ಮಾಡೆಲ್‌ ಟ್ವಿಶಾ ಶರ್ಮಾ ಸಾವು: ಗರ್ಭಿಣಿಯಾಗಿದ್ದಾಗಲೂ ಗಾಂಜಾ ಸೇದುತ್ತಿದ್ದಳುʼ ಎಂದ ಅತ್ತೆ!
x

ಮಾಡೆಲ್‌ ಟ್ವಿಶಾ ಶರ್ಮಾ ಸಾವು: 'ಗರ್ಭಿಣಿಯಾಗಿದ್ದಾಗಲೂ ಗಾಂಜಾ ಸೇದುತ್ತಿದ್ದಳುʼ ಎಂದ ಅತ್ತೆ!

ಭೋಪಾಲ್ ಟ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣಕ್ಕೆ ಭಾರಿ ಟ್ವಿಸ್ಟ್. ಮಿಸ್ ಪುಣೆ ನಟಿ ಟ್ವಿಶಾ ಗಾಂಜಾ ವ್ಯಸನಿಯಾಗಿದ್ದಳು ಎಂದು ನಿವೃತ್ತ ಜಡ್ಜ್ ಅತ್ತೆ ಗಿರಿಬಾಲಾ ಸಿಂಗ್ ಆರೋಪಿಸಿದ್ದಾರೆ.


ಮಧ್ಯಪ್ರದೇಶದ ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿ ಮೇ 12 ರಂದು ಶವವಾಗಿ ಪತ್ತೆಯಾದ ಮಾಜಿ 'ಮಿಸ್ ಪುಣೆ' ಹಾಗೂ ನಟಿ ಟ್ವಿಶಾ ಶರ್ಮಾ (33) ಅವರ ನಿಗೂಢ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಆರೋಪ ಎದುರಿಸುತ್ತಿರುವ ಟ್ವಿಶಾ ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರು ಮೃತ ಯುವತಿಯ ಮಾದಕವಸ್ತು ವ್ಯಸನ, ಮಾನಸಿಕ ಆರೋಗ್ಯ ಮತ್ತು ಆಕೆಯ ಪೋಷಕರ ಹಿನ್ನೆಲೆಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಅತ್ತೆ ಗಿರಿಬಾಲಾ ಸಿಂಗ್ ಮಾಡಿದ ಭೀಕರ ಆರೋಪಗಳೇನು?

ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನಿವೃತ್ತ ಜಡ್ಜ್ ಗಿರಿಬಾಲಾ ಸಿಂಗ್, ತನಿಖಾ ಸಂಸ್ಥೆಗಳ ಮೇಲೆ ತಮಗೆ ನಂಬಿಕೆಯಿದೆ ಎನ್ನುತ್ತಲೇ ಟ್ವಿಶಾ ಪೋಷಕರ ವಿರುದ್ಧ ಹರಿಹಾಯ್ದಿದ್ದಾರೆ. "ಟ್ವಿಶಾ ತಾನು ಗರ್ಭಿಣಿಯಾಗಿದ್ದ ಅವಧಿಯಲ್ಲೂ ಅತಿಯಾಗಿ ಗಾಂಜಾ (Marijuana) ಸೇವಿಸುತ್ತಿದ್ದೆ ಎಂದು ಸ್ವತಃ ನಮ್ಮ ಬಳಿ ಒಪ್ಪಿಕೊಂಡಿದ್ದಳು" ಎಂದು ಗಿರಿಬಾಲಾ ಆರೋಪಿಸಿದ್ದಾರೆ.

"ಟ್ವಿಶಾ ಮಾನಸಿಕ ತರಬೇತಿ ಮತ್ತು ಕೌನ್ಸೆಲಿಂಗ್‌ಗೆ ಒಳಗಾಗುತ್ತಿದ್ದಳು. ಆಕೆಗೆ 'ಸಿಜೋಫ್ರೇನಿಯಾ' (Schizophrenia - ಭ್ರಮೆ ಲೋಕದಲ್ಲಿ ತೇಲುವ ಕಾಯಿಲೆ) ರೋಗಿಗಳಿಗೆ ನೀಡುವ ಹೈ-ಡೋಸ್ ಔಷಧಿಗಳನ್ನು ನೀಡಲಾಗುತ್ತಿತ್ತು. ಆಕೆಯ ಕೈಗಳು ಆಗಾಗ ನಡುಗುತ್ತಿದ್ದವು, ಇದು ಮಾದಕವಸ್ತು ಸಿಗದೇ ಇದ್ದಾಗ ಆಗುವ 'ವಿತ್‌ಡ್ರಾಯಲ್ ಸಿಂಪ್ಟಮ್ಸ್' ಆಗಿತ್ತು" ಎಂದಿದ್ದಾರೆ.

