
ಮದುವೆಯಾಗಿ ಕೇವಲ ಎರಡು ತಿಂಗಳು: ನವವಿವಾಹಿತೆಯ ನಿಗೂಢ ಸಾವು
ದೆಹಲಿ ಲೋಧಿ ಕಾಲೋನಿಯಲ್ಲಿ ಮದುವೆಯಾಗಿ ಕೇವಲ ಎರಡು ತಿಂಗಳಲ್ಲೇ 28 ವರ್ಷದ ಅಕೃತಿ ಸುತಾರ್ ನಿಗೂಢವಾಗಿ ಮೃತಪಟ್ಟಿದ್ದಾರೆ. 20 ಲಕ್ಷ ರೂ. ವರದಕ್ಷಿಣೆ ಕಿರುಕುಳ, ಕೊಲೆ ಆರೋಪದ ಬಗ್ಗೆ ತನಿಖೆ ಮುಂದುವರಿದಿದೆ.
ದೇಶದಲ್ಲಿ ವರದಕ್ಷಿಣೆ ಸಂಬಂಧಿತ ಮತ್ತೊಂದು ನಿಗೂಢ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿಯ ಲೋಧಿ ಕಾಲೋನಿಯಲ್ಲಿ 28 ವರ್ಷದ ನವವಿವಾಹಿತೆ ಆಕೃತಿ ಸುತಾರ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆಕೆಯ ಕುಟುಂಬ ಆರೋಪಿಸಿದೆ. ಆಕೃತಿ ಸುತಾರ್ ಅವರಿಗೆ ಕೇವಲ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿತ್ತು.
ಏನಿದು ಪ್ರಕರಣ?
ದಕ್ಷಿಣ ದೆಹಲಿಯ ಪುಷ್ಪ ವಿಹಾರ್ ನಿವಾಸಿಯಾಗಿದ್ದ ಅಕೃತಿ ಸುತಾರ್, ಶನಿವಾರ ಸಂಜೆ ಲೋಧಿ ಕಾಲೋನಿಯ ಪಾಲಿಕಾ ಕುಂಜ್‌ನ ಎನ್‌ಡಿಎಂಸಿ ಫ್ಲ್ಯಾಟ್‌ನ ಮೂರನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಘಟನೆ ನಡೆದ ಸ್ಥಳವು ಅವರ ಪತಿಯ ಮನೆಯಿನಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿದ್ದು, ಅವರು ಅಲ್ಲಿಗೆ ಏಕೆ ತೆರಳಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ರಾತ್ರಿ ಸುಮಾರು 9 ಗಂಟೆ ವೇಳೆಗೆ ಸ್ಥಳೀಯರು ಆಕೃತಿ ಅವರನ್ನು ನೆಲದ ಮೇಲೆ ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ದೇಹದ ಮೇಲೆ ಹಲವು ಗಾಯಗಳಿದ್ದರೂ, ಘಟನಾ ಸ್ಥಳದಲ್ಲಿ ಯಾವುದೇ ರಕ್ತದ ಕಲೆಗಳು ಪತ್ತೆಯಾಗಿಲ್ಲ. ಅವರನ್ನು ತಕ್ಷಣ ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.
ದಕ್ಷಿಣ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ಅನಂತ್ ಮಿತ್ತಲ್ ಅವರ ಪ್ರಕಾರ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 196ರಡಿ ಕ್ರಮ ಆರಂಭಿಸಲಾಗಿದ್ದು, ಉಪ ವಿಭಾಗಾಧಿಕಾರಿಗೆ (SDM) ಮಾಹಿತಿ ನೀಡಲಾಗಿದೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಆತ್ಮಹತ್ಯೆಯಲ್ಲ, ಕೊಲೆ: ಕುಟುಂಬದ ಆರೋಪ
ಆಕೃತಿ ಕುಟುಂಬ ಆತ್ಮಹತ್ಯೆಯ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಮದುವೆಗಾಗಿ ರಜೆ ಪಡೆದಿದ್ದ ಅಕೃತಿ ಜುಲೈ 1ರಂದು ಮತ್ತೆ ಕೆಲಸಕ್ಕೆ ಸೇರಿದ್ದರು. ಶನಿವಾರ ರಜೆ ಇದ್ದರೂ ಕಚೇರಿಗೆ ತೆರಳಿದ್ದು, ಸಹೋದ್ಯೋಗಿಗಳೊಂದಿಗೆ ಸಣ್ಣ ಸಮಾರಂಭವನ್ನೂ ಆಯೋಜಿಸಿದ್ದರು ಎಂದು ಕುಟುಂಬ ತಿಳಿಸಿದೆ.
