Maharashtra MLA | ಸರ್ಕಾರಿ ಅಧಿಕಾರಿಗೆ ಕೆಸರು ಎರಚಿದ ಪ್ರಕರಣ: ಶಾಸಕನಿಗೆ ಜೈಲು ಶಿಕ್ಷೆ
x
ಸರ್ಕಾರಿ ಅಧಿಕಾರಿಗೆ ಕೆಸರು ಎರಚಿದ ಬಿಜೆಪಿ ಶಾಸಕ ನಿತೇಶ್ ರಾಣೆ

Maharashtra MLA | ಸರ್ಕಾರಿ ಅಧಿಕಾರಿಗೆ ಕೆಸರು ಎರಚಿದ ಪ್ರಕರಣ: ಶಾಸಕನಿಗೆ ಜೈಲು ಶಿಕ್ಷೆ

ಸರ್ಕಾರಿ ಅಧಿಕಾರಿಯ ಮೇಲೆ ಕೆಸರು ಎರಚಿ ಅವಮಾನಿಸಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ್ ರಾಣೆಗೆ 1 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.


ಸುಮಾರು ಏಳು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಯ ಮೇಲೆ ಕೆಸರು ಎರಚಿ, ಸಾರ್ವಜನಿಕವಾಗಿ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ನಿತೇಶ್ ರಾಣೆ ಅವರಿಗೆ ಸಿಂಧುದುರ್ಗದ ನ್ಯಾಯಾಲಯ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ನಡೆದಿದ್ದೇನು?

ಜುಲೈ 4, 2019 ರಂದು ಮುಂಬೈ-ಗೋವಾ ಹೆದ್ದಾರಿಯ ಕಳಪೆ ಕಾಮಗಾರಿಯಿಂದ ಆಕ್ರೋಶಗೊಂಡಿದ್ದ ನಿತೇಶ್ ರಾಣೆ (ಆಗ ಕಾಂಗ್ರೆಸ್‌ನಲ್ಲಿದ್ದರು), ಕಂಕವಲಿ ಸಮೀಪದ ಗಡ್ ನದಿಯ ಸೇತುವೆಯ ಮೇಲೆ ಎನ್‌ಎಚ್‌ಎಐ ಇಂಜಿನಿಯರ್ ಪ್ರಕಾಶ್ ಶೆಡೇಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ರಾಣೆ ಬೆಂಬಲಿಗರು ಅಧಿಕಾರಿಯ ತಲೆಯ ಮೇಲೆ ಬಕೆಟ್‌ಗಟ್ಟಲೇ ಕೆಸರನ್ನು ಸುರಿದು, ಅವರನ್ನು ಸೇತುವೆಗೆ ಕಟ್ಟಿಹಾಕಲು ಯತ್ನಿಸಿದ್ದರು. ಅಲ್ಲದೆ ಸಾರ್ವಜನಿಕವಾಗಿ ಕೆಸರಿನಲ್ಲೇ ನಡೆಸುವ ಮೂಲಕ ಅಧಿಕಾರಿಯನ್ನು ಅವಮಾನಿಸಲಾಗಿತ್ತು.

ನ್ಯಾಯಾಲಯದ ಮಹತ್ವದ ಅಭಿಪ್ರಾಯ

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ವಿ.ಎಸ್. ದೇಶ್‌ಮುಖ್ ಅವರು ಈ ತೀರ್ಪನ್ನು ನೀಡಿದ್ದು, ಶಾಸಕರ ನಡವಳಿಕೆಯ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ. ಜನಪ್ರತಿನಿಧಿಗಳು ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಕಳಪೆ ಕಾಮಗಾರಿ ವಿರುದ್ಧ ಧ್ವನಿ ಎತ್ತುವುದು ಸರಿ, ಆದರೆ ಸರ್ಕಾರಿ ಅಧಿಕಾರಿಯನ್ನು ಸಾರ್ವಜನಿಕವಾಗಿ ಅವಮಾನಿಸುವುದು ಅಧಿಕಾರ ದುರುಪಯೋಗ ಎಂದು ಕೋರ್ಟ್ ಹೇಳಿದೆ.

ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯನ್ನು ಕೆಸರಿನಲ್ಲಿ ನಡೆಸಿದ್ದು ಅವರಿಗೆ ಮಾಡಿದ ಉದ್ದೇಶಪೂರ್ವಕ ಅವಮಾನವಾಗಿದೆ. ಇಂತಹ ಘಟನೆಗಳು ನಡೆದರೆ ಸರ್ಕಾರಿ ನೌಕರರು ಗೌರವದಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷೆಯ ವಿವರ

ನಿತೇಶ್ ರಾಣೆ ಸೇರಿದಂತೆ ಒಟ್ಟು 30 ಜನರ ಮೇಲೆ ಗಲಭೆ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಲಾಗಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ ಬಹುತೇಕ ಆರೋಪಗಳಿಂದ ಅವರು ಖುಲಾಸೆಗೊಂಡಿದ್ದರೂ, ಐಪಿಸಿ ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ ಮತ್ತು ಶಾಂತಿ ಭಂಗದ ಪ್ರಚೋದನೆ) ಅಡಿಯಲ್ಲಿ ದೋಷಿ ಎಂದು ಘೋಷಿಸಲಾಗಿದೆ. ನ್ಯಾಯಾಲಯವು ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದರೂ, ಮೇಲ್ಮನವಿ ಸಲ್ಲಿಸಲು ಈ ಶಿಕ್ಷೆಯನ್ನು ಸದ್ಯಕ್ಕೆ ಅಮಾನತುಗೊಳಿಸಿದೆ.

ಹಳೆಯ ವಿವಾದಗಳ ಸರಮಾಲೆ

ನಿತೇಶ್ ರಾಣೆ ಅವರಿಗೆ ವಿವಾದಗಳು ಹೊಸದೇನಲ್ಲ. 2017ರಲ್ಲಿ ಮೀನುಗಾರರ ಸಮಸ್ಯೆಗಳ ಕುರಿತು ನಡೆದ ಸಭೆಯಲ್ಲಿ ಅಧಿಕಾರಿಯೊಬ್ಬರ ಮೇಲೆ ಸತ್ತ ಮೀನನ್ನು ಎಸೆದು ಸುದ್ದಿಯಾಗಿದ್ದರು. ಆಗಲೂ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದ ಅವರು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಇದು ನನ್ನ ಪ್ರತಿಭಟನೆ ಎಂದಿದ್ದರು. ಮಾಜಿ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರರಾಗಿರುವ ನಿತೇಶ್ ರಾಣೆ, ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು.

Read More
Next Story