Ram temple donation theft: Avinash Shukla is the main accused!
x

ರಾಮ ಮಂದಿರ ದೇಣಿಗೆ ಕಳ್ಳತನದ ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ

ರಾಮ ಮಂದಿರ ದೇಣಿಗೆ ಕಳ್ಳತನ: ಅವಿನಾಶ್ ಶುಕ್ಲಾ ಪ್ರಮುಖ ಆರೋಪಿ!

ಎಸ್‌ಐಟಿ ನಡೆಸಿರುವ ಪ್ರಾಥಮಿಕ ತನಿಖೆಯ ಪ್ರಕಾರ, ಈ ದರೋಡೆ ಜಾಲವು ಕೇವಲ ಒಂದೆರಡು ದಿನಗಳಲ್ಲಿ ನಡೆದಿದ್ದಲ್ಲ. ಸುಮಾರು 40 ದಿನಗಳ ಅವಧಿಯಲ್ಲಿ ಕನಿಷ್ಠ 70 ಬಾರಿ ಎಣಿಕೆ ಕೊಠಡಿಯಿಂದ ಅತ್ಯಂತ ವ್ಯವಸ್ಥಿತವಾಗಿ ಹಣವನ್ನು ಕದಿಯಲಾಗಿದೆ.


Click the Play button to hear this message in audio format

ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ನೀಡಿದ ಕಾಣಿಕೆ ಹಣವನ್ನು ಲೂಟಿ ಮಾಡಿದ ಆಘಾತಕಾರಿ ಹಗರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ದೇಣಿಗೆ ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಅವಿನಾಶ್ ಶುಕ್ಲಾ ಎಂಬಾತನೇ ಈ ಪ್ರಕರಣದ ಪ್ರಮುಖ ಸೂತ್ರಧಾರ (ಆರೋಪಿ ನಂಬರ್ 1) ಎಂದು ಎಸ್‌ಐಟಿ ತನ್ನ ಮಧ್ಯಂತರ ವರದಿಯಲ್ಲಿ ಅಧಿಕೃತವಾಗಿ ಹೆಸರಿಸಿದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಉನ್ನತ ಮಟ್ಟದ ಸಭೆಯಲ್ಲಿ ಎಸ್‌ಐಟಿ ವರದಿಯ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ದೇವಾಲಯದ ಆಪ್ತ ಮೂಲಗಳು ತಿಳಿಸಿವೆ.

40 ದಿನಗಳಲ್ಲಿ 70 ಬಾರಿ ದರೋಡೆ!

ಎಸ್‌ಐಟಿ ನಡೆಸಿರುವ ಪ್ರಾಥಮಿಕ ತನಿಖೆಯ ಪ್ರಕಾರ, ಈ ದರೋಡೆ ಜಾಲವು ಕೇವಲ ಒಂದೆರಡು ದಿನಗಳಲ್ಲಿ ನಡೆದಿದ್ದಲ್ಲ. ಸುಮಾರು 40 ದಿನಗಳ ಅವಧಿಯಲ್ಲಿ ಕನಿಷ್ಠ 70 ಬಾರಿ ಎಣಿಕೆ ಕೊಠಡಿಯಿಂದ ಅತ್ಯಂತ ವ್ಯವಸ್ಥಿತವಾಗಿ ಹಣವನ್ನು ಕದಿಯಲಾಗಿದೆ. ತನಿಖಾಧಿಕಾರಿಗಳಿಗೆ ಅವಿನಾಶ್ ಶುಕ್ಲಾ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು, ಆತನನ್ನೇ ಈ ಇಡೀ ಜಾಲದ 'ಕೇಂದ್ರಬಿಂದು' ಎಂದು ಗುರುತಿಸಲಾಗಿದೆ. ಜೂ. 23 ರಂದೇ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಸಂಜಯ್ ಪ್ರಸಾದ್ ಅವರಿಗೆ ಒಂಬತ್ತು ಪುಟಗಳ ಈ ಪ್ರಾಥಮಿಕ ವರದಿಯನ್ನು ಹಸ್ತಾಂತರಿಸಲಾಗಿತ್ತು.

