
Delhi Horror | ಚಲಿಸುವ ಖಾಸಗಿ ಬಸ್ಸಿನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್
ನವದೆಹಲಿಯಲ್ಲಿ ಅಮಾನವೀಯ ಕೃತ್ಯ ನಡೆದಿದೆ. ರಾಣಿ ಬಾಗ್ ಪ್ರದೇಶದಲ್ಲಿ ಖಾಸಗಿ ಸ್ಲೀಪರ್ ಬಸ್ಸಿನೊಳಗೆ ಮಹಿಳೆಯ ಮೇಲೆ ಚಾಲಕ ಮತ್ತು ನಿರ್ವಾಹಕ ಗ್ಯಾಂಗ್‌ರೇಪ್ ಎಸಗಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಅಮಾನವೀಯ ಕೃತ್ಯ ನಡೆದಿದೆ. ಖಾಸಗಿ ಸ್ಲೀಪರ್ ಬಸ್ಸೊಂದರಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ದೂರಿನ ಮೇರೆಗೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ಬಸ್ ಚಾಲಕ ಮತ್ತು ನಿರ್ವಾಹಕನನ್ನು ಬಂಧಿಸಿದ್ದಾರೆ.
ನಡೆದಿದ್ದೇನು?
ಪೊಲೀಸ್ ಮೂಲಗಳ ಪ್ರಕಾರ, ಈ ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ವಿವಾಹಿತೆ ಹಾಗೂ ಮೂರು ಮಕ್ಕಳ ತಾಯಿಯಾಗಿರುವ ಸಂತ್ರಸ್ತೆ ರಾಣಿ ಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳು ಮಹಿಳೆಯನ್ನು ರಾಣಿ ಬಾಗ್ ಪ್ರದೇಶದಿಂದ ಬಸ್ಸಿನಲ್ಲಿ ಹತ್ತಿಸಿಕೊಂಡು ನಂಗ್ಲೋಯಿ ಕಡೆಗೆ ಕರೆದೊಯ್ದಿದ್ದಾರೆ. ಈ ವೇಳೆ ನಿರ್ಜನ ಪ್ರದೇಶದಲ್ಲಿ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್ಸಿನಲ್ಲೇ ಇಬ್ಬರೂ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಕ್ರಮ
ಸಂತ್ರಸ್ತೆಯ ದೂರು ಸ್ವೀಕರಿಸಿದ ಕೂಡಲೇ ರಾಣಿ ಬಾಗ್ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ವರದಿಯಲ್ಲಿ ಅತ್ಯಾಚಾರ ದೃಢಪಟ್ಟ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಬಸ್ ಚಾಲಕ ಮತ್ತು ನಿರ್ವಾಹಕನನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಲಾಗಿದ್ದ ಖಾಸಗಿ ಸ್ಲೀಪರ್ ಬಸ್ಸನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಘಟನೆ ನಡೆದ ಬಸ್ಸನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಆ ಸ್ಥಳದಲ್ಲಿ ದೊರೆಯುವ ಸಾಕ್ಷ್ಯಾಧಾರಗಳು ಮತ್ತು ಡಿಎನ್‌ಎ ಮಾದರಿಗಳು ತನಿಖೆಗೆ ಮಹತ್ವದ ತಿರುವು ನೀಡಲಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯನ್ನು ಬಸ್ಸಿಗೆ ಹತ್ತಿಸಿಕೊಂಡ ಸ್ಥಳದಿಂದ ಹಿಡಿದು ಕೃತ್ಯ ನಡೆದ ಸ್ಥಳದವರೆಗಿನ ಸಂಪೂರ್ಣ ಸರಣಿಯನ್ನು ಪೊಲೀಸರು ಮರುಸೃಷ್ಟಿಸುತ್ತಿದ್ದಾರೆ.

