
Samrat Choudhary: ನಿತೀಶ್ ಯುಗಾಂತ್ಯ: ಬಿಹಾರಕ್ಕೆ ಬಿಜೆಪಿಯ ಮೊದಲ ಸಿಎಂ ಸಾಮ್ರಾಟ್ ಚೌಧರಿ
ಬಿಹಾರ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಆರ್‌ಜೆಡಿ ಮತ್ತು ಜೆಡಿಯು ಪಕ್ಷಗಳಲ್ಲಿದ್ದ ಇವರು, 2014ರಲ್ಲಿ ಬಿಜೆಪಿಯನ್ನು ಸೇರಿದ್ದರು.
ಬಿಹಾರದ ರಾಜಕಾರಣದಲ್ಲಿ ದಶಕಗಳ ಕಾಲ ಆಳಿದ್ದ ನಿತೀಶ್ ಕುಮಾರ್ ಅವರ ಸುದೀರ್ಘ ಆಡಳಿತ ಅಂತ್ಯವಾಗಿದ್ದು, ಭಾರತೀಯ ಜನತಾ ಪಕ್ಷದ ಸಾಮ್ರಾಟ್ ಚೌಧರಿ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.
ಸುಮಾರು 50 ವರ್ಷಗಳ ಕಾಲ ಬಿಹಾರದ ರಾಜಕೀಯದಲ್ಲಿ ಅಧಿಪತ್ಯ ಸ್ಥಾಪಿಸಿದ್ದ ನಿತೀಶ್ ಕುಮಾರ್, ಒಟ್ಟು 10 ಬಾರಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದವರು. 'ಸುಶಾಸನ್ ಬಾಬು' ಎಂದೇ ಖ್ಯಾತರಾಗಿದ್ದ ಅವರು ಮಾರ್ಚ್ 30ರಂದು ವಿಧಾನಪರಿಷತ್‌ಗೆ ಹಾಗೂ ಏಪ್ರಿಲ್ 14ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಕ್ರಿಯ ರಾಜ್ಯ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ.
ನಿತೀಶ್ ಅವರಂತಹ ಬಲಿಷ್ಠ ನಾಯಕ ಬಿಟ್ಟ ಹೋದ ಸ್ಥಾನವನ್ನು ತುಂಬುವುದು ಸಾಮ್ರಾಟ್ ಚೌಧರಿ ಅವರಿಗೆ ದೊಡ್ಡ ಸವಾಲಾಗಿದೆ. ರಾಜ್ಯದ ಆರ್ಥಿಕತೆ, ಮೂಲಸೌಕರ್ಯ ಮತ್ತು ಸಾರ್ವಜನಿಕ ಬಿಂಬವನ್ನು ಸುಧಾರಿಸಬೇಕಾದ ಜವಾಬ್ದಾರಿ ಈಗ ಅವರ ಹೆಗಲ ಮೇಲಿದೆ.
ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಿರಿಯ ಬಿಜೆಪಿ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರು ಚೌಧರಿ ಅವರ ಹೆಸರನ್ನು ಪ್ರಸ್ತಾಪಿಸಿದರು. ಇದಕ್ಕೆ ರೇಣು ದೇವಿ, ಮಂಗಲ್ ಪಾಂಡೆ ಮತ್ತು ದಿಲೀಪ್ ಜೈಸ್ವಾಲ್ ಅವರು ಬೆಂಬಲ ಸೂಚಿಸಿದರು. ಬಿಜೆಪಿಯ ಕೇಂದ್ರ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಸಾಮ್ರಾಟ್ ಚೌಧರಿ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಯಾರು ಈ ಸಾಮ್ರಾಟ್ ಚೌಧರಿ?