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕಳ್ಳಾಟ

ದೇಣಿಗೆ ಎಣಿಕೆ ಕೊಠಡಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖಾಧಿಕಾರಿಗಳು ಪದೇ ಪದೇ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವಿನಾಶ್ ಶುಕ್ಲಾನ ಅಸಲಿ ಮುಖವಾಡ ಕಳಚಿಬಿದ್ದಿದೆ. ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲೇ ಶುಕ್ಲಾ ಅತ್ಯಂತ ಚಾಣಾಕ್ಷತನದಿಂದ ನೋಟುಗಳ ಬಂಡಲ್‌ಗಳನ್ನು ಹಾಗೂ ಬಿಡಿ ನೋಟುಗಳನ್ನು ಸರಿಸಿ, ಮರೆಮಾಚುತ್ತಿರುವುದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಈ ದೃಶ್ಯಾವಳಿಗಳು, ಬ್ಯಾಂಕ್ ಖಾತೆಗಳ ವಿಶ್ಲೇಷಣೆ, ವಶಪಡಿಸಿಕೊಳ್ಳಲಾದ ದಾಖಲೆಗಳು ಹಾಗೂ ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಆತನನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.

ಯಾರ ಪಾತ್ರ ಏನು?

ಕೇವಲ ಅವಿನಾಶ್ ಮಾತ್ರವಲ್ಲದೆ, ದೇವಾಲಯದ ಎಣಿಕೆ ಕೊಠಡಿಯ ಒಳಗಿದ್ದ ಇತರೆ ಐದು ಸಿಬ್ಬಂದಿಗಳು ಈತನಿಗೆ ಸಾಥ್ ನೀಡಿರುವುದು ಬೆಳಕಿಗೆ ಬಂದಿದೆ. ಅನುಕಲ್ಪ್ ಮಿಶ್ರಾ, ಲವ್‌ಕುಶ್ ಮಿಶ್ರಾ, ಕರುಣೇಶ್ ಪಾಂಡೆ ಹಣವನ್ನು ಮರೆಮಾಡಲು ಮತ್ತು ಕೊಠಡಿಯಿಂದ ಹೊರಸಾಗಿಸಲು ಅವಿನಾಶ್‌ಗೆ ನೇರವಾಗಿ ಸಹಾಯ ಮಾಡುತ್ತಿದ್ದರು. ಮನೀಶ್ ಕುಮಾರ್ ಯಾದವ್ ಎಣಿಕೆ ಕೊಠಡಿಯೊಳಗೆ ಇವರೊಂದಿಗೆ ನಿರಂತರ ಸಹಕಾರ ನೀಡುತ್ತಿದ್ದ. ರಾಮ ಶಂಕರ್ ಮಿಶ್ರಾ ಟ್ರಸ್ಟ್ ಒದಗಿಸಿದ ಪ್ರತ್ಯೇಕ ದೃಶ್ಯಗಳಲ್ಲಿ ಈತ ನಗದು ಬಂಡಲ್‌ಗಳನ್ನು ಹ್ಯಾಂಡಲ್ ಮಾಡುತ್ತಾ ಮರೆಮಾಡುತ್ತಿರುವುದು ಪತ್ತೆಯಾಗಿದೆ. ಸದ್ಯ ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ಈ ಆರೂ ಆರೋಪಿಗಳ ಪಾತ್ರ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಎಸ್‌ಐಟಿ ಸ್ಪಷ್ಟಪಡಿಸಿದೆ.

ಲಕ್ಷ ಲಕ್ಷ ನಗದು, ಎಸ್‌ಯುವಿ ಕಾರು!

