
Bonded Labours| ಮಹಿಳಾ ಕಾರ್ಮಿಕರ ಮೇಲೆ ಅತ್ಯಾಚಾರ, ಚಿತ್ರಹಿಂಸೆ; ನೃತ್ಯ ಮಾಡಲು ಒಪ್ಪದ ಬಾಲಕಿ ಮೈಗೆ ಸಿಗರೇಟಿನಿಂದ ಸುಟ್ಟರು!
ಬಿಹಾರದ ಸಹರ್ಸಾದಲ್ಲಿ ಅಸ್ಸಾಂನ 47 ವಲಸೆ ಕಾರ್ಮಿಕರನ್ನು ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟ ಏಳು ಮಂದಿ ಬಾಲಕಿಯರನ್ನು ಸರ್ಕಾರಿ ಬಾಲ ಮಂದಿರದಲ್ಲಿ ಇರಿಸಲಾಗಿದೆ.
ಲೈಂಗಿಕ ದೌರ್ಜನ್ಯ, ಹಿಂಸೆಗೆ ಈಡಾಗಿದ್ದ ಬಿಹಾರದ ಸಹರ್ಸಾ ಜಿಲ್ಲೆಯ ಇಟ್ಟಿಗೆ ಗೂಡೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು, ಮಕ್ಕಳು ಸೇರಿ 47 ವಲಸೆ ಕಾರ್ಮಿಕರನ್ನು ಬಿಹಾರ ಪೊಲೀಸರು ರಕ್ಷಿಸಿದ್ದಾರೆ.
ಸಹರ್ಸಾದ ಕಹರಾ ಬ್ಲಾಕ್‌ನ ಧಮ್ಸೈನಿ ಗ್ರಾಮದ 'ಸ್ಟಾರ್ ಮಾರ್ಕಾ' ಇಟ್ಟಿಗೆ ಭಟ್ಟಿಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಅಸ್ಸಾಂನ ಧುಬ್ರಿ ಜಿಲ್ಲೆಯ ಈ ಕಾರ್ಮಿಕರನ್ನು ಸೋಮವಾರ ಬಸ್‌ಗಳ ಮೂಲಕ ವಾಪಸ್ ಕರೆತರಲಾಗಿದ್ದು, ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಗುಂಡೇಟಿನಿಂದ ಬೆಳಕಿಗೆ ಬಂತು ಪ್ರಕರಣ
ಈ ಭಯಾನಕ ಪ್ರಕರಣವು ಬೆಳಕಿಗೆ ಬಂದಿದ್ದು ಇಟ್ಟಿಗೆ ಗೂಡಿನ ಒಳಗಡೆ ನಡೆದ ಗುಂಡಿನ ದಾಳಿಯಿಂದ. ಇಟ್ಟಿಗೆ ತಯಾರಿಸುವ ಕಾರ್ಖಾನೆಯ ಮಾಲೀಕರು ಮಹಿಳೆಯೊಬ್ಬರ ಕಾಲಿಗೆ ಗುಂಡು ಹಾರಿಸಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಭಟ್ಟಿಯ ಮಾಲೀಕ ಮೊಹಮ್ಮದ್ ಓವೈಸ್ ಕರ್ನಿ ಅಲಿಯಾಸ್ ಚುನ್ನಾ ಮುಖಿಯಾ ಮತ್ತು ಆತನ ಸಹಚರ ಅಮಿತ್ ಕುಮಾರ್ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್, "ಇಟ್ಟಿಗೆ ಗೂಡಿನಲ್ಲಿ ಮಹಿಳೆಯೊಬ್ಬರಿಗೆ ಗುಂಡು ಹಾರಿಸಲಾಗಿದೆ ಎಂಬ ಮಾಹಿತಿ ಬಂದ ತಕ್ಷಣ ನಾವು ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಿದೆವು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಪತಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ," ಎಂದು ತಿಳಿಸಿದ್ದಾರೆ.
