
ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ
ಲಕ್ನೋದ ವಾಣಿಜ್ಯ ಸಂಕೀರ್ಣದಲ್ಲಿ ಭೀಕರ ಅಗ್ನಿ ಅನಾಹುತ; ನಾಲ್ವರು ಸಜೀವ ದಹನ, ಹಲವರಿಗೆ ಗಾಯ
ಕಟ್ಟಡದಲ್ಲಿ ಕೋಚಿಂಗ್ ಇನ್‌ಸ್ಟಿಟ್ಯೂಟ್, ಲೈಬ್ರರಿ, ಕಂಪ್ಯೂಟರ್ ತರಬೇತಿ ಕೇಂದ್ರ ಹಾಗೂ ಗೇಮಿಂಗ್ ವಲಯ ಕಾರ್ಯನಿರ್ವಹಿಸುತ್ತಿತ್ತು. ಮೊದಲ ಮಹಡಿಯಿಂದ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ.
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಭೀಕರ ಅಗ್ನಿ ಅನಾಹುತ ಸಂಭವಿಸಿದೆ. ನಗರದ ಜನನಿಬಿಡ ಅಲಿಗಂಜ್ ಪ್ರದೇಶದಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಸಂಕೀರ್ಣದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ನಾಲ್ವರು ಸಜೀವ ದಹನವಾಗಿದ್ದಾರೆ ಎಂದು ವರದಿಯಾಗಿದೆ. ಬೆಂಕಿಯ ಜ್ವಾಲೆಗೆ ಇಡೀ ಪ್ರದೇಶವೇ ಬೆಚ್ಚಿಬಿದ್ದಿದ್ದು, ಸ್ಥಳದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಅಲಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಉಷಾ ಮೆಹ್ತಾ ಮಾರ್ಗದಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಸೋಮವಾರ (ಜೂ.22) ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಈ ದುರಂತ ಸಂಭವಿಸಿದೆ. ಈ ಕಟ್ಟಡದಲ್ಲಿ ಕೋಚಿಂಗ್ ಇನ್‌ಸ್ಟಿಟ್ಯೂಟ್, ಲೈಬ್ರರಿ, ಕಂಪ್ಯೂಟರ್ ತರಬೇತಿ ಕೇಂದ್ರ ಹಾಗೂ ಗೇಮಿಂಗ್ ವಲಯ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ. ಮೊದಲ ಮಹಡಿಯಿಂದ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ರಕ್ಷಣಾ ಕಾರ್ಯಾಚರಣೆ ತೀವ್ರಗತಿಯಲ್ಲಿ ಸಾಗಿದೆ. ಕಟ್ಟಡದೊಳಗೆ ಇನ್ನೂ ಹಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೊದಲ ಮಹಡಿಯಿಂದ ಜಿಗಿದ ಜನ!
ಬೆಂಕಿ ತಗುಲಿದ ತಕ್ಷಣವೇ ಕಟ್ಟಡದಾದ್ಯಂತ ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿದ್ದು, ಒಳಗೆ ಸಿಲುಕಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿದ್ದಾರೆ. ಹೊರಬರಲು ದಾರಿಯಿಲ್ಲದೆ, ಪ್ರಾಣಭಯದಿಂದ ಕೆಲವರು ಮೊದಲ ಮಹಡಿಯಿಂದ ಕೆಳಗೆ ಜಿಗಿಯುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ. "ಇಲ್ಲಿ ಲೈಬ್ರರಿ ಮತ್ತು ಕಂಪ್ಯೂಟರ್ ಕೋರ್ಸ್ ಸಂಸ್ಥೆ ಇದೆ. ನಾವು ಸ್ಥಳಕ್ಕೆ ಬಂದಾಗ ಕಟ್ಟಡದಿಂದ ದಟ್ಟ ಹೊಗೆ ಬರುತ್ತಿತ್ತು. ತಕ್ಷಣವೇ ನಾವು 5-6 ಜನರನ್ನು ಸುರಕ್ಷಿತವಾಗಿ ರಕ್ಷಿಸಿದೆವು. ಬೆಂಕಿ ಹೊತ್ತಿಕೊಂಡ ತಕ್ಷಣ ಗಾಬರಿಯಿಂದ ಒಬ್ಬರು ಮೇಲಿನಿಂದ ಕೆಳಗೆ ಜಿಗಿದರು, ಅವರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಕೆಲವು ಜನರು ಒಳಗೆ ಸಿಲುಕಿರುವ ಸಾಧ್ಯತೆಯಿದೆ," ಎಂದು ಪ್ರತ್ಯಕ್ಷದರ್ಶಿ ಅಮನ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು
ಅಗ್ನಿ ಅವಘಡದ ಮಾಹಿತಿ ಸಿಗುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಹೈಡ್ರಾಲಿಕ್ ಪ್ಲಾಟ್‌ಫಾರ್ಮ್ ವಾಹನ ಸೇರಿದಂತೆ 14ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿದ್ದು, ಬೆಂಕಿ ನಂದಿಸುವ ಹಾಗೂ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಕ್ಷಣಾ ಕಾರ್ಯ ಚುರುಕುಗೊಳಿಸಲು ಸಿಎಂ ಸೂಚನೆ
ಇನ್ನು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಮತ್ತು ಗಾಯಗೊಂಡವರಿಗೆ ವಿಳಂಬವಿಲ್ಲದೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದ್ದರೂ, ದುರಂತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಭದ್ರತಾ ದೃಷ್ಟಿಯಿಂದ ಸುತ್ತಮುತ್ತಲಿನ ಆಸ್ಪತ್ರೆಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ಅಲರ್ಟ್ ಮಾಡಲಾಗಿದೆ.