ಗರ್ಭಪಾತದ ರಹಸ್ಯ: "ಮೇ 7 ರಂದು ಆಕೆ ಸ್ವಯಂಪ್ರೇರಿತವಾಗಿ ಅಬಾರ್ಷನ್ ಮಾತ್ರೆಗಳನ್ನು ತೆಗೆದುಕೊಂಡು ಪ್ರಕ್ರಿಯೆ ಮುಗಿಸಿದ್ದಳು. ನಂತರ ಆ ನಿರ್ಧಾರಕ್ಕೆ ಪಶ್ಚಾತ್ತಾಪ ಪಟ್ಟು, ಅದನ್ನು ರಿವರ್ಸ್ ಮಾಡು ಎಂದು ಹಠ ಹಿಡಿದಿದ್ದಳು. ಆದರೆ ಅದು ಸಾಧ್ಯವಿರಲಿಲ್ಲ. ಆಕೆ ಇಡೀ ಸಂಸಾರವನ್ನೇ ಧ್ವಂಸ ಮಾಡಿದಳು" ಎಂದು ಅತ್ತೆ ಕಣ್ಣೀರು ಹಾಕಿದ್ದಾರೆ.

ಮಗಳನ್ನಿಟ್ಟುಕೊಂಡು ದುಡ್ಡು ಮಾಡ್ತಿದ್ರು:

"ಟ್ವಿಶಾ ಪೋಷಕರು ಆಕೆಯ ಸೌಂದರ್ಯವನ್ನು ಬಳಸಿಕೊಂಡು ಚಿಕ್ಕ ವಯಸ್ಸಿನಲ್ಲೇ ಗ್ಲಾಮರ್ ಜಗತ್ತಿಗೆ ತಳ್ಳಿ, ಆಕೆಯಿಂದ ದುಡ್ಡು ಮಾಡಿಕೊಳ್ಳುತ್ತಿದ್ದರು. ಕೊನೆಗೆ ಆಕೆಯನ್ನು ನಿರ್ಲಕ್ಷಿಸಿದರು. ಕಳೆದ 5 ತಿಂಗಳಿಂದ ಆಕೆಯನ್ನು ನೋಡಲು ಪೋಷಕರು ಬಂದೇ ಇರಲಿಲ್ಲ. ಈಗ ಅಂತ್ಯಸಂಸ್ಕಾರ ಮಾಡಲು ಬಿಡದೆ ಡ್ರಾಮಾ ಮಾಡುತ್ತಿದ್ದಾರೆ" ಎಂದು ಗಿರಿಬಾಲಾ ಆರೋಪಿಸಿದ್ದಾರೆ. ಜೊತೆಗೆ ಟ್ವಿಶಾ ತಂದೆ ಕಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಫಾರ್ಮಾಸ್ಯುಟಿಕಲ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದು, ಅವರ ವ್ಯಕ್ತಿತ್ವವೇ ವಿಚಿತ್ರವಾಗಿದೆ ಎಂದಿದ್ದಾರೆ.

ಟ್ವಿಶಾ ತಂದೆಯ ಆಕ್ರೋಶ!

ಅತ್ತೆಯ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಟ್ವಿಶಾ ತಂದೆ ನವನಿಧಿ ಶರ್ಮಾ, ತಮ್ಮ ಮಗಳ ಸಾವಿಗೆ ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆಯೇ ಕಾರಣ ಎಂದು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ. "ಇವತ್ತಿನ ಕಾಲದಲ್ಲಿ ಯಾರೂ ನೇರವಾಗಿ ವರದಕ್ಷಿಣೆ ಕೊಡಿ ಎಂದು ಕೇಳಲ್ಲ. ಆದರೆ ನಮ್ಮ ಜೇಬಿನಿಂದ ಹಣ ಕೀಳುವಂತಹ ಸನ್ನಿವೇಶ ಸೃಷ್ಟಿಸುತ್ತಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ನಮಗೆ ಟಾಂಟ್ (ಚುಚ್ಚು ಮಾತು) ನೀಡಲು ಆರಂಭಿಸಿದರು" ಎಂದಿದ್ದಾರೆ.

