
ಭೋಪಾಲ್ ಟ್ವಿಶಾ ಶರ್ಮಾ ನಿಗೂಢ ಸಾವು: ಸಿಎಂ ನಿವಾಸದ ಎದುರು ಪೋಷಕರ ತೀವ್ರ ಪ್ರತಿಭಟನೆ
ಭೋಪಾಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ 31 ವರ್ಷದ ಟ್ವಿಶಾ ಶರ್ಮಾ ಸಾವಿಗೆ ನ್ಯಾಯ ಕೋರಿ, ಕುಟುಂಬಸ್ಥರು ಎಂಪಿ ಸಿಎಂ ಮೋಹನ್ ಯಾದವ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ 31 ವರ್ಷದ ಟ್ವಿಶಾ ಶರ್ಮಾ ಸಾವಿಗೆ ನ್ಯಾಯ ಕೋರಿ, ಆಕೆಯ ಕುಟುಂಬಸ್ಥರು ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನಿವಾಸದ ಮುಂಭಾಗ ತೀವ್ರ ಪ್ರತಿಭಟನೆ ನಡೆಸಿದರು. ಇದು ವ್ಯವಸ್ಥಿತವಾಗಿ ನಡೆದ ಕೊಲೆಯಾಗಿದ್ದು, ಸಾಕ್ಷ್ಯ ನಾಶಪಡಿಸಲಾಗಿದೆ ಎಂದು ಆರೋಪಿಸಿರುವ ಕುಟುಂಬಸ್ಥರು, ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಆರೋಪ ಎದುರಿಸುತ್ತಿರುವ ಪತಿ ಹಾಗೂ ಆತನ ಕುಟುಂಬಸ್ಥರ ಬಂಧನವಾಗುವವರೆಗೂ ಮಗಳ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬ ಪಟ್ಟು ಹಿಡಿದಿದೆ. ಸಿಎಂ ಭೇಟಿಗೆ ಕಾಯುತ್ತಾ ಕಡು ಬಿಸಿಲಿನಲ್ಲಿ ಗಂಟೆಗಟ್ಟಲೆ ನಿಂತಿದ್ದ ಟ್ವಿಶಾ ತಂದೆ ನವನಿಧಿ ಶರ್ಮಾ, "ನನಗೆ ನ್ಯಾಯ ಸಿಗದಿದ್ದರೆ ಸಿಎಂ ನಿವಾಸದ ಮುಂದೆಯೇ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಆಕ್ರೋಶ ಹೊರಹಾಕಿದ್ದಾರೆ.
ನಿವೃತ್ತ ನ್ಯಾಯಾಧೀಶರ ಪ್ರಭಾವದ ಆರೋಪ
ಮೂಲತಃ ನೋಯ್ಡಾದವರಾದ ಟ್ವಿಶಾ ಶರ್ಮಾ, ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಭೋಪಾಲ್ ಮೂಲದ ವಕೀಲ ಸಮರ್ಥ್ ಸಿಂಗ್ ಎಂಬಾತನನ್ನು ಡಿಸೆಂಬರ್ 2025 ರಲ್ಲಿ ವಿವಾಹವಾಗಿದ್ದರು. ಮೇ 12 ರ ರಾತ್ರಿ ಕಟಾರಾ ಹಿಲ್ಸ್‌ನಲ್ಲಿರುವ ಆಕೆಯ ಪತಿಯ ಮನೆಯಲ್ಲಿ ಟ್ವಿಶಾ ಶವವಾಗಿ ಪತ್ತೆಯಾಗಿದ್ದರು. ಆಕೆಯ ಕೈ ಮತ್ತು ಕಿವಿಗಳ ಮೇಲೆ ಗಾಯದ ಗುರುತುಗಳಿದ್ದು, ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ ಎಂದು ಪೋಷಕರು ದೂರಿದ್ದಾರೆ.
ಟ್ವಿಶಾ ಅವರ ಅತ್ತೆ ಗಿರಿಬಾಲಾ ಸಿಂಗ್ ಅವರು ನಿವೃತ್ತ ನ್ಯಾಯಾಧೀಶರಾಗಿದ್ದು, ತಮ್ಮ ಪ್ರಭಾವ ಬಳಸಿ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ ಮತ್ತು ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ವಿಚಾರಣೆ ಆರಂಭವಾಗುವ ಮುನ್ನವೇ ಇಂತಹ ಪ್ರಕರಣದಲ್ಲಿ ಜಾಮೀನು ಸಿಕ್ಕಿರುವುದು ಕಾನೂನು ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದು ತಂದೆ ಬೇಸರ ವ್ಯಕ್ತಪಡಿಸಿದ್ದಾರೆ.
