ಸರ್ಕಾರಿ ಉದ್ಯೋಗಿ ಮೇಲೆ ಡೆಡ್ಲಿ ಅಟ್ಯಾಕ್‌! ನಡುರಸ್ತೆಯಲ್ಲೇ 8 ಬಾರಿ ಕತ್ತಿಯಿಂದ ದಾಳಿ
x

ಸರ್ಕಾರಿ ಉದ್ಯೋಗಿ ಮೇಲೆ ಡೆಡ್ಲಿ ಅಟ್ಯಾಕ್‌! ನಡುರಸ್ತೆಯಲ್ಲೇ 8 ಬಾರಿ ಕತ್ತಿಯಿಂದ ದಾಳಿ

ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ 27 ವರ್ಷದ ಮಹಿಳಾ ಸರ್ಕಾರಿ ಉದ್ಯೋಗಿ ಮೇಲೆ ವ್ಯಕ್ತಿಯೊಬ್ಬ ಕುಡುಗೋಲಿನಿಂದ ಭೀಕರ ಹಲ್ಲೆ ನಡೆಸಿದ್ದಾನೆ. ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.


Click the Play button to hear this message in audio format

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಕತ್ತಿಯಿಂದ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿಯನ್ನು ಅಮೋಲ್ ಮುಳೆ ಎಂದು ಗುರುತಿಸಲಾಗಿದ್ದು, ಆತ ನ್ಯಾಯಾಲಯದ ಸಿಬ್ಬಂದಿಯಾಗಿ (ಪಿಯಾನ್) ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ರಸ್ತೆಯಲ್ಲೇ ನಡೆದ ಭೀಕರ ದಾಳಿ

ಶುಕ್ರವಾರ ಸಂಜೆ ಸುಮಾರು 6.15ರ ವೇಳೆಗೆ ಈ ಘಟನೆ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಸ್ನೇಹಲ್ ಸಾವಂತ್ ಎಂದು ಗುರುತಿಸಲಾಗಿದ್ದು, ಅವರು ಪಾಲ್ಘರ್ ಜಿಲ್ಲಾಧಿಕಾರಿ ಕಚೇರಿಯ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪೊಲೀಸರ ಮಾಹಿತಿ ಪ್ರಕಾರ, ಸ್ನೇಹಲ್ ಸಾವಂತ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಯು ಹಿಂದಿನಿಂದ ಓಡಿ ಬಂದು ಏಕಾಏಕಿ ದಾಳಿ ನಡೆಸಿದ್ದಾನೆ. ಕುಡುಗೋಲಿನಿಂದ ಕುತ್ತಿಗೆ, ಬೆನ್ನು, ಭುಜ ಹಾಗೂ ಸೊಂಟದ ಭಾಗಗಳಿಗೆ ಸುಮಾರು ಎಂಟು ಬಾರಿ ಹಲ್ಲೆ ನಡೆಸಿದ್ದಾನೆ. ಮಹಿಳೆ ನೆಲಕ್ಕೆ ಬಿದ್ದ ನಂತರವೂ ಆರೋಪಿಯು ದಾಳಿ ಮುಂದುವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆ

ಘಟನೆಯ ಸಂಪೂರ್ಣ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲ್ಲೆಯ ನಂತರ ಆರೋಪಿಯು ತನ್ನ ಬ್ಯಾಗ್ ಮತ್ತು ಬಳಸಿದ ಆಯುಧವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಗಾಯಗೊಂಡ ಮಹಿಳೆ ರಸ್ತೆಯಲ್ಲಿ ಬಿದ್ದಿರುವುದನ್ನು ಗಮನಿಸಿದ ದಾರಿಹೋಕನೊಬ್ಬ ಕೂಡಲೇ ನೆರವಿಗೆ ಧಾವಿಸಿದ್ದಾನೆ. ಕೆಲವೇ ನಿಮಿಷಗಳಲ್ಲಿ ಸ್ಥಳದಲ್ಲಿ ಹಲವರು ಸೇರಿದ್ದರು.

ಮಹಿಳೆಯ ಸ್ಥಿತಿ ಗಂಭೀರ

ಮೊದಲು ಗಾಯಾಳುವನ್ನು ಪಾಲ್ಘರ್ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಾಯಗಳ ತೀವ್ರತೆ ಹೆಚ್ಚಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ತನಿಖೆ ಆರಂಭ

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಪಾಲ್ಘರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ವಿಧಿ ವಿಜ್ಞಾನ (ಫೊರೆನ್ಸಿಕ್) ತಂಡವೂ ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಪಾಲ್ಘರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್‌ ದೇಶ್‌ಮುಖ್‌ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ.

ದಾಳಿಗೆ ಕಾರಣವೇನು?

ಮಹಿಳೆಯ ಮೇಲೆ ಈ ರೀತಿಯ ಭೀಕರ ದಾಳಿ ನಡೆಸಲು ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈಯಕ್ತಿಕ ದ್ವೇಷ, ಕಚೇರಿ ಸಂಬಂಧಿತ ವಿವಾದ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದ ಬಳಿಕದಿಂದ ಆರೋಪಿಯು ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ವಿಶೇಷ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More
Next Story