ದೌರ್ಜನ್ಯದ ಭೀಕರ ಕಥೆಗಳನ್ನು ಬಿಚ್ಚಿಟ್ಟ ಕಾರ್ಮಿಕರು
ರಕ್ಷಿಸಲ್ಪಟ್ಟ ಕಾರ್ಮಿಕರು ತಾವು ಅನುಭವಿಸಿದ ನರಕಯಾತನೆಯನ್ನು ಬಿಚ್ಚಿಟ್ಟಿದ್ದಾರೆ. ಧುಬ್ರಿಯ ರೆಫಾಜ್ ಅಲಿ ಎಂಬುವವರು ಮಾತನಾಡಿ, "ನಾವು ಹಣ ಸಂಪಾದಿಸಲು ಅಲ್ಲಿಗೆ ಹೋದೆವು, ಆದರೆ ಸಿಕ್ಕಿಬಿದ್ದೆವು. ನಮಗೆ ಯಾವುದೇ ಕೂಲಿ ನೀಡುತ್ತಿರಲಿಲ್ಲ ಮತ್ತು ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದರು," ಎಂದಿದ್ದಾರೆ. "ನಮ್ಮನ್ನು ಮುಂಜಾನೆ 2 ಗಂಟೆಗೆ ಎಬ್ಬಿಸಿ ಕೆಲಸ ಮಾಡಿಸುತ್ತಿದ್ದರು. ನಿರಾಕರಿಸಿದರೆ ಜೆಸಿಬಿ ಯಂತ್ರದಿಂದ ಕೊಲ್ಲುವುದಾಗಿ ಬೆದರಿಸುತ್ತಿದ್ದರು. ನನ್ನ ಚಿಕ್ಕಪ್ಪನನ್ನು ಯಂತ್ರಕ್ಕೆ ಕಟ್ಟಿ ಹಾಕಿ ವಿದ್ಯುತ್ ಶಾಕ್ ನೀಡಿದ್ದರು," ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಅನೇಕ ಕಾರ್ಮಿಕರು ಮಹಿಳೆಯರು, ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ಕರೆದೊಯ್ಯುವುದು ಅಲ್ಲಿನ ನಿರಂತರ ಅಕ್ರಮಗಳಾಗಿದ್ದವು ಎಂದು ಆರೋಪಿಸಿದ್ದಾರೆ. "ಅವರು ಕುಡಿದು ಬಂದು ಅಪ್ರಾಪ್ತ ಹುಡುಗಿಯರನ್ನು ಕರೆದೊಯ್ಯುತ್ತಿದ್ದರು. ಪ್ರತಿಭಟಿಸಿದರೆ ಕ್ರೂರವಾಗಿ ಹೊಡೆಯುತ್ತಿದ್ದರು. ನಾವು ಸದಾ ಭಯದಲ್ಲೇ ಬದುಕುತ್ತಿದ್ದೆವು," ಎಂದು ರೆಫಾಜ್ ಹೇಳಿದ್ದಾರೆ. ತನ್ನ ಪತ್ನಿಗೆ ಗುಂಡು ತಗುಲಿದ ಘಟನೆಯನ್ನು ನೆನೆದ ಅವರು, "ಅಂದು ರಾತ್ರಿ 2 ಗಂಟೆಗೆ ನನ್ನ ಪತ್ನಿ ಮತ್ತು ಮಗಳನ್ನು ಕಳುಹಿಸಿಕೊಡುವಂತೆ ಕೇಳಿದರು. ಅದನ್ನು ನಿರಾಕರಿಸಿದಾಗ ನನ್ನ ಪತ್ನಿಯ ಕಾಲಿಗೆ ಗುಂಡು ಹಾರಿಸಿದರು," ಎಂದು ವಿವರಿಸಿದ್ದಾರೆ.
