
ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ CJP ಕಾರ್ಯಕರ್ತನ ತಂದೆಯ ಬರ್ಬರ ಹತ್ಯೆ
ಪಶ್ಚಿಮ ಬಂಗಾಳದ ಬಂಕುರಾದಲ್ಲಿ CJP ಕಾರ್ಯಕರ್ತ ಅಬ್ದುಲ್ ಹಫೀಜ್ ಮನೆ ಮೇಲೆ ದಾಳಿ ನಡೆದಿದ್ದು, ಅವರ ತಂದೆ ಶೇಖ್ ಮೊಹಮ್ಮದ್ ಮಾಫಿಕ್ ಮೃತಪಟ್ಟಿದ್ದಾರೆ. ಪ್ರಕರಣದಲ್ಲಿ 8 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
ಕಾಕ್ರೋಚ್ ಜನತಾ ಪಾರ್ಟಿ (CJP) ಕಾರ್ಯಕರ್ತ ಬೆಂಬಲಿಗ ಹಾಗೂ ಸ್ವಯಂಸೇವಕ ಶೇಖ್ ಅಬ್ದುಲ್ ಹಫೀಜ್ ಎಂಬಾತನ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಮೃತನನ್ನು ಶೇಖ್ ಮೊಹಮ್ಮದ್ ಮಾಫಿಕ್ ಎಂದು ಗುರುತಿಸಲಾಗಿದ್ದು, ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಹಲ್ಲೆಗೊಳಗಾಗಿ ಮೃತಪಟ್ಟಿದ್ದಾರೆ. ಮನೆಗೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ಮಾಫಿಕ್ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿತ್ತು ಎನ್ನಲಾಗಿದೆ. ಸದ್ಯ ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಮೂವರು ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಬಂಧಿತರನ್ನು ಬಳಿಕ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಘಟನೆ ವಿವರ
ಆಗಸ್ಟ್ 13ರಂದು ಶೇಖ್ ಅಬ್ದುಲ್ ಹಫೀಜ್ ಅವರು CJPಯ ಸ್ಕೂಲ್ ಟೀಕ್ ಕರೋ ಅಭಿಯಾನದ ಭಾಗವಾಗಿ ಕರಿಶುಂದಾ ಪಶ್ಚಿಮಪಾರಾ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಶೈಕ್ಷಣಿಕ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕ ಕಾಶೀನಾಥ್ ದೇ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಸಮಸ್ಯೆಗಳ ಕುರಿತು ಮರುದಿನ ಬರುವಂತೆ ಮುಖ್ಯ ಶಿಕ್ಷಕರು ಹಫೀಜ್ ಅವರಿಗೆ ತಿಳಿಸಿದ್ದರು ಎನ್ನಲಾಗಿದೆ.
ಈ ಭೇಟಿಯಾದ ಕೆಲವೇ ಗಂಟೆಗಳ ಬಳಿಕ ರಾತ್ರಿ ವೇಳೆ ದುಷ್ಕರ್ಮಿಗಳ ಗುಂಪೊಂದು ಹಫೀಜ್ ಅವರ ಮನೆಗೆ ನುಗ್ಗಿದೆ. ದೊಣ್ಣೆ, ಕಬ್ಬಿಣದ ರಾಡ್ ಹಾಗೂ ಕಬ್ಬಿಣದ ಕಂಬಿಗಳಂತಹ ವಸ್ತುಗಳಿಂದ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಮೊದಲು ಹಫೀಜ್ ಮೇಲೆ ಹಲ್ಲೆ ನಡೆದಿದ್ದು, ಅವರು ಮನೆಯಿಂದ ಓಡಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ದುಷ್ಕರ್ಮಿಗಳು ಅವರ ತಂದೆ ಶೇಖ್ ಮೊಹಮ್ಮದ್ ಮಾಫಿಕ್ ಮೇಲೆ ಹಲ್ಲೆ ನಡೆಸಿದ್ದಾರೆ.
ಪೊಲೀಸರು ಮಧ್ಯಪ್ರವೇಶಿಸಿ ಮಾಫಿಕ್ ಅವರನ್ನು ರಕ್ಷಿಸಿ ಸಮೀಪದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಆದರೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಬರ್ಧಮಾನ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರು ಮೃತಪಟ್ಟಿದ್ದಾರೆ.
ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಫೀಜ್
ಅಬ್ದುಲ್ ಹಫೀಜ್ ಅವರು CJP ಆಯೋಜಿಸಿದ್ದ ದೆಹಲಿಯ ಜಂತರ್ ಮಂತರ್ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಬಳಿಕ ಸ್ಥಳೀಯ ಸರ್ಕಾರಿ ಶಾಲೆಗಳ ಶೈಕ್ಷಣಿಕ ಪರಿಸ್ಥಿತಿಯನ್ನು ಪರಿಶೀಲಿಸುವಂತೆ ಪಕ್ಷದ ವತಿಯಿಂದ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಮಾಫಿಕ್ ಅವರ ಸಾವಿನ ಬಳಿಕ ಸ್ಥಳೀಯವಾಗಿ ಉದ್ವಿಗ್ನತೆ ಉಂಟಾಗಿದೆ. ಅವರ ಪತ್ನಿ ಹಸೀನಾ ಬೇಗಂ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಸೋಮವಾರ ಬಂಕುರಾಕ್ಕೆ CJP ನಾಯಕರು
ಘಟನೆಯನ್ನು ಖಂಡಿಸಿರುವ CJP ವಕ್ತಾರ ಆಶುತೋಷ್ ರಾಂಕಾ, ಮೃತರ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸೋಮವಾರ ತಾವು ಸೇರಿದಂತೆ ಪಕ್ಷದ ಹಲವು ವಲಯದ ಸದಸ್ಯರು ಬಂಕುರಾದಲ್ಲಿರುವ ಹಫೀಜ್ ಕುಟುಂಬವನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.
