ಸರ್ಕಾರಿ ಕೆಲಸಕ್ಕಾಗಿ ತಾಯಿಯನ್ನು ಕೊಂದಾಕೆ ತಂದೆಯ ಕಥೆಯನ್ನು ಮೊದಲೇ ಮುಗಿಸಿದ್ಳಾ?
x

ಸರ್ಕಾರಿ ಕೆಲಸಕ್ಕಾಗಿ ತಾಯಿಯನ್ನು ಕೊಂದಾಕೆ ತಂದೆಯ ಕಥೆಯನ್ನು ಮೊದಲೇ ಮುಗಿಸಿದ್ಳಾ?

ಜೈಪುರದಲ್ಲಿ ತಾಯಿಯನ್ನು ಕಾರು ಹತ್ತಿಸಿ ಕೊಂದ ಆರೋಪದ ಮೇಲೆ ಬಂಧಿತಳಾಗಿರುವ 23 ವರ್ಷದ ಆಯುಷಿ ಶರ್ಮಾ, ಆಸ್ತಿ ಮತ್ತು ಸರ್ಕಾರಿ ಕೆಲಸಕ್ಕಾಗಿ ತನ್ನ ತಂದೆಯನ್ನೂ ಫೀಡಿಂಗ್ ಟ್ಯೂಬ್ ತೆಗೆದು ಕೊಂದಿದ್ದಾಳೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.


Click the Play button to hear this message in audio format

ತಾಯಿಯನ್ನು ಸಂಚು ರೂಪಿಸಿ ಹತ್ಯೆ ಮಾಡಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ 23 ವರ್ಷದ ಕಾನೂನು ವಿದ್ಯಾರ್ಥಿನಿ ಆಯುಷಿ ಶರ್ಮಾ ವಿರುದ್ಧ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ತಾಯಿಯ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಆಯುಷಿ ತನ್ನ ತಂದೆ ವಿಜಯ್ ಶರ್ಮಾ ಸಾವಿನ ಹಿಂದೆಯೂ ಸಂಚು ರೂಪಿಸಿದ್ದಾಳೆಯೇ ಎಂಬ ಅನುಮಾನದಲ್ಲಿ ಹೊಸ ತನಿಖೆ ಆರಂಭಿಸಿದ್ದಾರೆ.

ಪೊಲೀಸರ ಪ್ರಕಾರ, ಜೈಪುರದ ಪ್ರತಾಪ್ ನಗರದಲ್ಲಿ ಜುಲೈ 3ರಂದು ಕೆಳ ಹಂತದ ಲಿಪಿಕ (LDC) ಆಗಿದ್ದ ನೀರಜ್ ಶರ್ಮಾ ಅವರನ್ನು ಸ್ಕಾರ್ಪಿಯೋ ಎಸ್‌ಯುವಿ ವಾಹನ ಹರಿಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಅಪಘಾತದಂತೆ ಬಿಂಬಿಸಲು ಯತ್ನಿಸಲಾಗಿತ್ತು. ಈ ಸಂಬಂಧ ಆಕೆಯ ಆಯುಷಿ ಸೇರಿ ಏಳು ಮಂದಿಯನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಬಲರಾಮ್ ಅಲಿಯಾಸ್ ರವಿ ಇನ್ನೂ ತಲೆಮರೆಸಿಕೊಂಡಿದ್ದಾನೆ.