ಗೌರವವಿಲ್ಲ, ಸ್ವಾತಂತ್ರ್ಯವಿಲ್ಲ
ಮತ್ತೊಬ್ಬ ಕಾರ್ಮಿಕ ಕಾಸೆಮುದ್ದೀನ್, "ನಮಗೆ ವಿಶ್ರಾಂತಿ ಇಲ್ಲದೆ ಕೆಲಸ ಮಾಡಲು ಒತ್ತಾಯಿಸಿ ಪ್ರತಿದಿನ ಹೊಡೆಯುತ್ತಿದ್ದರು. ಅಲ್ಲಿ ನಮಗೆ ಗೌರವವಾಗಲಿ, ಸ್ವಾತಂತ್ರ್ಯವಾಗಲಿ ಇರಲಿಲ್ಲʼʼ ಎಂದು ಅವರು ನೋವು ನೋಡಿಕೊಂಡಿದ್ದಾರೆ. ನೃತ್ಯ ಮಾಡಲು ನಿರಾಕರಿಸಿದ್ದಕ್ಕೆ ಎಳೆಯ ಹುಡುಗಿಯೊಬ್ಬಳ ಮೈಮೇಲೆ ಸಿಗರೇಟಿನಿಂದ ಸುಟ್ಟಿರುವ ಘಟನೆಯೂ ವರದಿಯಾಗಿದೆ.
ಕಾರ್ಮಿಕರ ಸುರಕ್ಷಿತ ವಾಪಸಾತಿ
ಕಾರ್ಮಿಕ ಅಧಿಕಾರಿ ರವೀಂದ್ರ ಕುಮಾರ್ ಶರ್ಮಾ ಅವರು ಕಾರ್ಮಿಕರ ಪುನರ್ವಸತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಖಚಿತಪಡಿಸಿದ್ದಾರೆ. ಸುಮಾರು 14 ಕುಟುಂಬಗಳ 47 ಕಾರ್ಮಿಕರು ಕೆಲಸದ ಹುಡುಕಾಟದಲ್ಲಿ ಐದಾರು ತಿಂಗಳ ಹಿಂದೆ ವಲಸೆ ಬಂದಿದ್ದರು. ಆದರೆ ಅವರು ಜೀತ ಪದ್ಧತಿ, ವೇತನವಿಲ್ಲದ ದುಡಿಮೆ ಮತ್ತು ನಿರಂತರ ಬೆದರಿಕೆಗಳ ಸುಳಿಗೆ ಸಿಲುಕಿದ್ದರು.
ಅಸುರಕ್ಷಿತ ವಲಸೆ ಕಾರ್ಮಿಕರು
ತನಿಖಾಧಿಕಾರಿಗಳು ಈ ಪ್ರಕರಣದಲ್ಲಿ ಜೀತ ಪದ್ಧತಿ, ಮಾನವ ಸಾಗಾಣಿಕೆ ಮತ್ತು ಮಕ್ಕಳ ಸಂರಕ್ಷಣಾ ಕಾಯ್ದೆಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಈ ಘಟನೆಯು ಧುಬ್ರಿಯಂತಹ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಿಂದ ಕೆಲಸ ಹುಡುಕಿ ಹೋಗುವ ವಲಸೆ ಕಾರ್ಮಿಕರು ಅಕ್ರಮ ಸಂಘಟನೆಗಳ ಕೈಗೆ ಸಿಲುಕಿ ಹೇಗೆ ಶೋಷಣೆಗೆ ಒಳಗಾಗುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸದ್ಯ ರಕ್ಷಿಸಲ್ಪಟ್ಟ ಏಳು ಮಂದಿ ಅಪ್ರಾಪ್ತ ಬಾಲಕಿಯರನ್ನು ಸಹರ್ಸಾದ ಸರ್ಕಾರಿ ಬಾಲ ಮಂದಿರದಲ್ಲಿ ಇರಿಸಲಾಗಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಉಳಿದ 47 ಕಾರ್ಮಿಕರನ್ನು ಬಸ್‌ಗಳ ಮೂಲಕ ಸುರಕ್ಷಿತವಾಗಿ ಅಸ್ಸಾಂನ ಧುಬ್ರಿಗೆ ಕಳುಹಿಸಿಕೊಡಲಾಗಿದ್ದು, ಅಲ್ಲಿನ ಜಿಲ್ಲಾಡಳಿತವು ಅವರಿಗೆ ಜೀತ ಕಾರ್ಮಿಕ ಪುನರ್ವಸತಿ ಯೋಜನೆಯಡಿ ನೆರವು ನೀಡಲು ಕ್ರಮ ಕೈಗೊಂಡಿದೆ.

