ಮತ್ತೊಂದು ನಿರ್ಭಯ ಪ್ರಕರಣ- ಚಲಿಸುತ್ತಿದ್ದ ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ  ಅತ್ಯಾಚಾರ
x

ಮತ್ತೊಂದು ನಿರ್ಭಯ ಪ್ರಕರಣ- ಚಲಿಸುತ್ತಿದ್ದ ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಸಂತ್ರಸ್ತ ವಿದ್ಯಾರ್ಥಿನಿ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯವಳು. ಕುಟುಂಬದವರೊಂದಿಗೆ ಉಂಟಾದ ಮನಸ್ತಾಪದ ಹಿನ್ನೆಲೆಯಲ್ಲಿ ಯಾರಿಗೂ ತಿಳಿಸದೆ ಮನೆಯಿಂದ ಹೊರಬಂದಿದ್ದ ಆಕೆ, ತನ್ನ ಸಂಬಂಧಿಯನ್ನು ಭೇಟಿಯಾಗಲು ನೋಯ್ಡಾಗೆ ತೆರಳುತ್ತಿದ್ದರು.


Click the Play button to hear this message in audio format

ದೆಹಲಿಯ ಕಾಶ್ಮೀರಿ ಗೇಟ್ ಪ್ರದೇಶದಲ್ಲಿ 16 ವರ್ಷದ 11ನೇ ತರಗತಿ ವಿದ್ಯಾರ್ಥಿನಿ ಮೇಲೆ ಸ್ಲೀಪರ್ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಬಸ್ ಚಾಲಕ ಕುಲದೀಪ್ ಮತ್ತು ಕಂಡಕ್ಟರ್ ಸಂದೀಪ್ ಎಂದು ಗುರುತಿಸಲಾಗಿದೆ. ಘಟನೆಗೆ ಬಳಸಲಾಗಿದೆ ಎನ್ನಲಾದ ಸ್ಲೀಪರ್ ಬಸ್ಸನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಧಿವಿಜ್ಞಾನ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ ವಿದ್ಯಾರ್ಥಿನಿ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯವಳು. ಕುಟುಂಬದವರೊಂದಿಗೆ ಉಂಟಾದ ಮನಸ್ತಾಪದ ಹಿನ್ನೆಲೆಯಲ್ಲಿ ಯಾರಿಗೂ ತಿಳಿಸದೆ ಮನೆಯಿಂದ ಹೊರಬಂದಿದ್ದ ಆಕೆ, ತನ್ನ ಸಂಬಂಧಿಯನ್ನು ಭೇಟಿಯಾಗಲು ನೋಯ್ಡಾಗೆ ತೆರಳುತ್ತಿದ್ದರು.

ಭಾರಿ ಮಳೆ ಹಾಗೂ ಕತ್ತಲಿನ ನಡುವೆ ಬಾಲಕಿ ಪರಿ ಚೌಕ್‌ನಲ್ಲಿ ಇಳಿದಿದ್ದಾಳೆ ಎನ್ನಲಾಗಿದೆ. ಇದೇ ವೇಳೆ ಖಾಲಿ ಸ್ಲೀಪರ್ ಬಸ್‌ವೊಂದು ಅಲ್ಲಿಗೆ ಬಂದಿದ್ದು, ಚಾಲಕ ಮತ್ತು ಕಂಡಕ್ಟರ್ ತಾವು ನೋಯ್ಡಾ ಸೆಕ್ಟರ್-63 ಕಡೆಗೆ ತೆರಳುತ್ತಿರುವುದಾಗಿ ಹೇಳಿದ ಬಳಿಕ ವಿದ್ಯಾರ್ಥಿನಿ ಬಸ್ ನಿಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ಚಲಿಸಲು ಆರಂಭಿಸಿದ ಕೆಲವೇ ಸಮಯದಲ್ಲಿ ಕಂಡಕ್ಟರ್ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿದ್ಯಾರ್ಥಿನಿ ನೀಡಿರುವ ಹೇಳಿಕೆಯ ಪ್ರಕಾರ, ಬಳಿಕ ಚಾಲಕ ಮತ್ತು ಕಂಡಕ್ಟರ್ ಇಬ್ಬರೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ನಂತರ ತಡರಾತ್ರಿ ಆರೋಪಿಗಳು ವಿದ್ಯಾರ್ಥಿನಿಯನ್ನು ಕಾಶ್ಮೀರಿ ಗೇಟ್ ಬಸ್ ಟರ್ಮಿನಲ್ ಸಮೀಪದ ರಿಂಗ್ ರೋಡ್‌ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾದ ವಿದ್ಯಾರ್ಥಿನಿ ಬಳಿಕ ಕಾಶ್ಮೀರಿ ಗೇಟ್ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ತಿಮಾರ್ಪುರದ ಬಸ್ ಪಾರ್ಕಿಂಗ್ ಪ್ರದೇಶದಿಂದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆಗೂ ಮುನ್ನ ಬಸ್ ರಿಪೇರಿಗೆ ತೆರಳಿತ್ತು

ಪೊಲೀಸ್ ಮೂಲಗಳ ಪ್ರಕಾರ, ಈ ಬಸ್‌ ಈ ಹಿಂದೆ ಕೆಟ್ಟುಹೋಗಿದ್ದರಿಂದ ರಿಪೇರಿಗಾಗಿ ಸೂರಜ್‌ಪುರದ ವರ್ಕ್‌ಶಾಪ್‌ಗೆ ಕೊಂಡೊಯ್ಯಲಾಗಿತ್ತು. ದುರಸ್ತಿ ಪೂರ್ಣಗೊಂಡ ಬಳಿಕ ಚಾಲಕ ಮತ್ತು ಕಂಡಕ್ಟರ್ ಖಾಲಿ ಬಸ್‌ನ್ನು ತಿಮಾರ್ಪುರಕ್ಕೆ ಕೊಂಡೊಯ್ಯುತ್ತಿದ್ದರು. ಈ ವೇಳೆ ಪರಿ ಚೌಕ್ ಬಳಿ ವಿದ್ಯಾರ್ಥಿನಿ ಎದುರಾಗಿದ್ದು, ಆಕೆಯನ್ನು ಬಸ್‌ಗೆ ಹತ್ತಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರಿ ಚೌಕ್‌ನಿಂದ ಕಾಶ್ಮೀರಿ ಗೇಟ್‌ವರೆಗೆ ಬಸ್ ಸುಮಾರು 47 ಕಿಲೋಮೀಟರ್ ಪ್ರಯಾಣಿಸಿದೆ ಎನ್ನಲಾಗಿದೆ. ಸ್ಲೀಪರ್ ಬಸ್‌ನಲ್ಲಿ ಪರದೆಗಳಿದ್ದ ಕಾರಣ, ವಾಹನದ ಹೊರಗಿನಿಂದ ಒಳಗೆ ಏನು ನಡೆಯುತ್ತಿದೆ ಎಂಬುದು ಕಾಣದಂತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಬಸ್‌ನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

Read More
Next Story