
ಭಾರತದಲ್ಲಿ 180 ದಿನಗಳಿಗಿಂತ ಹೆಚ್ಚು ಉಳಿಯುವ ವಿದೇಶಿಗರಿಗೆ ಹೊಸ ನಿಯಮ
ಭಾರತದಲ್ಲಿ 180 ದಿನಗಳಿಗಿಂತ ಹೆಚ್ಚು ಕಾಲ ಉಳಿಯುವ ವಿದೇಶಿ ನಾಗರಿಕರು ಇನ್ನು ಮುಂದೆ 180 ದಿನಗಳ ಅವಧಿ ಮುಗಿಯುವ ಮೊದಲೇ ನೋಂದಣಿ ಮಾಡಿಸಿಕೊಳ್ಳಬೇಕು.
ಭಾರತದಲ್ಲಿ 180 ದಿನಗಳಿಗಿಂತ ಹೆಚ್ಚು ಕಾಲ ಉಳಿಯಲು ಬಯಸುವ ವಿದೇಶಿ ನಾಗರಿಕರಿಗೆ ಸಂಬಂಧಿಸಿದ ನಿಯಮಗಳಲ್ಲಿ ಕೇಂದ್ರ ಗೃಹ ಸಚಿವಾಲಯ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇಮಿಗ್ರೇಶನ್ ಮತ್ತು ಫಾರೆನರ್ಸ್ ರೂಲ್ಸ್-2025 ಅಡಿಯಲ್ಲಿ ತಿದ್ದುಪಡಿ ಮಾಡಲಾಗಿದ್ದು, ವಿದೇಶಿಗರ ನೋಂದಣಿ ಅವಧಿಯನ್ನು ಪರಿಷ್ಕರಿಸಲಾಗಿದೆ. ಜೊತೆಗೆ, ವಿದೇಶಿ ಪೋಷಕರಿಗೆ ಭಾರತದಲ್ಲಿ ಜನಿಸುವ ಮಕ್ಕಳ ಕುರಿತ ನಿಯಮಗಳಲ್ಲೂ ಕೆಲವು ಸಡಿಲಿಕೆಗಳನ್ನು ಘೋಷಿಸಲಾಗಿದೆ.
ಸೋಮವಾರ ಅಧಿಕೃತ ಗಜೆಟ್‌ನಲ್ಲಿ ಪ್ರಕಟವಾದ ಅಧಿಸೂಚನೆಯ ಪ್ರಕಾರ, 180 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ ವೀಸಾದೊಂದಿಗೆ ಭಾರತಕ್ಕೆ ಆಗಮಿಸುವ ವಿದೇಶಿ ನಾಗರಿಕರು, 180 ದಿನಗಳಿಗಿಂತ ಹೆಚ್ಚು ಕಾಲ ದೇಶದಲ್ಲಿ ಉಳಿಯಲು ಬಯಸಿದರೆ, ಇನ್ನು ಮುಂದೆ 180 ದಿನಗಳ ಅವಧಿ ಪೂರ್ಣಗೊಳ್ಳುವ ಮೊದಲೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ.
ಈ ಮೊದಲು, ಭಾರತಕ್ಕೆ ಬಂದ 180 ದಿನಗಳ ಅವಧಿ ಮುಗಿದ ನಂತರ 14 ದಿನಗಳೊಳಗೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಇತ್ತು. ಆದರೆ ಹೊಸ ನಿಯಮದ ಪ್ರಕಾರ, ಆ ಗಡುವು ರದ್ದುಗೊಂಡಿದ್ದು, 180 ದಿನಗಳು ಪೂರ್ಣಗೊಳ್ಳುವ ಮೊದಲೇ ನೋಂದಣಿ ಕಡ್ಡಾಯವಾಗಿದೆ.