ಅವರ ಚಿಕ್ಕಪ್ಪ ಮನಂಜಯ್ ಸುತಾರ್, "ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವಿದ್ದರೆ, ಕೆಲಸಕ್ಕೆ ಮರಳಿದ ಖುಷಿಯಲ್ಲಿ ಸಹೋದ್ಯೋಗಿಗಳಿಗೆ ಪಾರ್ಟಿ ಏಕೆ ಕೊಡುತ್ತಿದ್ದರು?" ಎಂದು ಪ್ರಶ್ನಿಸಿದ್ದಾರೆ.
ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಆಕೃತಿ ತಮ್ಮ ತಾಯಿಯೊಂದಿಗೆ ಮಾತನಾಡಿದ್ದು, ಕಚೇರಿಯ ಕಾರ್ಯಕ್ರಮದ ಬಗ್ಗೆ ಹೇಳಿ ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದರು ಎಂದು ಕುಟುಂಬ ಹೇಳಿದೆ. ರಾತ್ರಿ 8 ಗಂಟೆ ಸುಮಾರಿಗೆ ಅಕೃತಿಯ ಪತಿ ಅರಸ್ತು ಸಿಕ್ಕಾ ಕರೆ ಮಾಡಿ, ಆಕೃತಿ ಕಾಣೆಯಾಗಿದ್ದಾರೆ ಎಂದು ತಿಳಿಸಿದ್ದರು. ಸುಮಾರು ಒಂದೂವರೆ ಗಂಟೆಯ ಬಳಿಕ ಪಾಲಿಕಾ ಕುಂಜ್‌ನಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿದರು.
20 ಲಕ್ಷ ರೂ. ವರದಕ್ಷಿಣೆ ಬೇಡಿಕೆ ಆರೋಪ
ಆಕೃತಿ ಅವರ ಪತಿ ಅರಸ್ತು ಸಿಕ್ಕಾ ಹಾಗೂ ಅವರ ಕುಟುಂಬದವರು ಮದುವೆಯ ಬಳಿಕ 20 ಲಕ್ಷ ರೂ. ವರದಕ್ಷಿಣೆ ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ಮೃತೆಯ ಕುಟುಂಬ ಆರೋಪಿಸಿದೆ. ಈ ಹಣಕ್ಕಾಗಿ ಆಕೃತಿಗೆ ನಿರಂತರವಾಗಿ ಮಾನಸಿಕ ಕಿರುಕುಳ ಹಾಗೂ ಬೆದರಿಕೆ ನೀಡಲಾಗುತ್ತಿತ್ತು ಎಂದು ಕುಟುಂಬ ಹೇಳಿದೆ.
ಅಲ್ಲದೆ, ಅರಸ್ತು ಹಲವು ಬಾರಿ ಕೊಲೆ ಬೆದರಿಕೆ ಹಾಕಿದ್ದರು. ಸಾವಿಗೆ ಎರಡು ದಿನಗಳ ಮೊದಲು ಪತಿ-ಪತ್ನಿಯ ನಡುವೆ ತೀವ್ರ ಜಗಳವೂ ನಡೆದಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ. ಆಕೃತಿಯ 24 ವರ್ಷದ ಸಹೋದರ ಅಮಯ್ ಸುತಾರ್, "ನನ್ನ ಅಕ್ಕ ಮಾನಸಿಕವಾಗಿ ತುಂಬಾ ದೃಢವಾಗಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ," ಎಂದು ಹೇಳಿದ್ದಾರೆ.
