
ಬಿರುಗಾಳಿ ಹಾಗೂ ಮಳೆಗೆ ಕುಸಿದಿರುವ ಸೇತುವೆ
ಯುಪಿ ಭೀಕರ ದುರಂತ: ನಿರ್ಮಾಣ ಹಂತದ ಸೇತುವೆ ಕುಸಿದು 6 ಕಾರ್ಮಿಕರ ಸಾವು
ಹಮೀರ್‌ಪುರ ಜಿಲ್ಲೆಯ ಕುರಾರ ಬ್ಲಾಕ್ ವ್ಯಾಪ್ತಿಯ ಮೌರಾಕಂದರ್ ಪರ್ಸಾನಿ ಮತ್ತು ಕಂದೌರ್ (ನೈತಿ) ಗ್ರಾಮಗಳನ್ನು ಸಂಪರ್ಕಿಸುವ ಸಲುವಾಗಿ ಬೆಟ್ವಾ ನದಿಗೆ ಅಡ್ಡಲಾಗಿ 800 ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು.
ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ (ಮೇ 28) ಸಂಭವಿಸಿದ ಭೀಕರ ದುರಂತವೊಂದರಲ್ಲಿ, ಬೆಟ್ವಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸೇತುವೆಯ ಭಾರಿ ಕಾಂಕ್ರೀಟ್ ಸ್ಲ್ಯಾಬ್‌ವೊಂದು ಕುಸಿದು ಬಿದ್ದ ಪರಿಣಾಮ ಕನಿಷ್ಠ 6 ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರಿ ಮಳೆ ಹಾಗೂ ಭೀಕರ ಬಿರುಗಾಳಿಯ ಆರ್ಭಟಕ್ಕೆ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಡರಾತ್ರಿ ಸುಮಾರು 2 ರಿಂದ 3 ಗಂಟೆಯ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಆ ಸಮಯದಲ್ಲಿ ಕಾರ್ಮಿಕರು ಸೇತುವೆಯ ಮೇಲ್ಭಾಗದಲ್ಲಿ ಮಲಗಿದ್ದರು ಎನ್ನಲಾಗಿದೆ.
ಘಟನೆಯ ವಿವರ ಹಾಗೂ ಕಾರಣಗಳು
ಹಮೀರ್‌ಪುರ ಜಿಲ್ಲೆಯ ಕುರಾರ ಬ್ಲಾಕ್ ವ್ಯಾಪ್ತಿಯ ಮೌರಾಕಂದರ್ ಪರ್ಸಾನಿ ಮತ್ತು ಕಂದೌರ್ (ನೈತಿ) ಗ್ರಾಮಗಳನ್ನು ಸಂಪರ್ಕಿಸುವ ಸಲುವಾಗಿ ಬೆಟ್ವಾ ನದಿಗೆ ಅಡ್ಡಲಾಗಿ 800 ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು. 2024 ರಿಂದ ಈ ಸೇತುವೆಯ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಶೇ. 60 ರಷ್ಟು ಕೆಲಸ ಪೂರ್ಣಗೊಂಡಿತ್ತು. ಗುರುವಾರ ರಾತ್ರಿ ಹವಾಮಾನ ವೈಪರೀತ್ಯ ಉಂಟಾಗಿ ಭಾರಿ ಗಾಳಿ ಬೀಸತೊಡಗಿದಾಗ, ಸೇತುವೆಯ ಪಿಲ್ಲರ್‌ಗಳಿಗೆ ಆಧಾರವಾಗಿದ್ದ ಸ್ಕ್ಯಾಫೋಲ್ಡಿಂಗ್ (ಕಬ್ಬಿಣದ ಕಪಾಟುಗಳು) ಮತ್ತು ಕಾಂಕ್ರೀಟ್ ಸ್ಲ್ಯಾಬ್ ಒಟ್ಟಿಗೆ ಕುಸಿದು ಬಿದ್ದಿದೆ. ಪರಿಣಾಮವಾಗಿ ಅಲ್ಲಿ ಕೆಲಸ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಕಾರ್ಮಿಕರು ಮಲಗಿದ್ದ ಜಾಗದಲ್ಲೇ ಕಾಂಕ್ರೀಟ್ ರಾಶಿಯ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ತದನಂತರ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡವು ಅತ್ಯಾಧುನಿಕ ಜೆಸಿಬಿಯೊಂದಿಗೆ ರಕ್ಷಣಾ ಕಾರ್ಯಕ್ಕೆ ಇಳಿಯಿತು. ಮೂವರು ಕಾರ್ಮಿಕರು ಪಿಲ್ಲರ್ ಒಂದರ ನಡುವೆ ಅಪಾಯಕಾರಿ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದು, ಅವರನ್ನು ಸುರಕ್ಷಿತವಾಗಿ ರಕ್ಷಿಸಿ ಹಮೀರ್‌ಪುರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಅವಶೇಷಗಳ ಅಡಿಯಲ್ಲಿ ಬೇರೆ ಯಾರಾದರೂ ಸಿಲುಕಿದ್ದಾರೆಯೇ ಎಂದು ಪತ್ತೆ ಹಚ್ಚಲು ಕಾರ್ಯಾಚರಣೆ ಮುಂದುವರಿದಿದೆ.
ಮೃತರ ಗುರುತು ಪತ್ತೆ
ದುರಂತದಲ್ಲಿ ಮೃತಪಟ್ಟ ಆರೂ ಜನ ಕಾರ್ಮಿಕರನ್ನು ಗುರುತಿಸಲಾಗಿದ್ದು, ಬಾಂದಾ ಜಿಲ್ಲೆಯ ಲೋಕೇಂದ್ರ (22), ಕುಲದೀಪ್ ನಿಶಾದ್ (19), ವಂತ್ ಯಾದವ್ (28), ಸಭಜೀತ್ (30), ಹಮೀರ್‌ಪುರದ ಪುಷ್ಪೇಂದ್ರ ಸಿಂಗ್ ಚೌಹಾಣ್ (34) ಹಾಗೂ ರಾಜೇಶ್ ಪಾಲ್ (42) ಎಂದು ಗುರುತಿಸಲಾಗಿದೆ.
ಸಿಎಂ ಸಂತಾಪ, ಪರಿಹಾರ ಘೋಷಣೆ
ಈ ಘಟನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಮಾಜಿಕ ಜಾಲತಾಣ 'X' ನಲ್ಲಿ ಸಂತಾಪ ಸೂಚಿಸಿದ್ದಾರೆ. "ಹಮೀರ್‌ಪುರ ಜಿಲ್ಲೆಯ ಬೆಟ್ವಾ ನದಿಯಲ್ಲಿ ನಡೆದ ಈ ದುರಂತ ಅತ್ಯಂತ ಹೃದಯವಿದ್ರಾವಕವಾಗಿದೆ. ಮೃತರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ." ಅಲ್ಲದೆ, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ, ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ಸುರಕ್ಷತೆಯ ಬಗ್ಗೆ ಪ್ರಶ್ನೆ
ಜಿಲ್ಲಾಡಳಿತ ಹಾಗೂ ಹವಾಮಾನ ಇಲಾಖೆ ಗುರುವಾರ ಸಂಜೆಯೇ ಭಾರಿ ಬಿರುಗಾಳಿಯ ಮುನ್ನೆಚ್ಚರಿಕೆ ನೀಡಿ ಧ್ವನಿವರ್ಧಕಗಳ ಮೂಲಕ ಅನೌನ್ಸ್ ಮಾಡಿದ್ದರೂ ಸಹ, ನಿರ್ಮಾಣ ಸಂಸ್ಥೆಯು ಕಾರ್ಮಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸದೆ ನಿರ್ಲಕ್ಷ್ಯ ವಹಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದ್ದು, ತನಿಖೆಗೆ ಆದೇಶಿಸಲಾಗಿದೆ.

