
ಪ್ರತೀಕ್ ಯಾದವ್ ಸಾವಿನ ಹಿಂದೆ ಇದ್ಯಾ ಸಂಚು? ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಸಹೋದರ ಪ್ರತೀಕ್ ಯಾದವ್ ನಿಧನರಾಗಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಶ್ವಾಸಕೋಶದ ಅಪಧಮನಿ ಬ್ಲಾಕ್ ಆಗಿರುವುದು ಮತ್ತು ದೇಹದ ಮೇಲೆ ಆರು ಗಾಯದ ಗುರುತುಗಳು ಪತ್ತೆಯಾಗಿವೆ.
ಸಮಾಜವಾದಿ ಪಕ್ಷದ ನಾಯಕ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸಹೋದರ ಪ್ರತೀಕ್ ಯಾದವ್ (36) ಅವರ ನಿಧನಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದೆ. ಕೆಜಿಎಂಯು ಆಸ್ಪತ್ರೆಯ ವೈದ್ಯರು ನೀಡಿರುವ ವರದಿಯ ಪ್ರಕಾರ, ಪ್ರತೀಕ್ ಯಾದವ್ ಅವರ ಸಾವಿಗೆ 'ಪಲ್ಮನರಿ ಎಂಬೋಲಿಸಂ' (Pulmonary Thromboembolism) ಅಂದರೆ ಶ್ವಾಸಕೋಶದ ಅಪಧಮನಿಯಲ್ಲಿ ರಕ್ತ ಹೆಪ್ಪುಗಟ್ಟಿ ಉಂಟಾದ ಹೃದಯ ಸ್ತಂಭನ ಕಾರಣ ಎಂದು ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆಯಲ್ಲೇನಿದೆ?
ಪ್ರತೀಕ್ ಅವರ ದೇಹದ ಇತರೆ ಭಾಗಗಳಿಂದ ಬಂದ ರಕ್ತದ ಹೆಪ್ಪುಗಟ್ಟುವಿಕೆ ಶ್ವಾಸಕೋಶದ ರಕ್ತನಾಳಗಳನ್ನು ಬಂದ್ ಮಾಡಿದ್ದರಿಂದ ಉಸಿರಾಟ ಮತ್ತು ರಕ್ತ ಪರಿಚಲನೆ ಸ್ಥಗಿತಗೊಂಡಿದೆ. ಮರಣೋತ್ತರ ಪರೀಕ್ಷೆಯಲ್ಲಿ ಪ್ರತೀಕ್ ದೇಹದ ಮೇಲೆ ಒಟ್ಟು 6 ಗಾಯಗಳು ಪತ್ತೆಯಾಗಿವೆ. ಇವುಗಳಲ್ಲಿ ಕೆಲವು ಗಾಯಗಳು 5-7 ದಿನ ಹಳೆಯದಾಗಿದ್ದರೆ, ಇನ್ನು ಕೆಲವು ಗಾಯಗಳು ಸಾವಿನ ಹಿಂದಿನ ದಿನ ಉಂಟಾದವುಗಳಾಗಿವೆ ಎಂದು ವರದಿ ಹೇಳಿದೆ. ಹೆಚ್ಚಿನ ತನಿಖೆಗಾಗಿ ಅವರ ಹೃದಯ ಮತ್ತು ಶ್ವಾಸಕೋಶದ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.
ಸಾವಿನ ಹಿನ್ನೆಲೆ
ಪ್ರತೀಕ್ ಯಾದವ್ ಕಳೆದ ಕೆಲ ದಿನಗಳಿಂದ ಲಿವರ್ ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಬುಧವಾರ ಮುಂಜಾನೆ 6:15ಕ್ಕೆ ಪರಿಸ್ಥಿತಿ ಬಿಗಡಾಯಿಸಿದಾಗ ಅವರನ್ನು ತಕ್ಷಣ ಮೆದಾಂತ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆ ನಡೆದ ಸಮಯದಲ್ಲಿ ಅವರ ಪತ್ನಿ ಹಾಗೂ ಬಿಜೆಪಿ ನಾಯಕಿ ಅಪರ್ಣಾ ಯಾದವ್ ನಗರದಲ್ಲಿ ಇರಲಿಲ್ಲ.
ಅಖಿಲೇಶ್ ಯಾದವ್ ಕಂಬನಿ
ತಮ್ಮ ಸಹೋದರನ ಅಗಲಿಕೆಗೆ ಎಕ್ಸ್ (ಟ್ವಿಟ್ಟರ್) ಮೂಲಕ ಸಂತಾಪ ಸೂಚಿಸಿರುವ ಅಖಿಲೇಶ್ ಯಾದವ್, ಪ್ರತೀಕ್ ಯಾದವ್ ನಿಧನ ತೀವ್ರ ದುಃಖ ತಂದಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.
ಯಾರು ಈ ಪ್ರತೀಕ್ ಯಾದವ್?
1988ರಲ್ಲಿ ಜನಿಸಿದ ಪ್ರತೀಕ್ ಯಾದವ್ ಅವರು ರಾಜಕೀಯದಿಂದ ದೂರವಿದ್ದು, ಫಿಟ್ನೆಸ್ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. 2011ರಲ್ಲಿ ಅಪರ್ಣಾ ಬಿಸ್ಟ್ ಅವರನ್ನು ವಿವಾಹವಾಗಿದ್ದರು. ಅಪರ್ಣಾ ಅವರು ನಂತರ ಬಿಜೆಪಿ ಸೇರುವ ಮೂಲಕ ಸುದ್ದಿಯಾಗಿದ್ದರು. ಇತ್ತೀಚೆಗಷ್ಟೇ ಪ್ರತೀಕ್ ಅವರು ಕೌಟುಂಬಿಕ ಕಾರಣಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದರು, ಆದರೆ ಜನವರಿ 28ರಂದು ಪತ್ನಿಯೊಂದಿಗೆ ಸುಖಾಂತ್ಯ ಕಂಡಿರುವುದಾಗಿ ಘೋಷಿಸಿದ್ದರು.

