ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ: ನಾಲ್ವರು ಬಲಿ! ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ
x

ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ: ನಾಲ್ವರು ಬಲಿ! ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ

ಬಿಹಾರದ ಮುಜಾಫರ್‌ಪುರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ನಾಲ್ವರು ರೋಗಿಗಳು ಸಾವನ್ನಪ್ಪಿದ್ದಾರೆ. ದೆಹಲಿ ಹೋಟೆಲ್ ಬೆಂಕಿ ಅವಘಡದ ಬೆನ್ನಲ್ಲೇ ನಡೆದ ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.


ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ ನಾಲ್ವರು ರೋಗಿಗಳು ಸಾವನ್ನಪ್ಪಿದ್ದಾರೆ. ಮುಜಾಫರ್‌ಪುರದ ಪ್ರಸಾದ್ ಆಸ್ಪತ್ರೆಯ ಐದನೇ ಮಹಡಿಯಲ್ಲಿರುವ ತೀವ್ರ ನಿಗಾ ಘಟಕದಲ್ಲಿ (ICU) ಈ ಬೆಂಕಿ ಕಾಣಿಸಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

ಮುಂಜಾನೆ 4 ಗಂಟೆಗೆ ದುರಂತ!

ಇಂದು ಮುಂಜಾನೆ ಸುಮಾರು 3:55ರ ವೇಳೆಗೆ ಅಗ್ನಿಶಾಮಕ ದಳಕ್ಕೆ ತುರ್ತು ಕರೆ ಬಂದಿದ್ದು, ತಕ್ಷಣವೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಐಸಿಯುನಲ್ಲಿದ್ದ ಸುಮಾರು 20 ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಉಳಿದ ರೋಗಿಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

"ನಾವು ಐಸಿಯುನಿಂದ 15 ರಿಂದ 20 ರೋಗಿಗಳನ್ನು ರಕ್ಷಿಸಿದ್ದೇವೆ, ಅವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರ ರೋಗಿಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಇನ್ನು ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ" ಎಂದು ಮುಜಾಫರ್‌ಪುರದ ಅಗ್ನಿಶಾಮಕ ಇಲಾಖೆಯ ಅಧಿಕಾರಿ ರಾಮ್ ನಿವಾಸ್ ಪಾಂಡೆ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ.

ಈ ಕುರಿತು ಮಾತನಾಡಿರುವ ಮುಜಾಫರ್‌ಪುರ ಜಿಲ್ಲಾಧಿಕಾರಿ ಸುಬ್ರತ್ ಕುಮಾರ್ ಸೇನ್, "ಐಸಿಯುನಲ್ಲಿ ಸುಮಾರು 13 ರೋಗಿಗಳು ಮತ್ತು ಸಿಸಿಯು (CCU) ನಲ್ಲಿ ಕೆಲವರು ದಾಖಲಾಗಿದ್ದರು. ಘಟನೆಯ ತನಿಖೆಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.

ಹೋಟೆಲ್ ದುರಂತದ ಮರುದಿನವೇ ಮತ್ತೊಂದು ದುರ್ಘಟನೆ

ವಿಷಾದನೀಯ ಸಂಗತಿಯೆಂದರೆ, ದಕ್ಷಿಣ ದೆಹಲಿಯ ಮಾಳವೀಯ ನಗರದ ಹೋಟೆಲ್‌ವೊಂದರಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡು 21 ಜನರು ಸಾವನ್ನಪ್ಪಿ, 26 ಜನರು ಗಾಯಗೊಂಡ ಮರುದಿನವೇ ಬಿಹಾರದ ಈ ಘಟನೆ ನಡೆದಿದೆ. ದೆಹಲಿಯ ಹೌಜ್ ರಾಣಿ ಪ್ರದೇಶದ 'ಫ್ಲೋರಿಶ್ ಸ್ಟೇ' ಬೆಡ್ ಅಂಡ್ ಬ್ರೇಕ್‌ಫಾಸ್ಟ್ ಹೋಟೆಲ್‌ನಲ್ಲಿ ಮುಂಜಾನೆ 8:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಹೊತ್ತಿಕೊಂಡಾಗ ಸುಮಾರು 40 ಗ್ರಾಹಕರು ಹೋಟೆಲ್‌ನಲ್ಲಿದ್ದರು, ಅವರಲ್ಲಿ ಹೆಚ್ಚಿನವರು ಗಾಢ ನಿದ್ರೆಯಲ್ಲಿದ್ದರು.

ಒಂದೇ ಒಂದು ಬಾಗಿಲು: ಉಸಿರುಗಟ್ಟಿ ಸಾವು!

ದೆಹಲಿ ಪೊಲೀಸರ ಪ್ರಕಾರ, ಈ ಹೋಟೆಲ್ ಕಟ್ಟಡಕ್ಕೆ ಕೇವಲ ಒಂದೇ ಒಂದು ಪ್ರವೇಶ ಮತ್ತು ನಿರ್ಗಮನ (Entry and Exit) ದ್ವಾರವಿತ್ತು. ಕಿಟಕಿಗಳನ್ನು ಶಾಶ್ವತವಾಗಿ ಸೀಲ್ ಮಾಡಲಾಗಿತ್ತು ಮತ್ತು ಮುಖ್ಯ ಬಾಗಿಲು ಸೆನ್ಸರ್ ಮೂಲಕ ಕಾರ್ಯನಿರ್ವಹಿಸುತ್ತಿತ್ತು. ಬೆಂಕಿ ಹರಡುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಂಡು ಸೆನ್ಸರ್ ಬಾಗಿಲು ಲಾಕ್ ಆಗಿದ್ದರಿಂದ, ಗ್ರಾಹಕರು ಹೊರಬರಲು ಯಾವುದೇ ದಾರಿ ಇಲ್ಲದೆ ಒಳಗೇ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸರಣಿ ಅಗ್ನಿ ಅವಘಡಗಳು ಕಟ್ಟಡಗಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿವೆ.

Read More
Next Story