ಅಯೋಧ್ಯಾ ರಾಮಮಂದಿರ ಹಗರಣ: ಸಿಸಿಟಿವಿ ಕಣ್ಣು ತಪ್ಪಿಸಿ ವಾಶ್‌ರೂಮ್‌ನಲ್ಲಿ ಕೋಟಿ ಕೋಟಿ ಅಡಗಿಸ್ತಿದ್ರು!
x

ಅಯೋಧ್ಯಾ ರಾಮಮಂದಿರ ಹಗರಣ: ಸಿಸಿಟಿವಿ ಕಣ್ಣು ತಪ್ಪಿಸಿ ವಾಶ್‌ರೂಮ್‌ನಲ್ಲಿ ಕೋಟಿ ಕೋಟಿ ಅಡಗಿಸ್ತಿದ್ರು!

ಅಯೋಧ್ಯಾ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ ಪೊಲೀಸರ ವಿಚಾರಣೆಯಲ್ಲಿ ಸ್ಫೋಟಕ ಸತ್ಯ ಒಪ್ಪಿಕೊಂಡಿದ್ದಾನೆ.


ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಅಯೋಧ್ಯಾ ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆಘಾತಕಾರಿ ಸತ್ಯಗಳು ಲಭ್ಯವಾಗಿವೆ. ಬಂಧಿತ ಎಂಟು ಜನ ಆರೋಪಿಗಳ ಪೈಕಿ ಒಬ್ಬನಾದ ಅವಿನಾಶ್ ಶುಕ್ಲಾ, ತಾವು ದೇವಸ್ಥಾನದ ದೇಣಿಗೆ ಹಣವನ್ನು ಹೇಗೆ ಕಳ್ಳತನ ಮಾಡುತ್ತಿದ್ದೆವು ಮತ್ತು ಸಿಸಿಟಿವಿ ಕ್ಯಾಮೆರಾಗಳ ಕಣ್ಣು ತಪ್ಪಿಸಲು ಯಾವೆಲ್ಲಾ ತಂತ್ರಗಳನ್ನು ಬಳಸುತ್ತಿದ್ದೆವು ಎಂಬುದನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೋರ್ಟ್ ಅನುಮತಿ ಪಡೆದ ನಂತರ ಪೊಲೀಸರು ಮಂಗಳವಾರ ಅವಿನಾಶ್ ಶುಕ್ಲಾನನ್ನು ಸುಮಾರು ಎರಡು ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ತಾನು ಕೋಟ್ಯಂತರ ರೂಪಾಯಿ ಹಣವನ್ನು ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿರುವ ಆತು, ಹಣವನ್ನು ಕಳ್ಳತನ ಮಾಡಿದ ತಕ್ಷಣ ಅದನ್ನು ತಾತ್ಕಾಲಿಕವಾಗಿ ದೇವಸ್ಥಾನದ ವಾಶ್‌ರೂಮ್‌ಗಳಲ್ಲಿ (ಶೌಚಾಲಯ) ಅಡಗಿಸಿಡುತ್ತಿದ್ದೆವು. ನಂತರ ಅವಕಾಶ ಸಿಕ್ಕಾಗ ಅಲ್ಲಿಂದ ಹೊರಗೆ ಸಾಗಿಸುತ್ತಿದ್ದೆವು ಎಂದು ಸ್ಫೋಟಕ ಮಾಹಿತಿ ನೀಡಿದ್ದಾನೆ.

ವಿಚಾರಣೆಯ ವೇಳೆ ದೇವಸ್ಥಾನದ ಟ್ರಸ್ಟಿ ಅನಿಲ್ ಮಿಶ್ರಾ ಅವರ ಹೆಸರು ಮತ್ತೊಮ್ಮೆ ಮುಂಚೂಣಿಗೆ ಬಂದಿದ್ದು, ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಆರೋಪಿ ಹೇಳಿಕೊಂಡಿದ್ದಾನೆ. ಇದೇ ಹಗರಣದ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ ಅನಿಲ್ ಮಿಶ್ರಾ ಮತ್ತು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು ಎಂಬುದು ಗಮನಾರ್ಹ.

