Complete ban on entry of tourists to waterfalls and forest areas in Khanapur taluk
x

ಮೈತುಂಬಿ ಹರಿಯುತ್ತಿರುವ ಕಣಕುಂಬಿ ಹೊರವಲಯದ ಪ್ರಸಿದ್ಧ ಡೆಲ್ಟಾ ಫಾಲ್ಸ್

ಖಾನಾಪುರ ತಾಲೂಕಿನ ಜಲಪಾತ, ಅರಣ್ಯ ಪ್ರದೇಶಗಳಿಗೆ ಪ್ರವಾಸಿಗರ ಪ್ರವೇಶ ಸಂಪೂರ್ಣ ನಿಷೇಧ

ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಸದ್ಯ ಜಲಪಾತಗಳಿಗೆ ಹೋಗುವ ಎಲ್ಲಾ ಪ್ರಮುಖ ರಸ್ತೆಗಳು ಹಾಗೂ ಕಾಲುದಾರಿಗಳಲ್ಲಿ ಕಟ್ಟುನಿಟ್ಟಿನ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದಾರೆ.


Click the Play button to hear this message in audio format

ಪಶ್ಚಿಮ ಘಟ್ಟದ ತಡೆರಹಿತ ಮಳೆಯ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಜಲಪಾತಗಳು ಮತ್ತು ಅರಣ್ಯ ಪ್ರದೇಶಗಳಿಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶವನ್ನು ಅರಣ್ಯ ಇಲಾಖೆ ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ನಿಷೇಧಿಸಿದೆ.

ಕಳೆದ ಕೆಲವು ದಿನಗಳಿಂದ ಖಾನಾಪುರ, ಜಾಂಬೋಟಿ, ಕಣಕುಂಬಿ ಮತ್ತು ಭೀಮಗಡ ವನ್ಯಜೀವಿ ಅಭಯಾರಣ್ಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ. ಕಾಡಿನೊಳಗಿನ ರಸ್ತೆಗಳು ಜಾರಿಕೆಯಾಗಿದ್ದು, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಈ ಕಠಿಣ ಆದೇಶ ಹೊರಡಿಸಿದ್ದಾರೆ.

ನಿಷೇಧಿತ ಜಲಪಾತಗಳು ಯಾವುವು?

ಖಾನಾಪುರ ತಾಲೂಕಿನ ದಟ್ಟ ಅರಣ್ಯದಲ್ಲಿರುವ ಒಟ್ಟು 9 ಪ್ರಮುಖ ಜಲಪಾತಗಳನ್ನು ‘ಸಂರಕ್ಷಿತ ವಲಯ’ಎಂದು ಘೋಷಿಸಲಾಗಿದ್ದು, ಇವುಗಳಿಗೆ ಸಾರ್ವಜನಿಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ತಡೆಯಲಾಗಿದೆ. ಬೆಟಣೆ ಜಲಪಾತ, ಚಿಕಲೆ ಜಲಪಾತ, ಚೋರ್ಲಾ ಜಲಪಾತ, ಬಟವಾಡೆ ಜಲಪಾತ ಹಾಗೂ ಕಣಕುಂಬಿ ಹೊರವಲಯದ ಪ್ರಸಿದ್ಧ ಡೆಲ್ಟಾ ಫಾಲ್ಸ್ ಹಾಗೂ ಪರಿಸರದ ಇತರೆ ಪ್ರಕೃತಿ ಧಾಮಗಳಿಗೆ ನಿಷೇಧ ಹೇರಲಾಗಿದೆ.

ಕಠಿಣ ಕ್ರಮಕ್ಕೆ ಕಾರಣವೇನು?

ಇತ್ತೀಚೆಗಷ್ಟೇ ಬೆಳಗಾವಿಯ ಯುವಕನೊಬ್ಬ ಗೋವಾ ಗಡಿಯ ಸುರಲ್ ಬಳಿಯ ಜಲಪಾತದಲ್ಲಿ ಮುಳುಗಿ ಮೃತಪಟ್ಟಿದ್ದ ಘಟನೆ ನಡೆದಿತ್ತು. ಅಲ್ಲದೆ, ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಇತ್ತೀಚಿನ ದಿನಗಳಲ್ಲಿ ಯುವಕರು ಜಲಪಾತಗಳ ಅಪಾಯಕಾರಿ ಅಂಚಿನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವುದು, ಮದ್ಯಪಾನ ಮಾಡಿ ಜಲಪಾತಕ್ಕೆ ಇಳಿಯುವುದು ಮತ್ತು ನೀರಿನ ರಭಸವನ್ನು ಅರಿಯದೆ ಸಾಹಸಕ್ಕೆ ಕೈಹಾಕುವ ಪ್ರಕರಣಗಳು ಹೆಚ್ಚಾಗಿದ್ದವು. ಇದೇ ಕಾರಣಕ್ಕೆ ಯಾವುದೇ ಅಹಿತಕರ ಘಟನೆಗಳು ಮರುಕಳಿಸಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಸ್ತು ಹೆಚ್ಚಳ

ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಸದ್ಯ ಜಲಪಾತಗಳಿಗೆ ಹೋಗುವ ಎಲ್ಲಾ ಪ್ರಮುಖ ರಸ್ತೆಗಳು ಹಾಗೂ ಕಾಲುದಾರಿಗಳಲ್ಲಿ ಕಟ್ಟುನಿಟ್ಟಿನ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದಾರೆ. ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಅರಣ್ಯ ರಕ್ಷಕರು ನಿರಂತರ ಗಸ್ತು ತಿರುಗುತ್ತಿದ್ದಾರೆ. ಒಂದು ವೇಳೆ ಇಲಾಖೆಯ ಆದೇಶವನ್ನು ಉಲ್ಲಂಘಿಸಿ, ಕಳ್ಳಮಾರ್ಗಗಳ ಮೂಲಕ ಅಥವಾ ಬಲವಂತವಾಗಿ ಅರಣ್ಯ ಪ್ರದೇಶ ಹಾಗೂ ಜಲಪಾತಗಳ ವಲಯಕ್ಕೆ ಪ್ರವೇಶಿಸಲು ಯತ್ನಿಸಿದರೆ, ಅಂತಹವರ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆಯಡಿ ತಕ್ಷಣವೇ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಅಧಿಕಾರಿಗಳ ಮನವಿ

"ಪಶ್ಚಿಮ ಘಟ್ಟದಲ್ಲಿ ಸತತ ಮಳೆಯಿಂದಾಗಿ ಹಠಾತ್ ಪ್ರವಾಹ ಬರುವ ಸಾಧ್ಯತೆ ಇರುತ್ತದೆ. ಅಲ್ಲದೆ ದಟ್ಟ ಕಾಡಿನಲ್ಲಿ ಚಿರತೆ, ಕರಡಿ ಮತ್ತು ಹುಲಿಗಳಂತಹ ವನ್ಯಜೀವಿಗಳ ಓಡಾಟವೂ ಇರುತ್ತದೆ. ಹೀಗಾಗಿ ಪ್ರವಾಸಿಗರು ಪರಿಸ್ಥಿತಿ ತಿಳಿಯಾಗುವವರೆಗೆ ತಮ್ಮ ಪ್ರವಾಸದ ಯೋಜನೆಯನ್ನು ಮುಂದೂಡಬೇಕು ಮತ್ತು ಅರಣ್ಯ ಸಿಬ್ಬಂದಿಯೊಂದಿಗೆ ಸಹಕರಿಸಬೇಕು," ಎಂದು ಅಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Read More
Next Story