
ಬೆಟ್ಟದ ಮೇಲಿಂದ ಬಿದ್ದು ಮೂವರ ಸಾವಿನ ಪ್ರಕರಣ: ತನಿಖೆಯಲ್ಲಿ ಬಯಲಾಯ್ತು ಆಘಾತಕಾರಿ ಸಂಗತಿ
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖವಡಾ ಬೆಟ್ಟದಲ್ಲಿ ಸಂಭವಿಸಿದ ದುರಂತ ಪ್ರಕರಣದ ತನಿಖೆಯಲ್ಲಿ ಕೌಟುಂಬಿಕ ಕಲಹವೇ ಈ ಘಟನೆಗೆ ಮುಖ್ಯ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಬೆಟ್ಟದ ಮೇಲಿನಿಂದ ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದ್ದು, ಕಳೆದ ಎರಡು-ಮೂರು ತಿಂಗಳಿನಿಂದ ಕುಟುಂಬದಲ್ಲಿ ಕೌಟುಂಬಿಕ ಕಲಹದಿಂದಾಗಿ ಒತ್ತಡದ ವಾತಾವರಣ ನಿರ್ಮಾಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜೋನ್-2 ಡಿಸಿಪಿ ಪಂಕಜ್ ಅತುಲ್ಕರ್ ಪ್ರಕರಣದ ತನಿಖೆಯ ಕುರಿತು ಮಾಹಿತಿ ನೀಡಿದ್ದು, ಕುಟುಂಬದಲ್ಲಿನ ಸಮಸ್ಯೆಯಿಂದ ಮಾನಸಿಕವಾಗಿ ನೊಂದಿದ್ದ 18 ವರ್ಷದ ಯುವಕ ಕುನಾಲ್ ಆಗಸ್ಟ್ 21ರಂದು ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಹೇಳಿದ್ದಾರೆ.
ಎರಡು ಗಂಟೆಗಳ ಕಾಲ ಯುವಕನ ಮನವೊಲಿಕೆ
ಆಗಸ್ಟ್ 21ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕುನಾಲ್ ಛತ್ರಪತಿ ಸಂಭಾಜಿನಗರದ ಖವಡಾ ಬೆಟ್ಟದ ಸುಮಾರು 400ರಿಂದ 500 ಅಡಿ ಎತ್ತರದ ಬಂಡೆಯ ಅಂಚಿಗೆ ತೆರಳಿದ್ದ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರಿಗೆ ಮತ್ತು ಸ್ಥಳೀಯರಿಗೆ ತಿಳಿಸಿದ್ದ.
ತಕ್ಷಣ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದರು. ಸುಮಾರು ಒಂದೂವರೆ ಗಂಟೆಯಿಂದ ಎರಡು ಗಂಟೆಗಳ ಕಾಲ ಯುವಕನನ್ನು ಮನವೊಲಿಸಲು ಪ್ರಯತ್ನಿಸಲಾಗಿತ್ತು. ಆದರೆ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಲಿಲ್ಲ ಎಂದು ಡಿಸಿಪಿ ತಿಳಿಸಿದ್ದಾರೆ.
ಪರಿಸ್ಥಿತಿ ಮತ್ತಷ್ಟು ದುರಂತಕ್ಕೆ ತಿರುಗಿದ್ದು, ಯುವಕನ ತಂದೆ ಆತನನ್ನು ಹಿಡಿದು ರಕ್ಷಿಸಲು ಮುಂದಾದಾಗ ಸಮತೋಲನ ಕಳೆದುಕೊಂಡು ಬೆಟ್ಟದಿಂದ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ತಾಯಿ ಕೂಡ ಬೆಟ್ಟದಿಂದ ಹಾರಿದ್ದಾರೆ. ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೌಟುಂಬಿಕ ಕಲಹದ ಮೂಲ ಕಾರಣ ಪತ್ತೆಗೆ ತನಿಖೆ
ಘಟನೆಗೆ ನಿಖರವಾಗಿ ಕಾರಣವಾದ ಕುಟುಂಬದೊಳಗಿನ ವಿವಾದವೇನು ಎಂಬುದನ್ನು ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ. ಕುಟುಂಬದಲ್ಲಿನ ಹಲವು ತಿಂಗಳ ಒತ್ತಡ ಮತ್ತು ಘಟನೆಯ ನಡುವಿನ ಸಂಬಂಧವನ್ನು ಪರಿಶೀಲಿಸಲಾಗುತ್ತಿದೆ ಎಂದು ಡಿಸಿಪಿ ಪಂಕಜ್ ಅತುಲ್ಕರ್ ತಿಳಿಸಿದ್ದಾರೆ.