ಎಂಟು ವರ್ಷಗಳ ಪ್ರೇಮ, ಎರಡು ತಿಂಗಳ ದಾಂಪತ್ಯ
ಪೊಲೀಸರ ಪ್ರಕಾರ, ಆಕೃತಿ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಅರಸ್ತು ಸಿಕ್ಕಾ ಅವರೊಂದಿಗೆ ಎಂಟು ವರ್ಷಗಳ ಪ್ರೇಮ ಸಂಬಂಧದ ಬಳಿಕ, ಏಪ್ರಿಲ್ 24ರಂದು ಇಬ್ಬರೂ ವಿವಾಹವಾಗಿದ್ದರು. ಇದು ಪ್ರೇಮ ವಿವಾಹವಾಗಿದ್ದು, ಆಕೃತಿ ಮೊದಲು ಅರಸ್ತು ಅವರ ಸಹೋದರಿ ಅಗಸ್ತಿಕಾ ಸಿಕ್ಕಾ ಅವರ ಸ್ನೇಹಿತರಾಗಿದ್ದರು. ಬಳಿಕ ಆ ಸ್ನೇಹ ಪ್ರೇಮವಾಗಿ ಬದಲಾಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಅರಸ್ತು ಸಿಕ್ಕಾ ನಿರುದ್ಯೋಗಿಯಾಗಿದ್ದು, ಅವರ ತಂದೆ ಸರ್ಕಾರಿ ನೌಕರರಾಗಿದ್ದಾರೆ.
ಅನುಮಾನ ಮೂಡಿಸಿದ ಹಲವು ಪ್ರಶ್ನೆಗಳು
ಆಕೃತಿಯ ಮೃತದೇಹವು ಅವರ ಮನೆಯಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ, ಜನವಸತಿ ಕಡಿಮೆ ಇರುವ ವಸತಿ ಸಮುಚ್ಚಯದಲ್ಲಿ ಪತ್ತೆಯಾಗಿರುವುದು ಕುಟುಂಬದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನಾ ಸ್ಥಳದಲ್ಲಿ ರಕ್ತದ ಕಲೆಗಳು ಇಲ್ಲದಿರುವುದನ್ನೂ ಪ್ರಶ್ನಿಸಿರುವ ಕುಟುಂಬ, ಇದು ಪೂರ್ವನಿಯೋಜಿತ ಕೃತ್ಯವಾಗಿರಬಹುದು ಎಂದು ಆರೋಪಿಸಿದೆ.
ಮರಣೋತ್ತರ ಪರೀಕ್ಷೆಯ ವರದಿಯೇ ಅಕೃತಿ ಸಾವಿನ ನಿಖರ ಕಾರಣವನ್ನು ಬಹಿರಂಗಪಡಿಸಲಿದೆ ಎಂದು ಕುಟುಂಬ ಹೇಳಿದ್ದು, ಪೊಲೀಸರು ಎಲ್ಲಾ ಸಾಧ್ಯತೆಗಳ ಕುರಿತು ತನಿಖೆ ಮುಂದುವರಿಸಿದ್ದಾರೆ. ಇತ್ತೀಚಿನ ವಾರಗಳಲ್ಲಿ ಭೋಪಾಲ್‌ನ ಟ್ವಿಷಾ ಶರ್ಮಾ ಹಾಗೂ ಗ್ರೇಟರ್ ನೋಯ್ಡಾದ ದೀಪಿಕಾ ನಾಗರ್ ಅವರ ವರದಕ್ಷಿಣೆ ಸಂಬಂಧಿತ ಅನುಮಾನಾಸ್ಪದ ಸಾವುಗಳ ಬಳಿಕ ದೇಶದ ಗಮನ ಸೆಳೆದಿರುವ ಮೂರನೇ ಪ್ರಕರಣ ಇದಾಗಿದೆ.

