿಗೆ ಮಾಡುತ್ತಿರಲಿಲ್ಲ. ಹಣದ ಜೊತೆಗೆ ದೆವ್ವ ಬಿಡಿಸಲು ಮತ್ತು ಸಂಕಷ್ಟ ನಿವಾರಿಸಲು ಭಕ್ತರಿಂದ ದುಬಾರಿ ಮದ್ಯ, ಸಿಗರೇಟು, ಬದುಕಿರುವ ಕೋಳಿಗಳು ಮತ್ತು ಮೇಕೆಯ ಲಿವರ್ ಅನ್ನು ಪಡೆಯುತ್ತಿದ್ದ.
ಸಂತಾನ ಭಾಗ್ಯವಿಲ್ಲದ ಮಹಿಳೆಯರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಶೋಷಣೆ ಮಾಡುತ್ತಿದ್ದ ಎಂಬ ಗಂಭೀರ ಆರೋಪ ಈತನ ಮೇಲಿದೆ. ಸುಮಾರು 60ಕ್ಕೂ ಹೆಚ್ಚು ಜನರ ದೂರಿನ ಮೇರೆಗೆ ಪೊಲೀಸರು ಈ ಹಗಲುಗಳ್ಳನನ್ನು ಅರೆಸ್ಟ್ ಮಾಡಿದ್ದಾರೆ.
ದೂರು ನೀಡಿದರೆ ಗೂಂಡಾಗಳ ಬೆದರಿಕೆ
ಈತನ ಬೇಡಿಕೆಗಳನ್ನು ಈಡೇರಿಸಲು ನಿರಾಕರಿಸಿದ ಅಥವಾ ಈತನ ಪೂಜಾ ಪದ್ಧತಿಯನ್ನು ಪ್ರಶ್ನಿಸಿದ ಭಕ್ತರ ಮನೆಗೆ ಈತ ಗೂಂಡಾಗಳನ್ನು ಕಳುಹಿಸಿ ಬೆದರಿಕೆ ಹಾಕುತ್ತಿದ್ದ ಎಂದು ಸಂತ್ರಸ್ತರು ದೂರಿದ್ದಾರೆ. ಇದರಿಂದಾಗಿ ದೀರ್ಘಕಾಲ ಯಾರೂ ಈತನ ವಿರುದ್ಧ ಧ್ವನಿ ಎತ್ತಿರಲಿಲ್ಲ.
ಪೊಲೀಸ್ ಕಾರ್ಯಾಚರಣೆ ಮತ್ತು ಬಂಧನ
ಸಂತ್ರಸ್ತರು ಮಾಜಿ ಬಿಜೆಪಿ ಕಾರ್ಪೊರೇಟರ್ ಮತ್ತು ವಕೀಲ ಸಿದ್ಧಾರ್ಥ ಶರ್ಮಾ ಅವರನ್ನು ಸಂಪರ್ಕಿಸಿದಾಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತು. ವಕೀಲರು ಪ್ರಕರಣದ ತನಿಖೆ ಆರಂಭಿಸುತ್ತಿದ್ದಂತೆ 60ಕ್ಕೂ ಹೆಚ್ಚು ಜನರು ದೂರು ನೀಡಲು ಮುಂದೆ ಬಂದರು. ಪೊಲೀಸರ ವಿಚಾರಣೆಯಲ್ಲಿ ಈತ ಈ ಹಿಂದೆ ಜಿಮ್ ಟ್ರೈನರ್ ಆಗಿದ್ದದ್ದು ಮತ್ತು ಹಣಕ್ಕಾಗಿ ದೇವಮಾನವನ ಸೋಗು ಹಾಕಿದ್ದದ್ದು ಸಾಬೀತಾಗಿದೆ.