ಈ ನಿಯಮವು 180 ದಿನಗಳಿಗಿಂತ ಹೆಚ್ಚಿನ ಅವಧಿಯ ವೀಸಾ ಹೊಂದಿದ್ದರೂ, "ಒಂದು ಭೇಟಿಯಲ್ಲಿ 180 ದಿನಗಳಿಗಿಂತ ಹೆಚ್ಚು ಕಾಲ ಉಳಿಯಬಾರದು" ಎಂಬ ಷರತ್ತು ಹೊಂದಿರುವ ವಿದೇಶಿ ನಾಗರಿಕರಿಗೂ ಅನ್ವಯವಾಗಲಿದೆ. ಇಂತಹ ವ್ಯಕ್ತಿಗಳು ಒಂದು ಭೇಟಿಯಲ್ಲಾಗಲಿ ಅಥವಾ ಒಂದು ಕ್ಯಾಲೆಂಡರ್ ವರ್ಷದ ಒಟ್ಟು ವಾಸ್ತವ್ಯದಲ್ಲಾಗಲಿ 180 ದಿನಗಳ ಮಿತಿಯನ್ನು ಮೀರಿ ಭಾರತದಲ್ಲಿ ಉಳಿಯಲು ಬಯಸಿದರೆ, ಮುಂಚಿತವಾಗಿಯೇ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಇದಲ್ಲದೆ, ನಿಗದಿತ ಅವಧಿ ಮುಗಿದ ಬಳಿಕ ನೋಂದಣಿಗೆ ಅನುಮೋದನೆ ನೀಡುವುದು ಇನ್ನು ಮುಂದೆ ಕೇವಲ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಸಾಧ್ಯವಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ವಿದೇಶಿ ಪೋಷಕರ ಮಕ್ಕಳಿಗೆ ಸಡಿಲಿಕೆ
ಹೊಸ ತಿದ್ದುಪಡಿಯಲ್ಲಿ ಭಾರತದಲ್ಲಿ ಜನಿಸುವ ಮಕ್ಕಳಿಗೆ ಸಂಬಂಧಿಸಿದ ನಿಯಮಗಳಲ್ಲೂ ಬದಲಾವಣೆ ತರಲಾಗಿದೆ. ಈ ಮೊದಲು, ವಿದೇಶಿ ಪೋಷಕರಿಗೆ ಜನಿಸಿದ ಮಗುವಿನ ಕುರಿತು 30 ದಿನಗಳೊಳಗೆ ನೋಂದಣಿ ಅಧಿಕಾರಿಗೆ ಆನ್‌ಲೈನ್ ಮೂಲಕ ಮಾಹಿತಿ ನೀಡುವುದು ಕಡ್ಡಾಯವಾಗಿತ್ತು. ಈ ಮಾಹಿತಿ ನೀಡಿದ ಬಳಿಕವೇ ಹೊಸ ವೀಸಾ ಅಥವಾ ದೇಶ ತೊರೆಯಲು ಅಗತ್ಯ ಅನುಮತಿ ಪಡೆಯಲು ಅವಕಾಶ ಇತ್ತು.
ಆದರೆ, ಪೋಷಕರಲ್ಲಿ ಒಬ್ಬರು ಭಾರತೀಯ ನಾಗರಿಕರಾಗಿದ್ದು, ಮಗುವಿನ ಭಾರತೀಯ ಪೌರತ್ವವನ್ನು ಉಳಿಸಿಕೊಳ್ಳಲು ಬಯಸಿದರೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಹೊಸ ಅಧಿಸೂಚನೆ ಸ್ಪಷ್ಟಪಡಿಸಿದೆ. ಆದಾಗ್ಯೂ, ಭಾರತದಲ್ಲಿ ವಾಸಿಸುತ್ತಿರುವ ಮಗು ನಂತರ ಬೇರೆ ದೇಶದ ಪೌರತ್ವ ಪಡೆದರೆ, ಮಗು ವಿದೇಶಿ ಪೌರತ್ವ ಪಡೆದ 30 ದಿನಗಳೊಳಗೆ ನೋಂದಣಿ ಅಧಿಕಾರಿಗೆ ಮಾಹಿತಿ ನೀಡುವುದು ಕಡ್ಡಾಯವಾಗಿರುತ್ತದೆ.
ಆಸ್ಪತ್ರೆಗಳಿಗೂ ಹೊಸ ಮಾರ್ಗಸೂಚಿ
ಇತ್ತೀಚಿನ ತಿದ್ದುಪಡಿಯಲ್ಲಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಹಾಗೂ ಚಿಕಿತ್ಸೆ ಅಥವಾ ವಸತಿ ಸೌಲಭ್ಯ ಒದಗಿಸುವ ಇತರ ವೈದ್ಯಕೀಯ ಸಂಸ್ಥೆಗಳಿಗೆ ಸಂಬಂಧಿಸಿದ ವರದಿ ಸಲ್ಲಿಕೆ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳಲ್ಲೂ ಬದಲಾವಣೆಗಳನ್ನು ತರಲಾಗಿದೆ.
ಕೇಂದ್ರ ಸರ್ಕಾರದ ಈ ಕ್ರಮದಿಂದ ವಿದೇಶಿ ನಾಗರಿಕರ ನೋಂದಣಿ ಪ್ರಕ್ರಿಯೆ ಮತ್ತಷ್ಟು ಕಟ್ಟುನಿಟ್ಟಾಗಲಿದ್ದು, ವೀಸಾ ನಿಯಮಗಳ ಪಾಲನೆ ಮತ್ತು ವಲಸೆ ನಿರ್ವಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ಹಾಗೂ ಮೇಲ್ವಿಚಾರಣೆ ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

