
ರಸ್ತೆಯಲ್ಲಿದ್ದ ದನಗಳನ್ನು ರಕ್ಷಿಸಲು ಹೋಗಿ ಭೀಕರ ಅಪಘಾತ- 8 ಕಾರ್ಮಿಕರು ಸಾವು
ಚಿಮ್ಕಾ ಗ್ರಾಮದ ಬಳಿ ಸಾಗುವಾಗ ರಸ್ತೆಯಲ್ಲಿದ್ದ ಜಾನುವಾರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ವಾಹನ, ಎದುರಿನಿಂದ ಬಂದ ಟ್ರಕ್‌ಗೆ ನೇರವಾಗಿ ಡಿಕ್ಕಿಯಾಗಿದೆ.
ರಸ್ತೆಯಲ್ಲಿದ್ದ ದನಗಳನ್ನು ರಕ್ಷಿಸಲು ಹೋಗಿ ಲೋಡಿಂಗ್ ವಾಹನವೊಂದು ಎದುರಿನಿಂದ ಬಂದ ಟ್ರಕ್‌ಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎಂಟು ಜನ ಕಾರ್ಮಿಕರು ಮೃತಪಟ್ಟಿರುವ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 22ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 719ರ ಗೋಹದ್ ಚೌರಾಹಾ ಪೊಲೀಸ್ ಠಾಣೆ ವ್ಯಾಪ್ತಿಯ ಚಿಮ್ಕಾ ಗ್ರಾಮದ ಬಳಿ ಬೆಳಗಿನ ಜಾವ ಈ ದುರಂತ ನಡೆದಿದೆ. ಅಪಘಾತದ ರಭಸಕ್ಕೆ ಲೋಡಿಂಗ್ ವಾಹನ ಸಂಪೂರ್ಣವಾಗಿ ಛಿದ್ರಗೊಂಡಿದೆ.
ಘಟನೆ ವಿವರ
ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಪಚ್‌ಗವಾನ್ ಗ್ರಾಮದ ಕಾರ್ಮಿಕರು ಗ್ವಾಲಿಯರ್‌ನ ಚಿನೋರ್ ಗ್ರಾಮದಲ್ಲಿ ಭತ್ತ ನಾಟಿ ಕೆಲಸ ಮುಗಿಸಿಕೊಂಡು ತಮ್ಮ ಮನೆಗೆ ಹಿಂತಿರುಗುತ್ತಿದ್ದರು. ಚಿಮ್ಕಾ ಗ್ರಾಮದ ಬಳಿ ಸಾಗುವಾಗ ರಸ್ತೆಯಲ್ಲಿದ್ದ ಜಾನುವಾರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ವಾಹನ, ಎದುರಿನಿಂದ ಬಂದ ಟ್ರಕ್‌ಗೆ ನೇರವಾಗಿ ಡಿಕ್ಕಿಯಾಗಿದೆ.
ಸ್ಥಳದಲ್ಲೇ ಐವರ ಸಾವು: ರಕ್ಷಣಾ ಕಾರ್ಯಾಚರಣೆ
ಅಪಘಾತ ಸಂಭವಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಗೋಹದ್ ಚೌರಾಹಾ ಠಾಣಾಧಿಕಾರಿ ರಾಮನರೇಶ್ ಯಾದವ್ ಹಾಗೂ ಸಿಬ್ಬಂದಿ, ಸ್ಥಳೀಯರ ನೆರವಿನಿಂದ ವಾಹನದಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದರು. 5 ಜನರು ಸ್ಥಳದಲ್ಲೇ ಅಸುನೀಡಿದ್ದು, 108 ಹಾಗೂ 112 ಆಂಬ್ಯುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಗೋಹಡ್ ಆರೋಗ್ಯ ಕೇಂದ್ರ ಹಾಗೂ ಗ್ವಾಲಿಯರ್ ಆಸ್ಪತ್ರೆಗೆ ರವಾನಿಸಲಾಯಿತು. ಗ್ವಾಲಿಯರ್‌ಗೆ ಕರೆದೊಯ್ಯುವ ಮಾರ್ಗಮಧ್ಯೆ ಮತ್ತಿಬ್ಬರು ಹಾಗೂ ಚಿಕಿತ್ಸೆ ಫಲಿಸದೆ ಒಬ್ಬರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಗಾಯಗೊಂಡ 22 ಜನರಲ್ಲಿ ಕೆಲವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ. ಘಟನೆಗೆ ರಸ್ತೆಯಲ್ಲಿದ್ದ ಜಾನುವಾರುಗಳಷ್ಟೇ ಅಲ್ಲದೆ ವಾಹನಗಳ ಅತಿಯಾದ ವೇಗವೂ ಕಾರಣವೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