ತಂದೆಯ ಸಾವಿನ ಬಗ್ಗೆಯೂ ಅನುಮಾನ

ನೀರಜ್ ಶರ್ಮಾ ಅವರ ಸಹೋದರ ಹಾಗೂ ಆಯುಷಿಯ ಮಾವ ರಾಕೇಶ್ ಶರ್ಮಾ, ತಮ್ಮ ಸಹೋದರ ವಿಜಯ್ ಶರ್ಮಾ ಅವರ ಸಾವೂ ಸಹಜವಾಗಿರಲಿಲ್ಲ ಎಂದು ಆರೋಪಿಸಿದ್ದಾರೆ. ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿರುವುದರ ಜೊತೆಗೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ವಿಜಯ್ ಶರ್ಮಾ ಅವರು ರಾಜಸ್ಥಾನ ಹೈಕೋರ್ಟ್‌ನಲ್ಲಿ ಕೋರ್ಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 2024ರಲ್ಲಿ ಅವರಿಗೆ ಬ್ರೈನ್ ಹೆಮರೇಜ್ ಆಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಳ್ಳುತ್ತಿದ್ದರು. ಆದರೆ ಇದೇ ವೇಳೆ ಆಯುಷಿ ಮತ್ತು ಆಕೆಯ ಸಂಬಂಧಿ ಬಲರಾಮ್, ಉತ್ತಮ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಅವರನ್ನು ಮನೆಯವರಿಂದ ದೂರ ಕರೆದೊಯ್ದಿದ್ದರು ಎಂದು ರಾಕೇಶ್ ಆರೋಪಿಸಿದ್ದಾರೆ.

ಮೂರು ತಿಂಗಳು ಕುಟುಂಬಕ್ಕೆ ಮಾಹಿತಿ ನೀಡಲಿಲ್ಲ

ರಾಕೇಶ್ ಶರ್ಮಾ ಆರೋಪದ ಪ್ರಕಾರ, ವಿಜಯ್ ಶರ್ಮಾ ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ಆಯುಷಿ ಸುಮಾರು ಮೂರು ತಿಂಗಳ ಕಾಲ ಕುಟುಂಬದವರಿಗೆ ನೀಡಿರಲಿಲ್ಲ. ಬಳಿಕ ಜೈಪುರದ ನಿವಿಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದರು. ಆಸ್ಪತ್ರೆಗೆ ತೆರಳಿದ ಕುಟುಂಬದವರಿಗೆ ವೈದ್ಯರು ವಿಜಯ್ ಶರ್ಮಾ ಅವರ ದೇಹದ ಸುಮಾರು 90 ಶೇಕಡಾ ಭಾಗ ಗಂಭೀರವಾಗಿ ಹಾನಿಗೊಳಗಾಗಿತ್ತು ಎಂದು ತಿಳಿಸಿದ್ದಾಗಿ ರಾಕೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಂತರ ಆಯುಷಿ ವಿಜಯ್ ಶರ್ಮಾರನ್ನು ಮನೆಗೆ ಕರೆದುಕೊಂಡು ಬಂದಿದ್ದು, ಕೆಲವೇ ದಿನಗಳಲ್ಲಿ ಅವರು ಮೃತಪಟ್ಟಿದ್ದರು ಎಂದು ಹೇಳಿದ್ದಾರೆ.

ಸರ್ಕಾರಿ ಉದ್ಯೋಗ ಮತ್ತು ಆಸ್ತಿಯ ಮೇಲೆ ಕಣ್ಣು?

ತಂದೆಯ ಸಾವಿನ ಬಳಿಕ ಆಯುಷಿ ಮತ್ತು ಬಲರಾಮ್ ತಮ್ಮ ಮೂಲ ಊರಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು. ನಂತರ ತಂದೆಯ ಸರ್ಕಾರಿ ಉದ್ಯೋಗವನ್ನು ಕರುಣಾ ಆಧಾರದಲ್ಲಿ ಪಡೆಯುವುದಾಗಿ ಹಾಗೂ ಕುಟುಂಬದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಳು ಎಂದು ರಾಕೇಶ್ ಆರೋಪಿಸಿದ್ದಾರೆ.

'ತಂದೆಯನ್ನು ಕೊಂದಂತೆ ನಿನ್ನನ್ನೂ ಕೊಲ್ಲುತ್ತೇನೆ' ಎಂದು ತಾಯಿಗೆ ಬೆದರಿಕೆ?

