
ಬಾಂಗ್ಲಾದೇಶದ ಹಿಂದೂ ಪೊಲೀಸ್ ಅಧಿಕಾರಿ ಕೊಲೆಗೈದ ಆರೋಪಿ ದೆಹಲಿ ಏರ್‌ಪೋರ್ಟ್‌ನಲ್ಲಿ ಬಂಧನ
ಬಾಂಗ್ಲಾದೇಶದ ಹಿಂದೂ ಪೊಲೀಸ್ ಅಧಿಕಾರಿ ಸಂತೋಷ್ ಶರ್ಮಾ ಹತ್ಯೆ ಮಾಡಿ ಯುರೋಪ್‌ಗೆ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಅಹಮದ್ ರಜಾ ಹಸನ್ ಮೆಹದಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ಪೊಲೀಸ್ ಅಧಿಕಾರಿಯೊಬ್ಬರನ್ನು ಭೀಕರವಾಗಿ ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ 'ಇಂಡಿಯಾ ಟುಡೇ' ವರದಿ ಮಾಡಿದೆ. ಬಂಧಿತ ಆರೋಪಿಯನ್ನು ಅಹಮದ್ ರಜಾ ಹಸನ್ ಮೆಹದಿ ಎಂದು ಗುರುತಿಸಲಾಗಿದೆ.
ಮೆಹದಿ ಭಾರತದ ಮಾರ್ಗವಾಗಿ ಯುರೋಪ್‌ಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ದೆಹಲಿಯ ಇಮಿಗ್ರೇಷನ್ ಇಲಾಖೆಯ ಅಧಿಕಾರಿಗಳು ಈತನನ್ನು ತಡೆದಿದ್ದಾರೆ. ಮೆಹದಿ ದೆಹಲಿಗೆ ಆಗಮಿಸುವ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಅಧಿಕಾರಿಗಳು, ಆತ ವಿಮಾನ ಹತ್ತುವ ಮೊದಲೇ ವಶಕ್ಕೆ ಪಡೆದಿದ್ದಾರೆ. ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿದ ನಂತರ ಆತನನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದೆ.
ಕೊಲೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಡಾಯಿ
2024ರಲ್ಲಿ ಬಾಂಗ್ಲಾದೇಶದ ಬನಿಯಾಚಾಂಗ್ ಪೊಲೀಸ್ ಠಾಣೆಯಲ್ಲಿದ್ದ ಎಸ್‌ಐ (SI) ಸಂತೋಷ್ ಶರ್ಮಾ ಎಂಬ ಹಿಂದೂ ಅಧಿಕಾರಿಯನ್ನು ಕೊಂದ ಹೊಣೆಯನ್ನು ಮೆಹದಿ ಒಪ್ಪಿಕೊಂಡಿದ್ದನು. ಬಾಂಗ್ಲಾದೇಶದ ಪೊಲೀಸ್ ಠಾಣೆಯೊಳಗೆ ಕುಳಿತು ಈ ಬಗ್ಗೆ ಆತ ಹೇಳಿಕೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಘಟನೆಯ ಹಿನ್ನೆಲೆ
ಟಾರ್ಗೆಟ್ ಕಿಲ್ಲಿಂಗ್: 2024ರ ಆಗಸ್ಟ್ 5ರಂದು ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ವೇಳೆ ಸಂತೋಷ್ ಶರ್ಮಾ ಅವರನ್ನು ಹತ್ಯೆಗೈಯಲಾಗಿತ್ತು. ಅಷ್ಟೇ ಅಲ್ಲದೆ, ಅವರ ಮೃತದೇಹವನ್ನು ಮರವೊಂದಕ್ಕೆ ನೇತು ಹಾಕಲಾಗಿತ್ತು. ಇವರು ಹಿಂದೂ ಎಂಬ ಕಾರಣಕ್ಕಾಗಿಯೇ ಇವರನ್ನು ಗುರಿಯಾಗಿಸಿ ಕೊಲೆ ಮಾಡಲಾಗಿತ್ತು ಎಂಬ ಆರೋಪಗಳಿವೆ.
