
ಸುಲಭ ದರ್ಶನ ಮಾಡಿಸುವುದಾಗಿ ಹೇಳಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಕಾಶಿ ವಿಶ್ವನಾಥ ದೇಗುಲದ ಬಳಿ ಯಾತ್ರಿಕರಿಂದ ಹಣ ವಸೂಲಿ: 5 ಮಂದಿ ಬಂಧನ
ಆರೋಪಿಗಳು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಆಗಮಿಸುವ ಯಾತ್ರಿಕರು ಹಾಗೂ ಪ್ರವಾಸಿಗರನ್ನು ಸಂಪರ್ಕಿಸಿ, ಸರತಿ ಸಾಲು ತಪ್ಪಿಸಿ ಸುಲಭವಾಗಿ ದರ್ಶನ ಮಾಡಿಸುವುದಾಗಿ ನಂಬಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.
ವಾರಾಣಸಿಯ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಯಾತ್ರಿಕರು ಹಾಗೂ ಪ್ರವಾಸಿಗರಿಗೆ ಕಿರುಕುಳ ನೀಡಿ, ವಿಶೇಷ ದರ್ಶನ ಮಾಡಿಸುವುದಾಗಿ ಹೇಳಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 19ರಂದು ದೇವಸ್ಥಾನದ ಗೇಟ್ ನಂಬರ್ 4ರ ಸಮೀಪ ಚೌಕ್ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಸ್ಥಳೀಯ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬಿಹಾರದ ದಿಯೋರಿ ನಿವಾಸಿ ಲಾಲ್ ಬಾಬು ಪಾಂಡೆ (35), ವಾರಾಣಸಿಯ ಲಹರ್ತಾರಾ ನಿವಾಸಿ ಆಶಿಶ್ ಪಾಂಡೆ (24), ವಾರಾಣಸಿಯ ಸುಜಾಬಾದ್ ನಿವಾಸಿ ದಿಲೀಪ್ ಪಾಂಡೆ (44), ಮಧ್ಯಪ್ರದೇಶದ ಜಬಲ್ಪುರ ನಿವಾಸಿ ಯಶ್ ದುಬೆ (20) ಹಾಗೂ ಬಿಹಾರದ ದರ್ಭಾಂಗಾ ನಿವಾಸಿ ಸುಶೀಲ್ ಕುಮಾರ್ ದಾಸ್ (21) ಎಂದು ಗುರುತಿಸಲಾಗಿದೆ.
ಆರೋಪಿಗಳು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಆಗಮಿಸುವ ಯಾತ್ರಿಕರು ಹಾಗೂ ಪ್ರವಾಸಿಗರನ್ನು ಸಂಪರ್ಕಿಸಿ, ಸರತಿ ಸಾಲು ತಪ್ಪಿಸಿ ಸುಲಭವಾಗಿ ದರ್ಶನ ಮಾಡಿಸುವುದಾಗಿ ನಂಬಿಸುತ್ತಿದ್ದರು. ಬಳಿಕ ಅವರಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಆರೋಪಿಗಳ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)ಯ ಸೆಕ್ಷನ್ 170ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾರಾಣಸಿ ಪೊಲೀಸ್ ಆಯುಕ್ತರ ಸೂಚನೆಯಂತೆ ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ನಡೆಯುತ್ತಿರುವ ವಿಶೇಷ ಕಾರ್ಯಾಚರಣೆಯ ಭಾಗವಾಗಿ ಈ ಬಂಧನ ನಡೆದಿದೆ.

