ಬಿಹಾರದ ದೇಗುಲದಲ್ಲಿ ಭಾರೀ ಕಾಲ್ತುಳಿತ- 7 ಭಕ್ತರ ದುರ್ಮರಣ; ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ
x

ಬಿಹಾರದ ದೇಗುಲದಲ್ಲಿ ಭಾರೀ ಕಾಲ್ತುಳಿತ- 7 ಭಕ್ತರ ದುರ್ಮರಣ; ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ

ವಿದ್ಯುತ್ ತಂತಿಯೊಂದು ತುಂಡಾಗಿ ಕೆಳಗೆ ಬಿದ್ದ ಪರಿಣಾಮವಾಗಿ ಭಕ್ತರಲ್ಲಿ ಏಕಾಏಕಿ ಆತಂಕ ಉಂಟಾಗಿದೆ. ಭಕ್ತರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದು, ಈ ವೇಳೆ ಕಾಲ್ತುಳಿತ ಸಂಭವಿಸಿದೆ


ಬಿಹಾರದ ಲಖಿಸರಾಯಿ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ಏಳು ಭಕ್ತರು ಮೃತಪಟ್ಟಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಶೋಕ್ ಧಾಮ್ ದೇವಸ್ಥಾನದಲ್ಲಿ ಈ ಘಟನೆ ಸಂಭವಿಸಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಇದೆ.

ಪವಿತ್ರ ಶ್ರಾವಣ ಮಾಸದ ಮೂರನೇ ಸೋಮವಾರದ ಹಿನ್ನೆಲೆಯಲ್ಲಿ ಶಿವನ ದರ್ಶನ ಹಾಗೂ ವಿಶೇಷ ಪೂಜೆ ಸಲ್ಲಿಸಲು ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಬೆಳಗ್ಗೆ ಸುಮಾರು 6.45ರ ವೇಳೆಗೆ ವಿದ್ಯುತ್ ತಂತಿಯೊಂದು ತುಂಡಾಗಿ ಕೆಳಗೆ ಬಿದ್ದಿದೆ ಎನ್ನಲಾಗಿದ್ದು, ಇದರಿಂದ ಭಕ್ತರಲ್ಲಿ ಏಕಾಏಕಿ ಆತಂಕ ಉಂಟಾಗಿದೆ.

ತಂತಿ ಬಿದ್ದಿದ್ದರಿಂದ ಭಕ್ತರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದು, ಈ ವೇಳೆ ದೇವಸ್ಥಾನದ ಆವರಣದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಕಾಲ್ತುಳಿತದಲ್ಲಿ ಹಲವು ಮಂದಿ ಸಿಲುಕಿ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಲಖಿಸರಾಯಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದ್ದರೂ, ಲಖಿಸರಾಯಿ ಜಿಲ್ಲಾಡಳಿತವು ಈವರೆಗೆ ಅಧಿಕೃತವಾಗಿ ಸಾವಿನ ಸಂಖ್ಯೆಯನ್ನು ದೃಢಪಡಿಸಿಲ್ಲ. ಘಟನೆಗೆ ನಿಖರ ಕಾರಣ ಹಾಗೂ ಕಾಲ್ತುಳಿತಕ್ಕೆ ಕಾರಣವಾದ ಪರಿಸ್ಥಿತಿಗಳ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Read More
Next Story