ಅಲ್ಪಸಂಖ್ಯಾತರ ಮೇಲೆ ದಾಳಿ: ಕೋಟಾ ವಿರೋಧಿ ವಿದ್ಯಾರ್ಥಿ ಪ್ರತಿಭಟನೆಯು ಕ್ರಮೇಣ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಹಿಂದೂಗಳು ಮತ್ತು ಅವರ ಆರಾಧನಾ ಮಂದಿರಗಳ ಮೇಲೆ ವ್ಯಾಪಕ ದಾಳಿಗಳು ನಡೆದಿದ್ದವು.
ಪ್ರತಿಭಟನೆಗೆ ಕಾರಣವೇನು?
ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಒಂದು ವಿಶೇಷ ಮೀಸಲಾತಿ ಪದ್ಧತಿ ಜಾರಿಯಲ್ಲಿತ್ತು. ಇದರ ಪ್ರಕಾರ, ಒಟ್ಟು ಉದ್ಯೋಗಗಳಲ್ಲಿ ಶೇ. 30ರಷ್ಟು ಸೀಟುಗಳನ್ನು 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರ (ಮುಕ್ತಿ ಯೋಧರ) ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಮೀಸಲಿಡಲಾಗಿತ್ತು.
ಬಾಂಗ್ಲಾದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವಾಗ, ಅರ್ಹತೆ (Merit) ಆಧಾರದ ಮೇಲೆ ಕೆಲಸ ಸಿಗುವ ಬದಲು, ಕೇವಲ ವಂಶಪಾರಂಪರ್ಯವಾಗಿ ಬರುವ ಈ ಮೀಸಲಾತಿಯಿಂದ ತಮಗೆ ಅನ್ಯಾಯವಾಗುತ್ತಿದೆ ಎಂಬುದು ಸಾಮಾನ್ಯ ವಿದ್ಯಾರ್ಥಿಗಳ ದೂರಾಗಿತ್ತು. ಶೇ. 30ರಷ್ಟು ಈ ಒಂದು ವರ್ಗಕ್ಕೆ ಹೋದರೆ, ಉಳಿದ ವರ್ಗದವರಿಗೂ ಸೇರಿ ಒಟ್ಟು ಶೇ. 56ರಷ್ಟು ಮೀಸಲಾತಿಯೇ ಆಗುತ್ತಿತ್ತು. ಇದರಿಂದ ಕೇವಲ ಶೇ. 44ರಷ್ಟು ಉದ್ಯೋಗಗಳು ಮಾತ್ರ ಮುಕ್ತ ಸ್ಪರ್ಧೆಗೆ ಲಭ್ಯವಿರುತ್ತಿದ್ದವು.
ಈ 'ಮುಕ್ತಿ ಯೋಧರ' ಕುಟುಂಬದವರು ಹೆಚ್ಚಾಗಿ ಅಂದಿನ ಪ್ರಧಾನಿ ಶೇಖ್ ಹಸೀನಾ ಅವರ 'ಅವಾಮಿ ಲೀಗ್' ಪಕ್ಷದ ಬೆಂಬಲಿಗರಾಗಿದ್ದರು. ಬರಬರುತ್ತಾ ಇದು ಕೇವಲ ಮೀಸಲಾತಿ ವಿರೋಧಿ ಹೋರಾಟವಾಗಿ ಉಳಿಯಲಿಲ್ಲ. ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಶೇಖ್ ಹಸೀನಾ ಅವರು 'ರಜಾಕರ್‌ಗಳು' (ವಿಮೋಚನಾ ಯುದ್ಧದ ಸಮಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದವರು) ಎಂದು ಕರೆದದ್ದು ಗಾಯದ ಮೇಲೆ ಉಪ್ಪು ಸವರಿದಂತಾಯಿತು. ಇದು ದೊಡ್ಡ ಮಟ್ಟದ ಹಿಂಸಾಚಾರ, ನೂರಾರು ಜನರ ಸಾವು ಮತ್ತು ಅಂತಿಮವಾಗಿ ಶೇಖ್ ಹಸೀನಾ ಅವರು ದೇಶ ತೊರೆಯುವಂತಹ ಪರಿಸ್ಥಿತಿಗೆ ಕಾರಣವಾಯಿತು