ತನಿಖೆಯಲ್ಲಿ ನಿರ್ಲಕ್ಷ್ಯ, ಶವ ಸಂರಕ್ಷಣೆಗೆ ಹೋರಾಟ
ಮುಖ್ಯಮಂತ್ರಿಗಳು ಬೇರೆ ನಿಯೋಗದ ಭೇಟಿಯಲ್ಲಿ ಬ್ಯುಸಿಯಾಗಿದ್ದರಿಂದ ಅವರ ವಿಶೇಷ ಅಧಿಕಾರಿಯನ್ನು (OSD) ಕುಟುಂಬಸ್ಥರು ಭೇಟಿ ಮಾಡಿದ್ದಾರೆ. ಪೊಲೀಸರ ತನಿಖೆಯಲ್ಲಿ ಲೋಪದೋಷಗಳಿರುವುದನ್ನು ಅಧಿಕಾರಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಭೋಪಾಲ್ ಏಮ್ಸ್‌ನಲ್ಲಿ ಇಡಲಾಗಿರುವ ಟ್ವಿಶಾ ಅವರ ಮೃತದೇಹ ಕೊಳೆಯದಂತೆ ತಡೆಯಲು ಮೈನಸ್ 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇಡಬೇಕು ಎಂದು ಪೋಷಕರು ಕೋರಿದ್ದಾರೆ. ಸದ್ಯದ 4-5 ಡಿಗ್ರಿ ತಾಪಮಾನದಲ್ಲಿ ಶವ ಕೊಳೆಯುವ ಸಾಧ್ಯತೆಯಿದ್ದು, ಸಾಕ್ಷ್ಯ ನಾಶಪಡಿಸಲು ಆರೋಪಿಗಳೇ ಹೀಗೆ ಮಾಡಿಸುತ್ತಿದ್ದಾರೆ ಎಂದು ತಂದೆ ಆರೋಪಿಸಿದ್ದು, ತಾಪಮಾನ ಕಡಿಮೆಗೊಳಿಸಲು ಕೋರ್ಟ್ ಮೆಟ್ಟಿಲೇರಲು ಸಿದ್ಧರಾಗಿದ್ದಾರೆ. ಅಲ್ಲದೆ, ಸದ್ಯದ ಎಸ್‌ಐಟಿ (SIT) ತನಿಖೆಯ ಮೇಲೆ ನಂಬಿಕೆಯಿಲ್ಲದ ಕಾರಣ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಪತಿ ಎಸ್ಕೇಪ್, ಅಂತ್ಯಸಂಸ್ಕಾರಕ್ಕೆ ಪೊಲೀಸರ ಎಚ್ಚರಿಕೆ:
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಕಟಾರಾ ಹಿಲ್ಸ್ ಪೊಲೀಸ್ ಠಾಣಾ ಉಸ್ತುವಾರಿ ಸುನಿಲ್ ದುಬೆ, "ಮುಖ್ಯ ಆರೋಪಿ ಸಮರ್ಥ್ ಸಿಂಗ್ ಸದ್ಯ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಜಾಲ ಬೀಸಲಾಗಿದೆ. ನಿವೃತ್ತ ನ್ಯಾಯಾಧೀಶೆಗೆ ನೀಡಿರುವ ಮಧ್ಯಂತರ ಜಾಮೀನನ್ನು ಪೊಲೀಸರು ಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದಾರೆ" ಎಂದು ತಿಳಿಸಿದ್ದಾರೆ.
ಇದೇ ವೇಳೆ, ಕೋರ್ಟ್ ಪ್ರಕ್ರಿಯೆಗಳ ನಂತರವೂ ಕುಟುಂಬಸ್ಥರು ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದರೆ, ಕಾನೂನು ನಿಬಂಧನೆಗಳ ಪ್ರಕಾರ ಸಾರ್ವಜನಿಕ ಪ್ರಾಧಿಕಾರವೇ ಅಂತ್ಯಸಂಸ್ಕಾರ ನೆರವೇರಿಸಲಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಮೃತ ಟ್ವಿಶಾ ಶರ್ಮಾ ಅವರ ಸಹೋದರ ಹರ್ಷಿತ್ ಶರ್ಮಾ ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

