
ಮೊದಲ ವಿಮಾನ ಹಾರಾಟಕ್ಕೆ ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಚಾಲನೆ ನೀಡಿದರು.
ನೋಯ್ಡಾ ವಿಮಾನ ನಿಲ್ದಾಣ ಆರಂಭ: ಜಮೀನು ನೀಡಿದ ರೈತರಿಗೇ ಮೊದಲ ಹಾರಾಟದ ಗೌರವ!
ವಿಮಾನ ನಿಲ್ದಾಣದ ಮೊದಲ ಹಂತದ ಅಭಿವೃದ್ಧಿಗಾಗಿ ಜಮೀನು ಬಿಟ್ಟುಕೊಟ್ಟ ಜೆವಾರ್ ಭಾಗದ ಗ್ರಾಮಸ್ಥರನ್ನು ಹೊತ್ತ ವಿಮಾನವು, ಮೊದಲ ಲ್ಯಾಂಡಿಂಗ್ ಆದ ಕೆಲವೇ ಸಮಯದ ಬಳಿಕ ಇದೇ ಗ್ರೀನ್‌ಫೀಲ್ಡ್ ನಿಲ್ದಾಣದಿಂದ ಲಕ್ನೋಗೆ ಯಶಸ್ವಿಯಾಗಿ ಟೇಕ್ ಆಫ್ ಆಯಿತು.
ರಾಷ್ಟ್ರೀಯ ರಾಜಧಾನಿ ವಲಯ ಹಾಗೂ ಪಶ್ಚಿಮ ಉತ್ತರ ಪ್ರದೇಶದ ಮಹತ್ವಾಕಾಂಕ್ಷೆಯ ಯೋಜನೆಯಾದ 'ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ' ಸೋಮವಾರ ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸುವ ಮೂಲಕ ಹೊಸ ಇತಿಹಾಸ ಬರೆದಿದೆ. ಲಕ್ನೋದಿಂದ ಹೊರಟ ಇಂಡಿಗೋ ವಿಮಾನವು ಯಶಸ್ವಿಯಾಗಿ ಇಳಿಯುವ ಮೂಲಕ ನಿಲ್ದಾಣದ ಮೊದಲ ಲ್ಯಾಂಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮೀನು ನೀಡಿದ ರೈತರಿಗೇ ಮೊದಲ ಟೇಕ್ ಆಫ್ ಭಾಗ್ಯ!
ವಿಮಾನ ನಿಲ್ದಾಣದ ಮೊದಲ ಹಂತದ ಅಭಿವೃದ್ಧಿಗಾಗಿ ಜಮೀನು ಬಿಟ್ಟುಕೊಟ್ಟ ಜೆವಾರ್ ಭಾಗದ ಗ್ರಾಮಸ್ಥರನ್ನು ಹೊತ್ತ ವಿಮಾನವು, ಮೊದಲ ಲ್ಯಾಂಡಿಂಗ್ ಆದ ಕೆಲವೇ ಸಮಯದ ಬಳಿಕ ಇದೇ ಗ್ರೀನ್‌ಫೀಲ್ಡ್ ನಿಲ್ದಾಣದಿಂದ ಲಕ್ನೋಗೆ ಯಶಸ್ವಿಯಾಗಿ ಟೇಕ್ ಆಫ್ ಆಯಿತು. ಈ ಮೂಲಕ ಭೂಮಿ ನೀಡಿದ ಅನ್ನದಾತರಿಗೆ ಮೊದಲ ವಿಮಾನ ಪ್ರಯಾಣದ ಗೌರವ ಸಲ್ಲಿಸಲಾಯಿತು.
ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಕ್ನೋದಿಂದ ಬೆಳಿಗ್ಗೆ 7.12 ಕ್ಕೆ ನಿರ್ಗಮನವಾದ ಇಂಡಿಗೋ ವಿಮಾನ ಬೆಳಿಗ್ಗೆ 7.58 ಕ್ಕೆ ನೋಯ್ಡಾದಲ್ಲಿ ಲ್ಯಾಂಡಿಂಗ್ ಆಯಿತು. ನೋಯ್ಡಾದಿಂದ ಬೆಳಿಗ್ಗೆ 8.19 ಕ್ಕೆ ಮೊದಲ ಟೇಕ್ ಆಫ್ ಆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣ್ಯರ ಉಪಸ್ಥಿತಿ
ಮೊದಲ ವಿಮಾನದಲ್ಲಿ ಜೆವಾರ್ ಶಾಸಕ ಧೀರೇಂದ್ರ ಸಿಂಗ್, ಯಮುನಾ ಎಕ್ಸ್‌ಪ್ರೆಸ್‌ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಸಿಇಒ ರಾಕೇಶ್ ಸಿಂಗ್, ಹೆಚ್ಚುವರಿ ಸಿಇಒ ಶೈಲೇಂದ್ರ ಭಾಟಿಯಾ ಹಾಗೂ ಮಾಜಿ ಜೆವಾರ್ ಎಸ್‌ಡಿಎಂ ಅಭಯ್ ಸಿಂಗ್ ಸೇರಿದಂತೆ ಹಲವು ಉನ್ನತಾಧಿಕಾರಿಗಳು ಪ್ರಯಾಣ ಬೆಳೆಸಿದರು.
ಪ್ರಾದೇಶಿಕ ಅಭಿವೃದ್ಧಿಗೆ ಹೊಸ ದಿಕ್ಸೂಚಿ
ಈ ಹೊಸ ವಾಯು ಸಂಪರ್ಕವು ಕೇವಲ ಪ್ರಯಾಣದ ಸಮಯವನ್ನು ಉಳಿಸುವುದಲ್ಲದೆ, ಉದ್ಯಮಿಗಳು, ವೃತ್ತಿಪರರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ನೆರವಾಗಲಿದೆ. ಸಂಪೂರ್ಣ ನಿಲ್ದಾಣವನ್ನು 'ಬಹುಮಾದರಿ ಸಾರಿಗೆ ಕೇಂದ್ರ'ವಾಗಿ ರೂಪಿಸಲಾಗಿದ್ದು, ವಾಯು ಮತ್ತು ರಸ್ತೆ ಸಾರಿಗೆಯನ್ನು ಅತ್ಯುತ್ತಮವಾಗಿ ಸಂಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