"ಟ್ವಿಶಾ ಮಾಡೆಲಿಂಗ್ ಮತ್ತು ಡಿಜಿಟಲ್ ಕ್ರಿಯೇಟರ್ ಆಗಿ ಒಳ್ಳೆಯ ಸಂಪಾದನೆ ಮಾಡುತ್ತಿದ್ದಳು. ಆದರೆ ಮದುವೆಯ ನಂತರ ಆಕೆಯ ಕೆಲಸ ಹೋದ ತಕ್ಷಣ, 'ನಿನಗೆ ನಾವು ಕೂತು ಉಣಿಸಬೇಕಾ?' ಎಂದು ಪತಿ ಮತ್ತು ಅತ್ತೆ ಆಕೆಗೆ ತೀವ್ರ ಮಾನಸಿಕ ಹಿಂಸೆ ನೀಡಲು ಆರಂಭಿಸಿದರು" ಎಂದು ತಂದೆ ಅತ್ತಿದ್ದಾರೆ.

"ಟ್ವಿಶಾ ಪತಿ ಸಮರ್ಥ್ ಸಿಂಗ್ ಫ್ಯಾಮಿಲಿ ಹಿಸ್ಟರಿ ತೆಗೆದು ನೋಡಿ, ಇವನ ಮೊದಲನೇ ಹೆಂಡತಿ ಕೂಡ ಇದೇ ರೀತಿಯ ಕಿರುಕುಳ ತಾಳಲಾರದೆ ಡಿವೋರ್ಸ್ ನೀಡಿ ಓಡಿಹೋಗಿದ್ದಾಳೆ" ಎಂದು ತಂದೆ ನವನಿಧಿ ಶರ್ಮಾ ಸ್ಫೋಟಕ ಸತ್ಯ ಬಯಲು ಮಾಡಿದ್ದಾರೆ.

ಯಾರಾಗಿದ್ದರು ಈ ಟ್ವಿಶಾ ಶರ್ಮಾ?

ಮೂಲತಃ ನೋಯ್ಡಾದವರಾದ 33 ವರ್ಷದ ಟ್ವಿಶಾ ಶರ್ಮಾ ಒಬ್ಬ ಪ್ರತಿಭಾವಂತ ಎಂಬಿಎ (MBA) ಪದವೀಧರೆಯಾಗಿದ್ದರು. 2009 ಮತ್ತು 2012 ರ ನಡುವೆ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟ ಅವರು, ಕಠಿಣ ಪರಿಶ್ರಮದಿಂದ ಪ್ರತಿಷ್ಠಿತ 'ಮಿಸ್ ಪುಣೆ' (Miss Pune) ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಅದಾದ ನಂತರ ಜಾಹೀರಾತು ಜಗತ್ತಿನಲ್ಲಿ ಬ್ಯುಸಿಯಾದ ಅವರು, ಟಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದರು. ತೆಲುಗಿನ ಪ್ರಸಿದ್ಧ 'ಮುಗ್ಗುರು ಮೊನಗಾಳ್ಳು' ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಅಷ್ಟೇ ಅಲ್ಲದೆ, 2018 ರಲ್ಲಿ ತೆರೆಕಂಡ 'ಜರಾ ಸಂಭಾಲ್ ಕೇ' ಎಂಬ ಕಿರುಚಿತ್ರದಲ್ಲೂ ನಟಿಸಿದ್ದರು. 2024 ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ವಕೀಲ ಸಮರ್ಥ್ ಸಿಂಗ್ ಪರಿಚಯವಾಗಿ ಡಿಸೆಂಬರ್ 2025 ರಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವೇ ತಿಂಗಳಲ್ಲಿ ಈ ಪ್ರತಿಭಾನ್ವಿತ ನಟಿಯ ಬದುಕು ಹೆಣವಾಗಿ ಕೊನೆಗೊಂಡಿದೆ.

Read More
Next Story