
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಸರ್ಕಾರಿ ಆದಿವಾಸಿ ವಸತಿ ಶಾಲೆಯೊಂದರಲ್ಲಿ ವಿಚಿತ್ರ ಘಟನೆಯೊಂದು ಆತಂಕಕ್ಕೆ ಕಾರಣವಾಗಿದೆ
ದೆವ್ವ-ಭೂತದ ವದಂತಿ: ಹಾಸ್ಟೆಲ್ ತೊರೆದ 600 ಆದಿವಾಸಿ ವಿದ್ಯಾರ್ಥಿಗಳು
ನಾಲ್ವರು ವಿದ್ಯಾರ್ಥಿನಿಯರುಜೋರಾಗಿ ಅಳುತ್ತಾ, ನಗುತ್ತಾ ಅಸಹಜ ವರ್ತನೆ ತೋರಿದ್ದಾರೆ. ಇದನ್ನು ಕಂಡ ಇತರ ವಿದ್ಯಾರ್ಥಿಗಳಲ್ಲಿ ಭಯ ಮೂಡಿದೆ. ಕೆಲ ವಿದ್ಯಾರ್ಥಿನಿಯರು ಕಾಲ್ಗೆಜ್ಜೆಯ ಶಬ್ದ ಕೇಳಿಸುತ್ತಿದೆ ಎಂದು ಹೇಳಿಕೊಂಡಿರುವುದು ಕೂಡ ವದಂತಿಗೆ ಮತ್ತಷ್ಟು ಬಲ ನೀಡಿದೆ.
ಶಾಲೆಯಲ್ಲಿನ ಕೆಲ ವಿದ್ಯಾರ್ಥಿನಿಯರಿಗೆ ‘ದೆವ್ವ ಹಿಡಿದಿದೆ’ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಸುಮಾರು 600 ಆದಿವಾಸಿ ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ನಡೆದಿದೆ. ಚಿಖಲ್ದಾರಾ ತಾಲೂಕಿನ ಡೋಮಾ ಗ್ರಾಮದಲ್ಲಿರುವ ಈ ಆದಿವಾಸಿ ವಸತಿ ಶಾಲೆಯಲ್ಲಿ ಸುಮಾರು 810 ಬಾಲಕ-ಬಾಲಕಿಯರು ವ್ಯಾಸಂಗ ಮಾಡುತ್ತಿದ್ದಾರೆ. ಜುಲೈ 22ರಂದು ನಾಲ್ವರು ವಿದ್ಯಾರ್ಥಿನಿಯರು ಏಕಾಏಕಿ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ ಬಳಿಕ ಈ ಘಟನೆ ನಡೆದಿದೆ.
ವಿದ್ಯಾರ್ಥಿನಿಯರ ಅಸಹಜ ವರ್ತನೆ
ನಾಲ್ವರು ವಿದ್ಯಾರ್ಥಿನಿಯರು ನಿಯಂತ್ರಣವಿಲ್ಲದೆ ಅಳುತ್ತಾ, ನಗುತ್ತಾ ಅಸಹಜ ವರ್ತನೆ ತೋರಿದ್ದಾರೆ. ಇದನ್ನು ಕಂಡ ಇತರ ವಿದ್ಯಾರ್ಥಿಗಳಲ್ಲಿ ಭಯ ಮೂಡಿದೆ. ಕೆಲ ವಿದ್ಯಾರ್ಥಿನಿಯರು ಕಾಲ್ಗೆಜ್ಜೆಯ ಶಬ್ದ ಕೇಳಿಸುತ್ತಿದೆ ಎಂದು ಹೇಳಿಕೊಂಡಿರುವುದು ಕೂಡ ವದಂತಿಗೆ ಮತ್ತಷ್ಟು ಬಲ ನೀಡಿದೆ.
ವಿದ್ಯಾರ್ಥಿನಿಯರ ವರ್ತನೆಗೆ ಅತಿಯಾದ ಮಾನಸಿಕ ಒತ್ತಡ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆರೋಗ್ಯ ತಜ್ಞರ ತಂಡವೂ ಶಾಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದೆ.
ಆದಿವಾಸಿ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿದ್ಯಾರ್ಥಿನಿಯರಲ್ಲಿ ಕಂಡುಬಂದ ಲಕ್ಷಣಗಳಿಗೆ ಯಾವುದೇ ಅತಿಮಾನುಷ ಕಾರಣವಿಲ್ಲ ಎಂದು ಹೇಳಿದ್ದಾರೆ. ಇದು ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ಸಾಮೂಹಿಕ ಅಥವಾ ಆಯ್ದ ಹಿಸ್ಟೀರಿಯಾ ರೀತಿಯ ಸ್ಥಿತಿಯಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಧಿಕಾರಿಗಳು ಸಿದ್ಧಪಡಿಸಿದ ಮಾನಸಿಕ ಆರೋಗ್ಯ ವರದಿಯಲ್ಲಿಯೂ ಭಯ, ಒತ್ತಡ, ಮೂಢನಂಬಿಕೆ ಮತ್ತು ಸ್ಥಳೀಯ ನಂಬಿಕೆಗಳು ಈ ಪರಿಸ್ಥಿತಿಗೆ ಕಾರಣವಾಗಿರಬಹುದು ಎಂದು ಉಲ್ಲೇಖಿಸಲಾಗಿದೆ.
