Boat Tragedy | ಅಣೆಕಟ್ಟೆಯಲ್ಲಿ ಪ್ರವಾಸಿ ದೋಣಿ ಮುಳುಗಿ ನಾಲ್ವರ ಸಾವು, ಹಲವರು ನಾಪತ್ತೆ
x
ಮಧ್ಯ ಪ್ರದೇಶದಲ್ಲಿ ದೋಣಿ ದುರಂತ

Boat Tragedy | ಅಣೆಕಟ್ಟೆಯಲ್ಲಿ ಪ್ರವಾಸಿ ದೋಣಿ ಮುಳುಗಿ ನಾಲ್ವರ ಸಾವು, ಹಲವರು ನಾಪತ್ತೆ

ಮಧ್ಯಪ್ರದೇಶದ ಜಬಲ್‌ಪುರದ ಬರ್ಗಿ ಅಣೆಕಟ್ಟೆಯಲ್ಲಿ ಬಿರುಗಾಳಿಗೆ ಸಿಲುಕಿ ಪ್ರವಾಸಿ ದೋಣಿ ಮುಳುಗಡೆಯಾಗಿದೆ. ಈ ಭೀಕರ ದುರಂತದಲ್ಲಿ ನಾಲ್ವರು ಸಾವನ್ನಪ್ಪಿದ್ದು, 10 ಪ್ರವಾಸಿಗರು ನಾಪತ್ತೆಯಾಗಿದ್ದಾರೆ.


ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ಬರ್ಗಿ ಅಣೆಕಟ್ಟೆಯ ಜಲಾಶಯದಲ್ಲಿ 29 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಪ್ರವಾಸಿ ದೋಣಿಯೊಂದು (River Cruise) ಬಿರುಗಾಳಿಗೆ ಸಿಲುಕಿ ಮಗುಚಿ ಬಿದ್ದಿದೆ. ಈ ಭೀಕರ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, 15 ಮಂದಿಯನ್ನು ರಕ್ಷಿಸಲಾಗಿದೆ. ಉಳಿದ 10 ಪ್ರವಾಸಿಗರು ಇನ್ನೂ ನಾಪತ್ತೆಯಾಗಿದ್ದಾರೆ.

ಘಟನೆಯ ವಿವರ

ಬುಧವಾರ ಸಂಜೆ 6 ರಿಂದ 6:15ರ ಸುಮಾರಿಗೆ ಈ ಘಟನೆ ನಡೆದಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ದೋಣಿಯಲ್ಲಿದ್ದ 29 ಪ್ರವಾಸಿಗರಿಗೆ ಟಿಕೆಟ್ ನೀಡಲಾಗಿತ್ತು ಮತ್ತು ಇಬ್ಬರು ಸಿಬ್ಬಂದಿ ದೋಣಿಯಲ್ಲಿದ್ದರು. ದಿಢೀರ್ ಅಪ್ಪಳಿಸಿದ ತೀವ್ರ ಬಿರುಗಾಳಿಯಿಂದಾಗಿ ದೋಣಿ ನಿಯಂತ್ರಣ ತಪ್ಪಿ ಜಲಾಶಯದ ಮಧ್ಯಭಾಗದಲ್ಲಿ ಮುಳುಗಿದೆ.

ಗುರುವಾರ ಮುಂಜಾನೆಯಿಂದಲೇ ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಮತ್ತು ಸ್ಥಳೀಯ ಆಡಳಿತದ ವತಿಯಿಂದ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಜಬಲ್‌ಪುರ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಸರ್ಕಾರದಿಂದ ಪರಿಹಾರ ಘೋಷಣೆ

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಈ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಸಚಿವರಾದ ರಾಕೇಶ್ ಸಿಂಗ್ ಮತ್ತು ಧರ್ಮೇಂದ್ರ ಸಿಂಗ್ ಲೋಧಿ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಲು ಸೂಚಿಸಲಾಗಿದೆ. "ಈ ಬಿಕ್ಕಟ್ಟಿನ ಸಮಯದಲ್ಲಿ ರಾಜ್ಯ ಸರ್ಕಾರವು ಸಂತ್ರಸ್ತ ಕುಟುಂಬಗಳ ಜೊತೆ ನಿಲ್ಲಲಿದೆ" ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಭಯಾನಕ ಅನುಭವ

ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ದೋಣಿ ಚಾಲಕನ ನಿರ್ಲಕ್ಷ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ: "ಗಾಳಿ ತೀವ್ರವಾಗಿ ಬೀಸುತ್ತಿತ್ತು. ದೋಣಿಯನ್ನು ದಡಕ್ಕೆ ತರುವಂತೆ ನಾವು ಚಾಲಕನಿಗೆ ಕೂಗಿ ಹೇಳಿದೆವು. ಆದರೆ ಆತ ಕೇಳಿಸಿಕೊಳ್ಳಲಿಲ್ಲ. ಜಲಾಶಯದ ಮಧ್ಯಭಾಗಕ್ಕೆ ಹೋದಾಗ ದೋಣಿ ಮಗುಚಿತು. ಲೈಫ್ ಜಾಕೆಟ್ ಧರಿಸಿದ್ದ ಕೆಲವರು ನೀರಿನಲ್ಲಿ ಜಿಗಿದರು. ನಾವು ಸುಮಾರು 15-16 ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದೆವು" ಎಂದು ಒಬ್ಬ ಪ್ರಯಾಣಿಕ ಹೇಳಿದ್ದಾನೆ.

"ಬಿರುಗಾಳಿ ಬೀಸುತ್ತಿದ್ದಾಗ ದೋಣಿ ಅಲುಗಾಡುತ್ತಿತ್ತು. ಚಾಲಕನಿಗೆ ದೋಣಿಯನ್ನು ಇಲ್ಲೇ ಕಟ್ಟಿಹಾಕುವಂತೆ ಜನರು ಕೇಳಿಕೊಂಡರು. ಆದರೆ ಆತ ಮತ್ತೆ ದೋಣಿಯನ್ನು ನೀರಿನ ಮಧ್ಯಕ್ಕೆ ಕೊಂಡೊಯ್ದಿದ್ದರಿಂದ ಈ ಅವಘಡ ಸಂಭವಿಸಿತು. ನಾನು ವೈಯಕ್ತಿಕವಾಗಿ 5-6 ಜನರನ್ನು ರಕ್ಷಿಸಿದೆ" ಎಂದು ಮತ್ತೊರ್ವ ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದಾನೆ.

ಸ್ಥಳೀಯರು ಹಗ್ಗಗಳ ಸಹಾಯದಿಂದ ನೀರಿನಲ್ಲಿ ಮುಳುಗುತ್ತಿದ್ದವರನ್ನು ದಡಕ್ಕೆ ಎಳೆದು ತರುವ ಮೂಲಕ ಹೆಚ್ಚಿನ ಸಾವು-ನೋವು ತಪ್ಪಿಸಲು ಪ್ರಯತ್ನಿಸಿದ್ದಾರೆ. ಸದ್ಯ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Read More
Next Story