57 ವರ್ಷದ ಸಾಮ್ರಾಟ್ ಚೌಧರಿ ಅವರು ರಾಜಕೀಯ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದವರು. ಇವರ ತಂದೆ ಶಕುನಿ ಚೌಧರಿ ಆರು ಬಾರಿ ಶಾಸಕರಾಗಿದ್ದವರು. 1990ರಲ್ಲಿ ರಾಜಕೀಯ ಪ್ರವೇಶಿಸಿದ ಸಾಮ್ರಾಟ್, ಈ ಹಿಂದೆ ಕೃಷಿ, ಹಣಕಾಸು ಮತ್ತು ನಗರಾಭಿವೃದ್ಧಿಯಂತಹ ಪ್ರಮುಖ ಖಾತೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಈ ಹಿಂದೆ ಆರ್.ಜೆ.ಡಿ ಮತ್ತು ಜೆ.ಡಿ.ಯು ಪಕ್ಷಗಳಲ್ಲಿದ್ದ ಇವರು, 2014ರಲ್ಲಿ ಬಿಜೆಪಿಯನ್ನು ಸೇರಿದರು. ಕಳೆದ ಒಂದು ದಶಕದಿಂದ ಬಿಜೆಪಿಯ ನಿಷ್ಠಾವಂತ ನಾಯಕನಾಗಿ ಗುರುತಿಸಿಕೊಂಡಿರುವ ಇವರು, ಪಕ್ಷದ ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಬಿಜೆಪಿಯ ಜಾತಿ ಸಮೀಕರಣ ಮತ್ತು ತಂತ್ರಗಾರಿಕೆ
ಸಾಮ್ರಾಟ್ ಚೌಧರಿ ಅವರ ಆಯ್ಕೆಯ ಹಿಂದೆ ಬಿಜೆಪಿಯ ಚಾಣಾಕ್ಷ ತಂತ್ರಗಾರಿಕೆ ಅಡಗಿದೆ. ಬಿಹಾರದಲ್ಲಿ ಪ್ರಭಾವಿ ಸಮುದಾಯವಾದ 'ಕುಶ್ವಾಹ' ಜನಾಂಗಕ್ಕೆ ಸೇರಿದ ಇವರು, ರಾಜ್ಯದ ಒಬಿಸಿ ಮತಬ್ಯಾಂಕ್ ಮೇಲೆ ಹಿಡಿತ ಸಾಧಿಸಲು ನೆರವಾಗಲಿದ್ದಾರೆ. ಯಾದವ್ ಸಮುದಾಯದ ನಂತರ ಕುಶ್ವಾಹ ಸಮುದಾಯವು ಬಿಹಾರದ ಎರಡನೇ ಅತಿದೊಡ್ಡ ಹಿಂದುಳಿದ ವರ್ಗವಾಗಿದೆ. ನಿತೀಶ್ ಕುಮಾರ್ ಅವರ ಕುರ್ಮಿ ಸಮುದಾಯದ ಮತಗಳನ್ನು ಮತ್ತು ಇತರ ಹಿಂದುಳಿದ ವರ್ಗಗಳ ಬೆಂಬಲವನ್ನು ಉಳಿಸಿಕೊಳ್ಳಲು ಬಿಜೆಪಿಗೆ ಸಾಮ್ರಾಟ್ ಅವರ ನಾಯಕತ್ವ ಅನಿವಾರ್ಯವಾಗಿದೆ.
