
IRS Officer's Daughter Murder | 2 ದಿನ, 2 ಅತ್ಯಾಚಾರ, 1 ಕೊಲೆ: IRS ಅಧಿಕಾರಿಯ ಮಗಳನ್ನು ಕೊಂದ ಕಿರಾತಕ ಸಿಕ್ಕಿಬಿದ್ದಿದ್ದು ಹೇಗೆ?
ದೆಹಲಿಯ ಈಸ್ಟ್ ಆಫ್ ಕೈಲಾಶ್‌ನಲ್ಲಿ ಐಆರ್‌ಎಸ್ ಅಧಿಕಾರಿಯ 22 ವರ್ಷದ ಪುತ್ರಿ ಕೊಲೆಯಾಗಿದ್ದಾರೆ. ಆರೋಪಿ ರಾಹುಲ್ ಅಲ್ವಾರ್‌ನಲ್ಲೂ ಮತ್ತೊಂದು ಕ್ರೈಂ ಎಸಗಿದ್ದ ಎನ್ನುವ ಆಘಾತಕಾರಿ ಸತ್ಯ ಬಯಲಾಗಿದೆ.
ದಕ್ಷಿಣ ದೆಹಲಿಯ ಈಸ್ಟ್ ಆಫ್ ಕೈಲಾಶ್‌ನಲ್ಲಿ ಬುಧವಾರ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. 22 ವರ್ಷದ ಎಂಜಿನಿಯರಿಂಗ್ ಪದವೀಧರೆ ಹಾಗೂ ಯುಪಿಎಸ್‌ಸಿ ಆಕಾಂಕ್ಷಿಯೊಬ್ಬರು ತಮ್ಮ ಮನೆಯಲ್ಲೇ ನಿಗೂಢವಾಗಿ ಕೊಲೆಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಹಳೆಯ ಕೆಲಸಗಾರನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಮೃತ ಯುವತಿ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿಯ ಪುತ್ರಿಯಾಗಿದ್ದಾರೆ. ಕುಟುಂಬದ ಸದಸ್ಯರು ಮನೆಗೆ ಬಂದಾಗ ಯುವತಿಯ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಯು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಮೊಬೈಲ್ ಫೋನ್ ಚಾರ್ಜರ್ ಕೇಬಲ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಆರೋಪಿಯ ಬಂಧನ:
ಈ ಕೃತ್ಯಕ್ಕೆ ಸಂಬಂಧಿಸಿದಂತೆ 19 ವರ್ಷದ ರಾಹುಲ್ ಎಂಬಾತನನ್ನು ದ್ವಾರಕಾ ಭಾಗದ ಹೋಟೆಲ್ ಒಂದರಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ಈ ಹಿಂದೆ ಅದೇ ಮನೆಯಲ್ಲಿ ಕೆಲಸಗಾರನಾಗಿದ್ದ. ಇತರ ಕೆಲಸಗಾರರಿಂದ ಹಣ ಸಾಲ ಪಡೆದು ಮರಳಿಸದ ಕಾರಣ ಒಂದು ತಿಂಗಳ ಹಿಂದಷ್ಟೇ ಈತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.
ಅಲ್ವಾರ್‌ನಲ್ಲಿ ಅತ್ಯಾಚಾರ ನಡೆಸಿ ದೆಹಲಿಗೆ ಬಂದಿದ್ದ ರಾಹುಲ್!
ತನಿಖೆಯ ವೇಳೆ ಆರೋಪಿಯ ಬಗ್ಗೆ ಮತ್ತೊಂದು ಭಯಾನಕ ವಿಷಯ ಬೆಳಕಿಗೆ ಬಂದಿದೆ. ದೆಹಲಿಯಲ್ಲಿ ಈ ಕೊಲೆ ಮಾಡುವ ಕೇವಲ ಕೆಲವು ಗಂಟೆಗಳ ಮೊದಲು, ಈತ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತನ್ನ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಸಂತ್ರಸ್ತೆಯ ಪತಿಯೊಂದಿಗೆ ರಾಹುಲ್ ಸ್ನೇಹ ಹೊಂದಿದ್ದ ಎನ್ನಲಾಗಿದ್ದು, ಅಲ್ಲಿ ಕೃತ್ಯವೆಸಗಿದ ಬಳಿಕ ದೆಹಲಿಗೆ ಬಂದು ಈ ಹತ್ಯೆ ಮಾಡಿದ್ದಾನೆ.
ಕೊಲೆಗೆ ಕಾರಣವೇನು?
ಜಂಟಿ ಪೊಲೀಸ್ ಕಮಿಷನರ್ ವಿಜಯ್ ಕುಮಾರ್ ಈ ಬಗ್ಗೆ ಮಾತನಾಡಿ, "ಆರೋಪಿಯು ಅಲ್ವಾರ್‌ನಲ್ಲಿಯೂ ಇದೇ ರೀತಿಯ ಅಪರಾಧ ಎಸಗಿದ್ದಾನೆ. ಇದು ಆತನ ಕ್ರಿಮಿನಲ್ ಮನಸ್ಥಿತಿಯನ್ನು ತೋರಿಸುತ್ತದೆ. ಕೆಲಸದಿಂದ ತೆಗೆದುಹಾಕಿದ್ದಕ್ಕೆ ಮನೆಯವರ ಮೇಲೆ ದ್ವೇಷ ಸಾಧಿಸಿ ಈ ಕೃತ್ಯ ಎಸಗಿರಬಹುದು ಎಂಬ ಶಂಕೆಯೂ ಇದೆ. ಸದ್ಯ ಆತನನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ," ಎಂದಿದ್ದಾರೆ.
ಪ್ರಸ್ತುತ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ದೆಹಲಿಯ ಅತ್ಯಂತ ಸುರಕ್ಷಿತ ಪ್ರದೇಶಗಳಲ್ಲಿ ಒಂದಾದ ಈಸ್ಟ್ ಆಫ್ ಕೈಲಾಶ್‌ನಲ್ಲಿ ನಡೆದ ಈ ಘಟನೆ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