‘ಮಹುವಾ ಮರದಲ್ಲಿ ಆತ್ಮಗಳಿದ್ದವು’ ಎಂಬ ನಂಬಿಕೆ
ಶಾಲೆಯ ಆವರಣದಲ್ಲಿ ಹಿಂದೆ ಮಹುವಾ ಮರ ಇತ್ತು. ಆ ಮರದಲ್ಲಿ ಆತ್ಮಗಳು ವಾಸಿಸುತ್ತಿದ್ದವು ಎಂಬ ನಂಬಿಕೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯರಲ್ಲಿ ಇತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶಾಲಾ ಆಡಳಿತ ಮರವನ್ನು ಕಡಿದ ಬಳಿಕ ಆ ಆತ್ಮಗಳು ಕೋಪಗೊಂಡು ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿವೆ ಎಂಬ ವದಂತಿ ಹರಡಿತ್ತು.
ಇದರ ಜೊತೆಗೆ ಶಾಲೆಯ ಹಿಂಭಾಗದಲ್ಲಿರುವ ಸ್ಥಳೀಯ ದೇವರ ದೇವಸ್ಥಾನದ ಜಾಗಕ್ಕೆ ಶಾಲೆಯ ಒಳಚರಂಡಿ ಮಾರ್ಗದಿಂದ ಹಾನಿಯಾಗಿದ್ದು, ಇದರಿಂದ ದೇವರು ಕೋಪಗೊಂಡಿದ್ದಾನೆ ಎಂಬ ಮತ್ತೊಂದು ನಂಬಿಕೆಯೂ ಹರಡಿತ್ತು.
ಯುವಕನ ಸಾವಿಗೂ ‘ಭೂತ’ದ ಕಥೆ ಜೋಡಣೆ
ಶಾಲೆಯ ಸಮೀಪದ ಹೊಲವೊಂದರಲ್ಲಿ ಆದಿವಾಸಿ ಯುವಕನೊಬ್ಬ ಮೃತಪಟ್ಟಿದ್ದ. ಆತನ ಆತ್ಮವೇ ಭೂತವಾಗಿ ಶಾಲೆಯ ವಿದ್ಯಾರ್ಥಿಗಳನ್ನು ಕಾಡುತ್ತಿದೆ ಎಂಬ ಮತ್ತೊಂದು ವದಂತಿಯೂ ಹರಡಿತ್ತು ಎಂದು ವರದಿ ತಿಳಿಸಿದೆ. ಈ ಎಲ್ಲ ನಂಬಿಕೆಗಳು ವಿದ್ಯಾರ್ಥಿಗಳಲ್ಲಿದ್ದ ಭಯ ಮತ್ತು ಮಾನಸಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಢನಂಬಿಕೆ ನಿರ್ಮೂಲನೆಗಾಗಿ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ್ ಸಮಿತಿಯ ಪದಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದಾರೆ. ಘಟನೆಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬೇಕು ಮತ್ತು ವದಂತಿಗಳಿಗೆ ಭಯಪಡಬಾರದು ಎಂದು ಅವರು ಮನವಿ ಮಾಡಿದ್ದಾರೆ. ಅಮರಾವತಿ ಸಂಸದ ಬಲವಂತ್ ವಾಂಖಡೆ ಕೂಡ ವಿದ್ಯಾರ್ಥಿಗಳು ಆತಂಕಪಡದೆ ಶಾಲೆಗೆ ಮರಳಿ ತರಗತಿಗಳಿಗೆ ಹಾಜರಾಗುವಂತೆ ಮನವಿ ಮಾಡಿದ್ದಾರೆ.
ವಿದ್ಯಾರ್ಥಿನಿಯರನ್ನು ಮರಳಿ ಕರೆತರಲು ಪ್ರಯತ್ನ
ವಿದ್ಯಾರ್ಥಿನಿಯರಿಗೆ ಸಮಾಲೋಚನೆ ನೀಡುವ ಮೂಲಕ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಸಂಜಯ್ ಚೌಧರಿ ತಿಳಿಸಿದ್ದಾರೆ. ಈಗಾಗಲೇ ಕೆಲವು ವಿದ್ಯಾರ್ಥಿಗಳು ಶಾಲೆಗೆ ಮರಳಿದ್ದಾರೆ. ಉಳಿದ ವಿದ್ಯಾರ್ಥಿಗಳನ್ನೂ ಹಂತ ಹಂತವಾಗಿ ಶಾಲೆಗೆ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