ಬಿಜೆಪಿಯ ಮೊದಲ ಮುಖ್ಯಮಂತ್ರಿ
2014ರಿಂದ ದೇಶಾದ್ಯಂತ ಪ್ರಾಬಲ್ಯ ಹೊಂದಿದ್ದರೂ, ಬಿಹಾರದಲ್ಲಿ ಬಿಜೆಪಿಯ ಸ್ವಂತ ಮುಖ್ಯಮಂತ್ರಿ ಇರಲಿಲ್ಲ. ಸಾಮ್ರಾಟ್ ಚೌಧರಿ ಅವರ ನೇಮಕದೊಂದಿಗೆ ಬಿಜೆಪಿ ಈ ಮೈಲಿಗಲ್ಲನ್ನು ತಲುಪಿದೆ. ಇದು ಜೆಡಿಯು ಪಕ್ಷದ ಮೇಲಿನ ಬಿಜೆಪಿಯ ಅವಲಂಬನೆಯನ್ನು ಕಡಿಮೆ ಮಾಡಿದ್ದು, ರಾಜ್ಯದ ರಾಜಕೀಯ ಸೂತ್ರವನ್ನು ತನ್ನ ಕೈಗೆ ತೆಗೆದುಕೊಂಡಿದೆ. ಮುಂದಿನ 2030ರ ವಿಧಾನಸಭೆ ಚುನಾವಣೆಯವರೆಗೆ ಸಾಮ್ರಾಟ್ ಅವರಿಗೆ ತಮ್ಮ ಆಡಳಿತವನ್ನು ಸಾಬೀತುಪಡಿಸಲು ಸಾಕಷ್ಟು ಸಮಯವಿದೆ. ಬಿಹಾರದ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ಅಧಿಕಾರ ಹಿಡಿಯುವುದು ಎಷ್ಟು ಮುಖ್ಯವೋ, ಅದನ್ನು ಉಳಿಸಿಕೊಳ್ಳುವುದು ಅಷ್ಟೇ ದೊಡ್ಡ ಸವಾಲಾಗಿದೆ.
ನಿತೀಶ್ ಕುಮಾರ್ ಯುಗದ ಅಂತ್ಯ
ಬಿಹಾರ ರಾಜಕಾರಣದ ಧ್ರುವತಾರೆ, ಸುಮಾರು ಎರಡು ದಶಕಗಳ ಕಾಲ ರಾಜ್ಯದ ಚುಕ್ಕಾಣಿ ಹಿಡಿದಿದ್ದ ನಿತೀಶ್ ಕುಮಾರ್ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸುದೀರ್ಘ ರಾಜಕೀಯ ಇನ್ನಿಂಗ್ಸ್‌ಗೆ ತೆರೆ ಎಳೆದಿದ್ದಾರೆ. ಇತ್ತೀಚೆಗೆ ಅವರು ರಾಜ್ಯಸಭೆಗೆ ಆಯ್ಕೆಯಾದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದ್ದು, ಬಿಹಾರದಲ್ಲಿ ನಿತೀಶ್ ಯುಗ ಅಧಿಕೃತವಾಗಿ ಅಂತ್ಯಗೊಂಡಂತಾಗಿದೆ.
ಭಾವಪೂರ್ಣ ಬೀಳ್ಕೊಡುಗೆ
ಮಂಗಳವಾರ ನಡೆದ ತಮ್ಮ ಅಂತಿಮ ಸಚಿವ ಸಂಪುಟ ಸಭೆಯಲ್ಲಿ ನಿತೀಶ್ ಕುಮಾರ್ ಅತ್ಯಂತ ಭಾವುಕರಾಗಿ ಕಂಡುಬಂದರು. ಕಳೆದ 20 ವರ್ಷಗಳ ತಮ್ಮ ಅಧಿಕಾರ ಅವಧಿಯಲ್ಲಿ ಬಿಹಾರ ಕಂಡ ಅಭಿವೃದ್ಧಿಯ ಪಥ ಹಾಗೂ ಆಡಳಿತಾತ್ಮಕ ಸವಾಲುಗಳ ಕುರಿತು ಅವರು ಸಭೆಯಲ್ಲಿ ಮೆಲುಕು ಹಾಕಿದರು. ಅಧಿಕಾರಕ್ಕೆ ಬರಲಿರುವ ನೂತನ ಸರ್ಕಾರಕ್ಕೆ ಶುಭ ಹಾರೈಸಿದ ಅವರು, ರಾಜ್ಯದ ಹಿತದೃಷ್ಟಿಯಿಂದ ಮುಂದೆಯೂ ಅಗತ್ಯ ಸಹಕಾರ ಮತ್ತು ಮಾರ್ಗದರ್ಶನ ನೀಡುವುದಾಗಿ ಭರವಸೆ ನೀಡಿದರು.
ನಿತೀಶ್ ಕುಮಾರ್ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳೊಂದಿಗೆ ಸಮೂಹ ಭಾವಚಿತ್ರಕ್ಕೆ ಪೋಸ್ ನೀಡಿದರು.