ಅಯೋಧ್ಯೆ ಪೊಲೀಸರು ಆರೋಪಿಗಳ ಮೇಲೆ ದಾಳಿ ನಡೆಸಿದಾಗ ಸಿಕ್ಕ ನಗದು ಹಾಗೂ ಆಸ್ತಿ ಕಂಡು ತನಿಖಾಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ ಬಳಿಯಿಂದ ಪೊಲೀಸರು 20.39 ಲಕ್ಷ ರೂ. ನಗದು, 1,121 ಯುಎಸ್ ಡಾಲರ್, ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ ಬೆಲೆಬಾಳುವ ವಸ್ತುಗಳು, ಒಂದು ಐಷಾರಾಮಿ ಎಸ್‌ಯುವಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ರಾಮ ಮಂದಿರ ಟ್ರಸ್ಟ್‌ನಿಂದ ದೇಣಿಗೆ ಎಣಿಕೆಗೆ ನೇಮಕವಾಗಿರುವ ಸಿಬ್ಬಂದಿಗೆ ಸಿಗುತ್ತಿದ್ದ ಮಾಸಿಕ ವೇತನ ಕೇವಲ 15 ಸಾವಿರ ರೂ, ಮಾತ್ರ. ಆದರೆ, ಬಂಧನಕ್ಕೂ ಮುನ್ನ ಶುಕ್ಲಾ ಅವರ ಬ್ಯಾಂಕ್ ಖಾತೆಯ ವಹಿವಾಟುಗಳು ಈ ಆದಾಯಕ್ಕಿಂತ ನೂರಾರು ಪಟ್ಟು ಹೆಚ್ಚಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಕ್ಯೂಆರ್ ಕೋಡ್ ಪೆಟ್ಟಿಗೆ ಪತ್ತೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಅವಿನಾಶ್, ಅನುಕಲ್ಪ್, ಲವ್‌ಕುಶ್, ಮನೀಶ್ ಕುಮಾರ್, ಕರುಣೇಶ್, ರಾಮ ಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮ ಶಂಕರ್ ಅಲಿಯಾಸ್ ಟಿನ್ನು ಸೇರಿದಂತೆ ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ. ಅವಿನಾಶ್ ಶುಕ್ಲಾನ ಪ್ರತಾಪಗಢದ ನಿವಾಸ ಹಾಗೂ ಅಯೋಧ್ಯೆಯ ನಿವಾಸದ ಮೇಲೆ ದಾಳಿ ನಡೆಸಿದಾಗ, ಆತನ ಮನೆಯಲ್ಲಿ "ರಾಮರಾಜ್ಯ ಕೋಶ್" ಎಂದು ಬರೆಯಲಾಗಿದ್ದ ದೇಣಿಗೆ ಪೆಟ್ಟಿಗೆಯೊಂದು ಪತ್ತೆಯಾಗಿದೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಆ ಪೆಟ್ಟಿಗೆಗೆ ಸಕ್ರಿಯವಾಗಿರುವ ಕ್ಯೂಆರ್ ಕೋಡ್ ಒಂದನ್ನು ಅಂಟಿಸಲಾಗಿತ್ತು! ಇದರ ಮೂಲಕವೂ ಭಕ್ತರ ಹಣ ಲೂಟಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸುಭಾಷ್ ಹೊರತುಪಡಿಸಿ ಉಳಿದ ಆರೋಪಿಗಳಿಂದ ಇದುವರೆಗೆ ಒಟ್ಟು 79 ಲಕ್ಷ ರೂ.ಗೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದೆ.

ತನಿಖೆ ತೀವ್ರಗೊಳಿಸಿದ ಸರ್ಕಾರ

ಸ್ಥಳೀಯ ನ್ಯಾಯಾಲಯವು ಆರೋಪಿಗಳಾದ ಅನುಕಲ್ಪ್, ಲವ್‌ಕುಶ್ ಮತ್ತು ಕರುಣೇಶ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಈ ಮಹಾ ಹಗರಣದ ಗಂಭೀರತೆ ಅರಿತ ಉತ್ತರ ಪ್ರದೇಶ ಸರ್ಕಾರವು ತನಿಖೆಯನ್ನು ಕೇವಲ ಎಫ್‌ಐಆರ್‌ಗೆ ಸೀಮಿತಗೊಳಿಸದೆ ವ್ಯಾಪಕಗೊಳಿಸಿದೆ. ಕಳೆದ 5 ವರ್ಷಗಳಿಂದ ಟ್ರಸ್ಟ್‌ಗೆ ಬಂದಿರುವ ಖಾತೆಗಳ ಮರು-ಪರಿಶೀಲನೆಗೆ ಎಸ್‌ಐಟಿ ಆದೇಶಿಸಿದೆ. ಕಳೆದ ಎರಡು ವರ್ಷಗಳಲ್ಲಿ ಮಂದಿರದಲ್ಲಿ ನಡೆದ ಪ್ರಮುಖ ಕಾರ್ಯಕ್ರಮಗಳಿಗೆ ಮಾಡಲಾದ ವೆಚ್ಚಗಳನ್ನೂ ತನಿಖೆಗೆ ಒಳಪಡಿಸಲಾಗಿದೆ. ಇಷ್ಟು ದಿನಗಳ ಕಾಲ ಯಾರಿಗೂ ತಿಳಿಯದಂತೆ ಸರಣಿ ಕಳ್ಳತನ ನಡೆಯಲು ಕಾರಣವಾದ ಭದ್ರತಾ ಲೋಪಗಳು, ಕಳಪೆ ಸಿಸಿಟಿವಿ ಮಾನಿಟರಿಂಗ್ ಹಾಗೂ ಉಸ್ತುವಾರಿ ಅಧಿಕಾರಿಗಳ ಬೇಜವಾಬ್ದಾರಿತನದ ಕುರಿತೂ ಎಸ್‌ಐಟಿ ಪ್ರಶ್ನಿಸಿದೆ.

Read More
Next Story