Mamata Banerjee | ಬಂಗಾಳದಲ್ಲಿ ಹೈಡ್ರಾಮಾ: ಸೋತರೂ ಕುರ್ಚಿ ಬಿಡಲ್ಲ ಎಂದ ಮಮತಾ! ಸಂವಿಧಾನ ಏನು ಹೇಳುತ್ತೆ?
x
ಮಮತಾ ಬ್ಯಾನರ್ಜಿ(ಸಂಗ್ರಹ ಚಿತ್ರ)

Mamata Banerjee | ಬಂಗಾಳದಲ್ಲಿ ಹೈಡ್ರಾಮಾ: ಸೋತರೂ ಕುರ್ಚಿ ಬಿಡಲ್ಲ ಎಂದ ಮಮತಾ! ಸಂವಿಧಾನ ಏನು ಹೇಳುತ್ತೆ?

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ನಂತರವೂ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಸಾಂವಿಧಾನಿಕ ವಿಧಿ 172ರ ಪ್ರಕಾರ ಮೇ 6ರ ಗಡುವು ಮೀರಿದರೆ ಏನಾಗುತ್ತದೆ?


ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎದುರು ಹೀನಾಯ ಸೋಲು ಅನುಭವಿಸಿದರೂ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಧಿಕಾರದಿಂದ ಕೆಳಗಿಳಿಯಲು ನಿರಾಕರಿಸುತ್ತಿರುವುದು ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. "ನಾನು ಕುರ್ಚಿಗೆ ಅಂಟಿಕೊಂಡಿಲ್ಲ, ಆದರೆ ನಾನು ಸೋತಿಲ್ಲ. ನಾನು ರಾಜೀನಾಮೆ ನೀಡಲ್ಲ" ಎಂಬ ಮಮತಾ ಅವರ ಹಠಮಾರಿ ನಿಲುವು ಈಗ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ.

ಮೇ 6ರ ಗಡುವು: ಏನಿದೆ ಕಾನೂನು?

ಪಶ್ಚಿಮ ಬಂಗಾಳದ ಹಾಲಿ ಸರ್ಕಾರದ ಅವಧಿ ಮೇ 6ಕ್ಕೆ ಅಂದರೆ ಇಂದು ಅಂತ್ಯಗೊಳ್ಳಲಿದೆ. ಸಾಂವಿಧಾನಿಕ ತಜ್ಞರು ಮತ್ತು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ಅವರ ಪ್ರಕಾರ, ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡದಿದ್ದರೂ ಸಾಂವಿಧಾನಿಕವಾಗಿ ಅವರು ಮೇ 6ರ ನಂತರ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ.

ಸಂವಿಧಾನ ಹೇಳೋದೇನು?

ಪ್ರತಿ ವಿಧಾನಸಭಾ ಅವಧಿಯು ಅದರ ಮೊದಲ ಸಭೆಯಿಂದ ಐದು ವರ್ಷಗಳವರೆಗೆ ಮಾತ್ರ ಇರುತ್ತದೆ. ಐದು ವರ್ಷ ಮುಗಿದ ತಕ್ಷಣ ವಿಧಾನಸಭೆಯು ತನ್ನಷ್ಟಕ್ಕೆ ತಾನೇ ವಿಸರ್ಜನೆಯಾಗುತ್ತದೆ. ಅಂದರೆ, ಮೇ 7ರಂದು ಬಂಗಾಳ ವಿಧಾನಸಭೆ ಮತ್ತು ಸರ್ಕಾರ ಅಧಿಕೃತವಾಗಿ ಅಸ್ತಿತ್ವ ಕಳೆದುಕೊಳ್ಳುತ್ತವೆ. ಮಮತಾ ಅವರು ರಾಜೀನಾಮೆ ನೀಡದಿದ್ದರೆ, ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸುವ ಹಕ್ಕನ್ನು ಹೊಂದಿದ್ದಾರೆ.

ಚುನಾವಣಾ ಫಲಿತಾಂಶ ಪ್ರಶ್ನಿಸಲು ಸಾಧ್ಯವೇ?

ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗದ ವಿರುದ್ಧ 'ಮತಗಳ ಲೂಟಿ' ಆರೋಪ ಮಾಡಿದ್ದು, ಫಲಿತಾಂಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದಾರೆ. ಕಾನೂನು ತಜ್ಞರ ಪ್ರಕಾರ, ಚುನಾವಣಾ ಅರ್ಜಿಯನ್ನು (Election Petition) ಸಲ್ಲಿಸಲು ಅವಕಾಶವಿದೆ. ಆದರೆ, ಇದು ಸುದೀರ್ಘ ಪ್ರಕ್ರಿಯೆಯಾಗಿದ್ದು, ಇದು ಮುಖ್ಯಮಂತ್ರಿಗಳ ರಾಜೀನಾಮೆ ಅಥವಾ ಹೊಸ ಸರ್ಕಾರ ರಚನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನ್ಯಾಯಾಲಯವು ಅಕ್ರಮಗಳನ್ನು ಒಪ್ಪಿ ಫಲಿತಾಂಶವನ್ನು ರದ್ದುಗೊಳಿಸುವವರೆಗೆ, ಘೋಷಿತ ಫಲಿತಾಂಶವೇ ಅಂತಿಮವಾಗಿರುತ್ತದೆ.

ಸೋಲಿಗೆ ಕಾರಣವಾದ ಅಂಶಗಳು

ಟಿಎಂಸಿಯ ಈ ಭೀಕರ ಸೋಲಿಗೆ ಹಲವಾರು ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ.

1. ಆರ್.ಜಿ. ಕರ್ ಪ್ರಕರಣ: ಕೋಲ್ಕತ್ತಾದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಸರ್ಕಾರದ ವಿರುದ್ಧ ಮಹಿಳೆಯರಲ್ಲಿ ತೀವ್ರ ಆಕ್ರೋಶ ಹುಟ್ಟುಹಾಕಿತ್ತು.

2. ಆಡಳಿತ ವಿರೋಧಿ ಅಲೆ: ಭ್ರಷ್ಟಾಚಾರ ಮತ್ತು ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿರುವ ಆರೋಪಗಳು ಟಿಎಂಸಿಗೆ ಮುಳುವಾದವು.

3. ಸುವೇಂದು ಅಧಿಕಾರಿ ಪ್ರಭಾವ: ಮಮತಾ ಅವರ ಭದ್ರಕೋಟೆ ಭಬಾನಿಪುರದಲ್ಲೇ ಸುವೇಂದು ಅವರು ದೀದಿಯನ್ನು ಸೋಲಿಸಿರುವುದು ಬಿಜೆಪಿಗೆ ದೊಡ್ಡ ಬಲ ನೀಡಿದೆ.

ಬಿಜೆಪಿ ಅಬ್ಬರ - ಟಿಎಂಸಿ ಕುಸಿತ

ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತ ಪಡೆದಿದ್ದರೆ, ಟಿಎಂಸಿ ಕೇವಲ 80 ಸ್ಥಾನಗಳಿಗೆ ಸೀಮಿತವಾಗಿದೆ. ಮಮತಾ ಬ್ಯಾನರ್ಜಿ ಅವರು ಭಬಾನಿಪುರ ಎಣಿಕೆ ಕೇಂದ್ರದಲ್ಲಿ ಸಿಆರ್‌ಪಿಎಫ್ ಪಡೆಗಳು ತಮ್ಮ ಮೇಲೆ ಹಲ್ಲೆ ನಡೆಸಿವೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.

ರಾಜಕೀಯವಾಗಿ ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆಯ ಹಾದಿ ಹಿಡಿದಿದ್ದರೂ, ಕಾನೂನಾತ್ಮಕವಾಗಿ ಮೇ 6ರ ನಂತರ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ವಿಜಯ್ ಅವರ ಹವಾ ಆರಂಭವಾಗಿದ್ದರೆ, ಇತ್ತ ಬಂಗಾಳದಲ್ಲಿ ಮಮತಾ ಯುಗ ಅಂತ್ಯದ ಲಕ್ಷಣಗಳು ಕಾಣುತ್ತಿವೆ.

Read More
Next Story