ಸಚಿವ ಸಂಪುಟದಿಂದ ಗೌರವ
ಈ ಅಂತಿಮ ಸಭೆಯು ಒಂದು ರೀತಿಯ ಬೀಳ್ಕೊಡುಗೆ ಸಮಾರಂಭವಾಗಿ ಮಾರ್ಪಟ್ಟಿತ್ತು. ಸಭೆಯಲ್ಲಿದ್ದ ಸಚಿವರು ಮತ್ತು ಹಿರಿಯ ಅಧಿಕಾರಿಗಳು ನಿತೀಶ್ ಕುಮಾರ್ ಅವರ ನಾಯಕತ್ವ ಗುಣಗಳನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು. "ಬಿಹಾರದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಜರಾಮರ. ಅವರು ನಮಗೆ ಕೇವಲ ನಾಯಕರಷ್ಟೇ ಅಲ್ಲ, ಒಬ್ಬ ಮಾರ್ಗದರ್ಶಕ ಶಕ್ತಿಯಾಗಿದ್ದರು" ಎಂದು ಹಿರಿಯ ಮುಖಂಡರು ಈ ಸಂದರ್ಭದಲ್ಲಿ ಸ್ಮರಿಸಿದರು.
ಕೊನೆಯ ಕ್ಷಣದ ನೆನಪುಗಳು
ಸಭೆಯ ನಂತರ, ನಿತೀಶ್ ಕುಮಾರ್ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳೊಂದಿಗೆ ಸಮೂಹ ಭಾವಚಿತ್ರಕ್ಕೆ ಪೋಸ್ ನೀಡಿದರು. ತದನಂತರ ತಮ್ಮ ಅಧಿಕೃತ ನಿವಾಸಕ್ಕೆ ಮರಳಿದ ಅವರು, ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆಯನ್ನು ಅಧಿಕೃತವಾಗಿ ಸಲ್ಲಿಸಿದ್ದಾರೆ.
ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆಯನ್ನು ಅಧಿಕೃತವಾಗಿ ಸಲ್ಲಿಸಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಹೊಸ ಪಾತ್ರ
ರಾಜ್ಯ ರಾಜಕಾರಣದಿಂದ ಹಿಂದೆ ಸರಿದಿದ್ದರೂ, ನಿತೀಶ್ ಕುಮಾರ್ ಸಾರ್ವಜನಿಕ ಜೀವನದಿಂದ ದೂರ ಸರಿಯುತ್ತಿಲ್ಲ. ರಾಜ್ಯಸಭಾ ಸದಸ್ಯರಾಗಿ ಅವರು ರಾಷ್ಟ್ರ ಮಟ್ಟದಲ್ಲಿ ಸಕ್ರಿಯರಾಗಿರಲಿದ್ದಾರೆ. ಕೇಂದ್ರದ ವೇದಿಕೆಯ ಮೂಲಕ ಬಿಹಾರದ ಪ್ರಗತಿಗೆ ತಮ್ಮದೇ ಆದ ಕೊಡುಗೆಯನ್ನು ಮುಂದುವರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿರಾಗ್ ಪಾಸ್ವಾನ್ ಭಾವನಾತ್ಮಕ ಪ್ರತಿಕ್ರಿಯೆ
ನಿತೀಶ್ ಕುಮಾರ್ ಅವರ ರಾಜೀನಾಮೆಯನ್ನು ಚಿರಾಗ್ ಪಾಸ್ವಾನ್ ಅವರು ಒಂದು ʻಭಾವನಾತ್ಮಕ ಕ್ಷಣʼ ಎಂದು ಬಣ್ಣಿಸಿದ್ದಾರೆ. ಎರಡು ದಶಕಗಳಿಗೂ ಹೆಚ್ಚು ಕಾಲ ಬಿಹಾರ ರಾಜ್ಯವು ನಿತೀಶ್ ಅವರ ನಾಯಕತ್ವದಿಂದ ಪ್ರಯೋಜನ ಪಡೆದಿದೆ ಎಂದು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