ವಾಶ್‌ರೂಮ್‌ಗಳೇ ಸೀಕ್ರೆಟ್ ಅಡಗುದಾಣ!

ಪೊಲೀಸ್ ಮೂಲಗಳ ಪ್ರಕಾರ, ಅವಿನಾಶ್ ಶುಕ್ಲಾ ನೀಡಿರುವ ಮಾಹಿತಿ ಹೀಗಿದೆ.

• ದೇಣಿಗೆ ಎಣಿಕೆ ಮಾಡುವ ಕೋಣೆಯ ಒಂದು ಕೀಲಿ ಕೈ ಚಂಪತ್ ರಾಯ್ ಅವರ ಆಪ್ತ ಟಿನ್ನು ಯಾದವ್ ಬಳಿ ಇರುತ್ತಿತ್ತು. ಮತ್ತೊಂದು ಕೀಲಿ ಕೈ ಬ್ಯಾಂಕ್ ನೌಕರರ ಬಳಿ ಇರುತ್ತಿತ್ತು.

• ಕಳ್ಳತನವು ಒಬ್ಬನೇ ಮಾಡುತ್ತಿರಲಿಲ್ಲ. ಹಲವು ಜನರ ಸಂಘಟಿತ ಜಾಲ ಇದರಲ್ಲಿ ಭಾಗಿಯಾಗಿತ್ತು. ಒಬ್ಬ ವ್ಯಕ್ತಿ ಹಣವನ್ನು ಕದ್ದರೆ, ಉಳಿದವರು ಆತನ ಸುತ್ತಲೂ ನಿಂತು ಯಾರಿಗೂ ಕಾಣದಂತೆ ಕವರ್ ಮಾಡುತ್ತಿದ್ದರು.

• ಆರೋಪಿಗಳೆಲ್ಲರೂ ದೇವಸ್ಥಾನದ ಆವರಣದೊಳಗಿನ ಸಿಸಿಟಿವಿ ಕ್ಯಾಮೆರಾಗಳು ಎಲ್ಲೆಲ್ಲಿವೆ ಎಂಬುದನ್ನು ಚೆನ್ನಾಗಿ ಅರಿತಿದ್ದರು. ಕಂಟ್ರೋಲ್ ರೂಮ್‌ನಿಂದ ಸಿಬ್ಬಂದಿ ತಮ್ಮ ಚಲನವಲನಗಳನ್ನು ಸದಾ ಟ್ರ್ಯಾಕ್ ಮಾಡುತ್ತಿಲ್ಲ ಎಂಬುದನ್ನು ಅರಿತಿದ್ದ ಇವರು, ಕ್ಯಾಮೆರಾಗಳಿಗೆ ಸಿಗದ ಜಾಗಗಳಲ್ಲಿ ಹಾಗೂ ಶೌಚಾಲಯಗಳಲ್ಲಿ ಹಣವನ್ನು ಬಚ್ಚಿಡುತ್ತಿದ್ದರು.

• ಟ್ರಸ್ಟ್‌ನ ಪ್ರಮುಖರೊಂದಿಗೆ ತಮಗಿದ್ದ ನಿಕಟ ಸಂಪರ್ಕದ ಕಾರಣದಿಂದಾಗಿ ತಮ್ಮ ಮೇಲೆ ಯಾರೂ ಸಂಶಯ ಪಡುತ್ತಿರಲಿಲ್ಲ ಮತ್ತು ತಮ್ಮನ್ನು ಯಾರೂ ಹತ್ತಿರದಿಂದ ಗಮನಿಸುತ್ತಿರಲಿಲ್ಲ ಎಂದು ಶುಕ್ಲಾ ಒಪ್ಪಿಕೊಂಡಿದ್ದಾನೆ.

ಕದ್ದ ಹಣದಲ್ಲಿ ಸೈಟು, ಮನೆ ಖರೀದಿ!