ಹಫೀಜ್ ಜಂತರ್ ಮಂತರ್ ಪ್ರತಿಭಟನೆಯ ಮೊದಲ ದಿನದಿಂದಲೂ ತಮ್ಮೊಂದಿಗೆ ಇದ್ದರು. ತಮ್ಮ ಪ್ರದೇಶದ ಪ್ರಾಥಮಿಕ ಶಾಲೆಯ ಸ್ಥಿತಿಯನ್ನು ಸುಧಾರಿಸಲು ಅವರು ಪ್ರಯತ್ನಿಸಿದ್ದರು. ಅಧಿಕಾರಿಗಳನ್ನು ಭೇಟಿ ಮಾಡಿ ಮನೆಗೆ ಮರಳಿದ ಬಳಿಕ ಅವರ ಮೇಲೆ ದಾಳಿ ನಡೆದಿದೆ ಎಂದು ರಾಂಕಾ ಆರೋಪಿಸಿದ್ದಾರೆ.
ಹಫೀಜ್ ಅವರ ತಂದೆ ಮಧ್ಯಪ್ರವೇಶಿಸಿದಾಗ ಅವರ ಮೇಲೂ ಹಲ್ಲೆ ನಡೆದಿದ್ದು, ಅದರ ಪರಿಣಾಮವಾಗಿ ಅವರು ಮೃತಪಟ್ಟಿದ್ದಾರೆ ಎಂದು ರಾಂಕಾ ಹೇಳಿದ್ದಾರೆ. ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ CJP ಸದಸ್ಯರು ಹಾಗೂ ಸ್ವಯಂಸೇವಕರು ಕುಟುಂಬವನ್ನು ಬೆಂಬಲಿಸಲು ಆಗಮಿಸುವಂತೆ ಅವರು ಮನವಿ ಮಾಡಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ಹಫೀಜ್ ಮತ್ತು ಅವರ ಕುಟುಂಬದ ಪರವಾಗಿ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ.
ಕಾನೂನು ನೆರವು ನೀಡಿದ ಯೂತ್ ಕಾಂಗ್ರೆಸ್
ಇಂಡಿಯನ್ ಯೂತ್ ಕಾಂಗ್ರೆಸ್ ಕೂಡ ಹಫೀಜ್ ಮತ್ತು ಅವರ ಕುಟುಂಬಕ್ಕೆ ಬೆಂಬಲ ಘೋಷಿಸಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದೆ.
ಸರ್ಕಾರಿ ಶಾಲೆಯ ದುಸ್ಥಿತಿಯನ್ನು ಬಹಿರಂಗಪಡಿಸಿದ್ದಕ್ಕೆ ಯುವಕ ಮತ್ತು ಅವರ ಕುಟುಂಬದ ಮೇಲೆ ದಾಳಿ ನಡೆದಿದೆ ಎಂದು ಯೂತ್ ಕಾಂಗ್ರೆಸ್ ಆರೋಪಿಸಿದೆ. 25 ವರ್ಷದ ಅಬ್ದುಲ್ ಹಫೀಜ್ ಸ್ಥಳೀಯ ಶಾಲೆಯ ಕಳಪೆ ಸ್ಥಿತಿಯನ್ನು ಗಮನಕ್ಕೆ ತಂದ ಬಳಿಕ ಅವರ ಮನೆ ಮೇಲೆ ದಾಳಿ ನಡೆದಿದ್ದು, ಅವರ ತಂದೆ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಸಂಘಟನೆ ಹೇಳಿದೆ.
ಹಫೀಜ್ ಮತ್ತು ಅವರ ಕುಟುಂಬಕ್ಕೆ ಕಾನೂನು ಸೇರಿದಂತೆ ಅಗತ್ಯ ನೆರವು ನೀಡಲು ಯೂತ್ ಕಾಂಗ್ರೆಸ್ ತಂಡ ಸ್ಥಳದಲ್ಲಿದೆ ಎಂದು ತಿಳಿಸಿದೆ.
ಬಿಜೆಪಿ ಆರೋಪ ತಳ್ಳಿಹಾಕಿದೆ
ಇದೇ ವೇಳೆ, ದಾಳಿಯಲ್ಲಿ ಬಿಜೆಪಿ ಸದಸ್ಯರು ಭಾಗಿಯಾಗಿದ್ದಾರೆ ಎಂಬ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಅಬ್ದುಲ್ ಮಾಫಿಕ್ ಅವರ ಹತ್ಯೆಯೊಂದಿಗೆ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಎಫ್‌ಐಆರ್‌ನಲ್ಲಿ ಐದು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರಲ್ಲಿ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಉಳಿದ ಇಬ್ಬರನ್ನೂ ಬಂಧಿಸಲಾಗುವುದು. ಆರೋಪಿಗಳು ಅಪರಾಧಿಗಳಾಗಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಬಿಜೆಪಿ ಸಂಸದ ಸುಕಾಂತ ಮಜುಮ್ದಾರ್ ಕೂಡ ಘಟನೆ ಕುರಿತು ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. ಇಂತಹ ಘಟನೆ ನಡೆದಿದ್ದರೆ ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ. ಈ ನಡುವೆ ಬಂಧಿತರನ್ನು ಸ್ಥಳೀಯ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ.

