
Mamata Banerjee | ರಾಜೀನಾಮೆಗೆ ಮಮತಾ ಬ್ಯಾನರ್ಜಿ ನಿರಾಕರಣೆ; ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲ
ಪಶ್ಚಿಮ ಬಂಗಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು! ಚುನಾವಣಾ ಸೋಲಿನ ನಂತರವೂ ರಾಜೀನಾಮೆ ನೀಡಲು ನಿರಾಕರಿಸಿದ ಮಮತಾ ಬ್ಯಾನರ್ಜಿ ಹಠಕ್ಕೆ ಬ್ರೇಕ್ ಹಾಕಿದ ರಾಜ್ಯಪಾಲ ಬಳಸಿ ವಿಧಾನಸಭೆ ವಿಸರ್ಜಿಸಿದ್ದಾರೆ.
ಪಶ್ಚಿಮ ಬಂಗಾಳದ ಚುನಾವಣಾ ಇತಿಹಾಸದಲ್ಲೇ ಇದೊಂದು ಅಭೂತಪೂರ್ವ ಘಟನೆ. ಸಾಮಾನ್ಯವಾಗಿ ಚುನಾವಣೆಯಲ್ಲಿ ಸೋತ ಮುಖ್ಯಮಂತ್ರಿಗಳು ತಕ್ಷಣವೇ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುತ್ತಾರೆ. ಆದರೆ ಮಮತಾ ಬ್ಯಾನರ್ಜಿ ಅವರ ನಿರಾಕರಣೆ ಇಡೀ ದೇಶದ ಗಮನ ಸೆಳೆದಿದೆ.
ರಾಜ್ಯಪಾಲ ಆರ್.ಎನ್. ರವಿ ಅವರು ಸಂವಿಧಾನದ ವಿಧಿ 174 (2)(ಬಿ) ಅಡಿಯಲ್ಲಿ ತಮಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮೇ 7, 2026 ರಿಂದ ಜಾರಿಗೆ ಬರುವಂತೆ ಪಶ್ಚಿಮ ಬಂಗಾಳ ವಿಧಾನಸಭೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ; ವಿಶೇಷವೆಂದರೆ, ವಿಧಾನಸಭೆಯ ಅವಧಿಯು ಗುರುವಾರ ಮಧ್ಯರಾತ್ರಿ 12 ಗಂಟೆಗೆ ಅಧಿಕೃತವಾಗಿ ಮುಕ್ತಾಯವಾಗಬೇಕಿತ್ತಾದರೂ, ಅದಕ್ಕೂ ಮೊದಲೇ ರಾಜ್ಯಪಾಲರು ಈ ನಿರ್ಧಾರವನ್ನು ಪ್ರಕಟಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಮಮತಾ ಬ್ಯಾನರ್ಜಿ ಅವರ ವಾದವೇನು?
ಚುನಾವಣಾ ಫಲಿತಾಂಶದ ನಂತರ ಪತ್ರಿಕಾಗೋಷ್ಠಿ ನಡೆಸಿದ ಮಮತಾ ಬ್ಯಾನರ್ಜಿ ಅವರು, ಬಿಜೆಪಿಯ ಗೆಲುವು ಜನಾದೇಶವಲ್ಲ ಬದಲಾಗಿ ಅದು ಮತಗಳ ಲೂಟಿ ಮತ್ತು ಅಕ್ರಮದ ಫಲ ಎಂದು ಗಂಭೀರವಾಗಿ ಆರೋಪಿಸಿದ್ದಲ್ಲದೆ, "ನಾನು ಸೋಲನ್ನು ಒಪ್ಪುವುದಿಲ್ಲ, ಆದ್ದರಿಂದ ರಾಜಭವನಕ್ಕೆ ಹೋಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ" ಎಂದು ಹಠ ಹಿಡಿಯುವ ಮೂಲಕ ರಾಜ್ಯದಲ್ಲಿ ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವಂತೆ ಮಾಡಿದ್ದರು.
ಸಂವಿಧಾನ ಏನು ಹೇಳುತ್ತದೆ?
ವಿಧಿ 172 ಪ್ರಕಾರ ಪ್ರತಿ ವಿಧಾನಸಭೆಯ ಅವಧಿ 5 ವರ್ಷಗಳು. ಅವಧಿ ಮುಗಿದ ತಕ್ಷಣ ಅದು ತಾನಾಗಿಯೇ ವಿಸರ್ಜನೆಯಾಗುತ್ತದೆ. ಹಳೆಯ ಸರ್ಕಾರದ ಅವಧಿ ಮುಗಿದಾಗ ಅಥವಾ ಸೋತಾಗ, ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವವರೆಗೆ ಹಳೆಯ ಸರ್ಕಾರವನ್ನೇ 'ಉಸ್ತುವಾರಿ' (Caretaker) ಸರ್ಕಾರವಾಗಿ ಮುಂದುವರಿಯಲು ರಾಜ್ಯಪಾಲರು ಸೂಚಿಸುತ್ತಾರೆ.
"ಸೋಲನ್ನು ಒಪ್ಪದ ಮತ್ತು ಸಂವಿಧಾನವನ್ನು ಗೌರವಿಸದ ವ್ಯಕ್ತಿಯನ್ನು ಕೇರ್‌ಟೇಕರ್ ಸಿಎಂ ಆಗಿ ಮುಂದುವರಿಸಬಾರದು, ಅವರನ್ನು ತಕ್ಷಣ ವಜಾ ಮಾಡಬೇಕು" ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಶನಿವಾರ ನೂತನ ಸರ್ಕಾರ?
ಬಿಜೆಪಿಯು ಭರ್ಜರಿ ಬಹುಮತದೊಂದಿಗೆ ಗೆದ್ದಿರುವುದರಿಂದ, ಶನಿವಾರದಂದು ನೂತನ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಮಮತಾ ಬ್ಯಾನರ್ಜಿ ಅವರು ಕೇವಲ ಹೆಸರಿಗಷ್ಟೇ ಅಧಿಕಾರದಲ್ಲಿರುತ್ತಾರೆ, ಆದರೆ ಅವರಿಗೆ ಯಾವುದೇ ಪ್ರಮುಖ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಇರುವುದಿಲ್ಲ.
ಟಿಎಂಸಿಯಿಂದ ಕಾನೂನು ಸಮರ
ತೃಣಮೂಲ ಕಾಂಗ್ರೆಸ್ ಕೇವಲ ರಾಜಕೀಯವಾಗಿ ಮಾತ್ರವಲ್ಲದೆ, ಕಾನೂನಾತ್ಮಕವಾಗಿಯೂ ಹೋರಾಟಕ್ಕೆ ಇಳಿದಿದೆ. ಚುನಾವಣಾ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಪಕ್ಷವು, ಈ ಫಲಿತಾಂಶವನ್ನು ಪ್ರಶ್ನಿಸಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ.