ದೇಣಿಗೆ ಪೆಟ್ಟಿಗೆಯಿಂದ ಲೂಟಿ ಹೊಡೆದ ಕೋಟ್ಯಂತರ ರೂಪಾಯಿ ಕಳ್ಳತನದ ಹಣವನ್ನು ಆರೋಪಿಗಳು ತಮ್ಮ ಐಷಾರಾಮಿ ಜೀವನಕ್ಕೆ ಬಳಸಿಕೊಂಡಿದ್ದಾರೆ. ಕದ್ದ ಹಣದಿಂದ ಈಗಾಗಲೇ ಜಮೀನು (ಸೈಟು) ಮತ್ತು ಹೊಸ ಮನೆಗಳನ್ನು ಖರೀದಿಸಲಾಗಿದೆ ಎಂದು ಅವಿನಾಶ್ ಶುಕ್ಲಾ ಕನ್ಫೆಷನ್ ಸ್ಟೇಟ್‌ಮೆಂಟ್‌ನಲ್ಲಿ ತಿಳಿಸಿದ್ದಾನೆ. ಸದ್ಯ ಪೊಲೀಸರು ಈ ಹಣದ ವಹಿವಾಟಿನ ಜಾಡು ಮತ್ತು ಆರೋಪಿಗಳ ಆಸ್ತಿಪಾಸ್ತಿಗಳ ಇನ್ವೆಸ್ಟಿಗೇಷನ್ ಆರಂಭಿಸಿದ್ದಾರೆ.

ಎಫ್‌ಐಆರ್ ದಾಖಲಾಗುವ ಮುನ್ನವೇ 58 ಲಕ್ಷ ರಿಕವರಿ!

ಉತ್ತರ ಪ್ರದೇಶ ಸರ್ಕಾರವು ಜೂನ್ 13 ರಂದು ಈ ಹಗರಣದ ತನಿಖೆಗಾಗಿ ಎಸ್‌ಐಟಿ (SIT) ರಚಿಸಿತ್ತು. ಆದರೆ ಅದಕ್ಕೂ ಮುನ್ನವೇ, ಅಂದರೆ ಜೂನ್ 5 ರಂದೇ ರಾಮಮಂದಿರ ಟ್ರಸ್ಟ್ ಅಧಿಕಾರಿಗಳು ಸ್ವತಃ ಕಾರ್ಯಾಚರಣೆ ನಡೆಸಿ ಅವಿನಾಶ್ ಶುಕ್ಲಾ ಮನೆಯಿಂದ 58 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದರು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ! ಇನ್ನುಳಿದ ಹಣವನ್ನು ಜೂನ್ 5 ರಿಂದ ಜೂನ್ 8 ರ ನಡುವೆ ಬ್ಯಾಂಕ್ ವರ್ಗಾವಣೆಗಳ ಮೂಲಕ ಮರಳಿ ಪಡೆಯಲಾಗಿದೆ. ಅಂದರೆ ಈ ಹಗರಣ ಕಾನೂನು ರೂಪ ಪಡೆದುಕೊಳ್ಳುವ ಮುನ್ನವೇ ಒಳಗೊಳಗೆ ಹಣ ವಸೂಲಾತಿ ಪ್ರಕ್ರಿಯೆ ನಡೆದಿತ್ತು ಎಂಬುದು ಸಾಬೀತಾಗಿದೆ.

ಸದ್ಯ ಈ ಪ್ರಕರಣದಲ್ಲಿ ಅವಿನಾಶ್ ಶುಕ್ಲಾ ಹೊರತಾಗಿ ರಾಮಶಂಕರ್ ಅಲಿಯಾಸ್ ತಿನ್ನು ಯಾದವ್, ಸುಭಾಷ್ ಶ್ರೀವಾಸ್ತವ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ರಾಮ್ ಶಂಕರ್ ಮಿಶ್ರಾ ಮತ್ತು ಕರುಣೇಶ್ ಪಾಂಡೆ ಎಂಬ ಎಂಟು ಜನರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

Read More
Next Story