ಇನ್ನು ಮುಂದೆ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್ ಸಿಗಲ್ಲ
x

ಹೊಸ ಡ್ರಗ್ಸ್ ನಿಯಮಾವಳಿ ತಿದ್ದುಪಡಿಯ ಅಡಿಯಲ್ಲಿ ಕೇಂದ್ರ ಸರ್ಕಾರವು ಕೆಮ್ಮಿನ ಸಿರಪ್ ಸೇರಿದಂತೆ ಎಲ್ಲಾ ದ್ರವರೂಪದ ಔಷಧಗಳ ಮುಕ್ತ (OTC) ಮಾರಾಟವನ್ನು ನಿಷೇಧಿಸಿದೆ.

ಇನ್ನು ಮುಂದೆ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್ ಸಿಗಲ್ಲ

ಭಾರತದಲ್ಲಿ ಕೆಮ್ಮಿನ ಸಿರಪ್‌ಗಳ ಮುಕ್ತ ಮಾರಾಟ ನಿಷೇಧಿಸಲಾಗಿದೆ. ಹೊಸ ನಿಯಮದ ಪ್ರಕಾರ ಇನ್ನು ಮುಂದೆ ದ್ರವರೂಪದ ಸಿರಪ್ ಔಷಧಗಳನ್ನು ಖರೀದಿಸಲು ವೈದ್ಯರ ಅಧಿಕೃತ ಪ್ರಿಸ್ಕ್ರಿಪ್ಷನ್ ಕಡ್ಡಾಯವಾಗಿದೆ.


ಕೇಂದ್ರ ಸರ್ಕಾರವು ಕೆಮ್ಮಿನ ಸಿರಪ್‌ಗಳು ಸೇರಿದಂತೆ ಎಲ್ಲಾ ರೀತಿಯ ಸಿರಪ್ (ದ್ರವರೂಪದ) ಔಷಧಗಳ ಮಾರಾಟಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಈ ಔಷಧಗಳನ್ನು ಮೆಡಿಕಲ್ ಶಾಪ್‌ಗಳಲ್ಲಿ ನೇರವಾಗಿ ಖರೀದಿಸಲು ಸಾಧ್ಯವಿಲ್ಲ, ವೈದ್ಯರ ಲಿಖಿತ ಚೀಟಿ (Prescription) ಇರುವುದು ಕಡ್ಡಾಯವಾಗಿದೆ.

ಏನಿದು ಕೇಂದ್ರದ ಹೊಸ ನಿಯಮ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊರಡಿಸಿರುವ ಹೊಸ ಅಧಿಸೂಚನೆಯ ಪ್ರಕಾರ, ಕೆಮ್ಮಿನ ಸಿರಪ್‌ಗಳು ಸೇರಿದಂತೆ ಇತರೆ ಸಿರಪ್ ಔಷಧಗಳನ್ನು ಕೌಂಟರ್‌ನಲ್ಲಿ ನೇರವಾಗಿ ಮಾರಾಟ ಮಾಡುವಂತಿಲ್ಲ.

ಕಾನೂನು ತಿದ್ದುಪಡಿ

1945ರ ಡ್ರಗ್ಸ್ ನಿಯಮಾವಳಿಯ (Drugs Rules, 1945) 'ಶೆಡ್ಯೂಲ್ ಕೆ' ಅಡಿಯಲ್ಲಿದ್ದ 'ಸಿರಪ್ಸ್' ಎಂಬ ಪದವನ್ನು ಕೈಬಿಡಲಾಗಿದೆ. ಡ್ರಗ್ಸ್ (ಐದನೇ ತಿದ್ದುಪಡಿ) ನಿಯಮಗಳು, 2026ರ ಅಡಿಯಲ್ಲಿ ಈ ಬದಲಾವಣೆ ತರಲಾಗಿದ್ದು, ಜೂನ್ 9 ರಂದು ಇದನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಸಾರ್ವಜನಿಕರ ಅಭಿಪ್ರಾಯ ಸಂಗ್ರಹ

ಈ ನಿಯಮವನ್ನು ಜಾರಿಗೆ ತರುವ ಮುನ್ನ, ಡಿಸೆಂಬರ್ 29, 2025 ರಂದು ಕರಡು ಅಧಿಸೂಚನೆಯನ್ನು ಹೊರಡಿಸಿ ಸಾರ್ವಜನಿಕರು ಹಾಗೂ ಸಂಬಂಧಪಟ್ಟವರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಬಂದ ಎಲ್ಲಾ ಸಲಹೆಗಳನ್ನು ಪರಿಶೀಲಿಸಿದ ಬಳಿಕವೇ ಸರ್ಕಾರ ಈ ಅಂತಿಮ ನಿರ್ಧಾರ ತಗೆದುಕೊಂಡಿದೆ. 'ಡ್ರಗ್ಸ್ ತಾಂತ್ರಿಕ ಸಲಹಾ ಮಂಡಳಿ'ಯ ಜೊತೆ ಸಮಾಲೋಚನೆ ನಡೆಸಿದ ಬಳಿಕವೇ ಕೇಂದ್ರ ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.

ಈ ನಿಯಮದಿಂದಾಗಿ ಸಾರ್ವಜನಿಕರು ಸಣ್ಣಪುಟ್ಟ ಕೆಮ್ಮು ಅಥವಾ ನೆಗಡಿಗೆ ತಾವಾಗಿಯೇ ಮೆಡಿಕಲ್ ಶಾಪ್‌ಗೆ ಹೋಗಿ ಸಿರಪ್‌ಗಳನ್ನು ಕೊಳ್ಳುವ ಅಭ್ಯಾಸಕ್ಕೆ ಬ್ರೇಕ್ ಬೀಳಲಿದ್ದು, ವೈದ್ಯರ ಸಲಹೆ ಪಡೆಯುವುದು ಅನಿವಾರ್ಯವಾಗಲಿದೆ.

Read More
Next Story