ರಾಕೇಶ್ ಶರ್ಮಾ ಮತ್ತೊಂದು ಆತಂಕಕಾರಿ ಆರೋಪ ಮಾಡಿದ್ದಾರೆ. ಒಂದು ವೇಳೆ ತಾಯಿಯೊಂದಿಗೆ ಜಗಳದ ವೇಳೆ ಆಯುಷಿ, "ತಂದೆಯ ಫೀಡಿಂಗ್ ಟ್ಯೂಬ್ ತೆಗೆದು ಕೊಂದಿದ್ದರೆ, ನಿನ್ನನ್ನು ಕೊಲ್ಲುವುದು ಇನ್ನೂ ಸುಲಭ" ಎಂದು ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆ ಬಳಿಕ ನೀರಜ್ ಶರ್ಮಾ ತಮ್ಮ ವಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ "ನನಗೆ ಇನ್ನೆರಡು ದಿನಗಳಷ್ಟೇ ಉಳಿದಿವೆ" ಎಂಬ ಅರ್ಥದ ಸಂದೇಶವನ್ನೂ ಹಾಕಿದ್ದರು ಎಂದು ತಿಳಿದುಬಂದಿದೆ.

ತಾಯಿಯ ಮೇಲೆ ವರ್ಷಗಳ ದ್ವೇಷ

ತಾಯಿ ಹತ್ಯೆ ಪ್ರಕರಣದ ವಿಚಾರಣೆ ವೇಳೆ ಆಯುಷಿ ಹಲವು ವರ್ಷಗಳಿಂದ ತಾಯಿಯ ವಿರುದ್ಧ ದ್ವೇಷ ಹೊಂದಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ ಎಂದು ವರದಿಯಾಗಿದೆ. ತನ್ನ ಅಂಗವಿಕಲ ಸಹೋದರನಿಗೆ ತಾಯಿ ಹೆಚ್ಚು ಪ್ರೀತಿ ತೋರಿಸುತ್ತಿದ್ದರು, ತನ್ನನ್ನು ಕಡೆಗಣಿಸುತ್ತಿದ್ದರು ಎಂಬ ಅಸಮಾಧಾನದಿಂದ ದ್ವೇಷ ಬೆಳೆದಿತ್ತು ಎಂದು ಹೇಳಿದ್ದಾಳೆ ಎನ್ನಲಾಗಿದೆ. ಇದಲ್ಲದೆ, ಕುಟುಂಬದ ಆಸ್ತಿ ವಿವಾದವೂ ಹತ್ಯೆಗೆ ಪ್ರಮುಖ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನೂನು ವಿದ್ಯಾರ್ಥಿನಿಯಾಗಿದ್ದ ಆಯುಷಿ

ಆಯುಷಿ ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿಯಾಗಿದ್ದು, ಕಾನೂನಿನ ಬಗ್ಗೆ ಉತ್ತಮ ಅರಿವು ಹೊಂದಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆಕೆ ಅತ್ಯಂತ ಲೆಕ್ಕಾಚಾರದ ರೀತಿಯಲ್ಲಿ ಸಂಚು ರೂಪಿಸಿದ್ದಾಳೆ ಎಂಬ ಅನುಮಾನ ವ್ಯಕ್ತವಾಗಿದ್ದು, ವಿಚಾರಣೆಗೆ ಮನೋವೈದ್ಯರ ಸಹಾಯವನ್ನೂ ಪಡೆಯಲಾಗುತ್ತಿದೆ.

ಪೊಲೀಸರ ತನಿಖೆ ಮುಂದುವರಿಕೆ

ಜೈಪುರ ಡೆಪ್ಯುಟಿ ಪೊಲೀಸ್ ಕಮಿಷನರ್ ರಂಜಿತಾ ಶರ್ಮಾ ಮಾತನಾಡಿ, ತಲೆಮರೆಸಿಕೊಂಡಿರುವ ಬಲರಾಮ್‌ನ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ವಿಜಯ್ ಶರ್ಮಾ ಸಾವಿನ ಬಗ್ಗೆ ಕುಟುಂಬ ಮಾಡಿರುವ ಆರೋಪಗಳನ್ನೂ ಪ್ರಸ್ತುತ ತನಿಖೆಯ ಭಾಗವಾಗಿ ಪರಿಶೀಲಿಸಲಾಗುವುದು. ಹೊಸ ತನಿಖೆಯಲ್ಲಿ ಲಭ್ಯವಾಗುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಹೆಚ್ಚುವರಿ ಆರೋಪಗಳನ್ನು ಸೇರಿಸುವುದೇ ಅಥವಾ ಪ್ರತ್ಯೇಕ ಪ್ರಕರಣ ದಾಖಲಿಸುವುದೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Read More
Next Story