ಇಂಧನ ಕ್ಷೇತ್ರದಲ್ಲಿ ಹೊಸ ಕ್ರಾಂತಿ; ಶೇ 100ರಷ್ಟು ಎಥೆನಾಲ್ ಬಳಕೆಗೆ ಗಡ್ಕರಿ ಗ್ರೀನ್ ಸಿಗ್ನಲ್
x

ಇಂಧನ ಕ್ಷೇತ್ರದಲ್ಲಿ ಹೊಸ ಕ್ರಾಂತಿ; ಶೇ 100ರಷ್ಟು ಎಥೆನಾಲ್ ಬಳಕೆಗೆ ಗಡ್ಕರಿ ಗ್ರೀನ್ ಸಿಗ್ನಲ್

ದೇಶದಲ್ಲಿ ನವೀಕರಿಸಬಹುದಾದ ಮತ್ತು ಶುದ್ಧ ಇಂಧನದ ಬಳಕೆ ಹೆಚ್ಚಿಸುವುದು ಹಾಗೂ ಕ್ರಮೇಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವಲಂಬನೆ ತಪ್ಪಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ," ಎಂದು ಗಡ್ಕರಿ ಹೇಳಿದ್ದಾರೆ


ಆಮದು ಇಂಧನದ ಮೇಲೆ ಅವಲಂಬನೆ ತಗ್ಗಿಸಿ, ದೇಶಿಯ ಹಸಿರು ಇಂಧನಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಐತಿಹಾಸಿಕವಾದ ಹೆಜ್ಜೆ ಇಟ್ಟಿದೆ. ದೇಶದಲ್ಲಿ ಇನ್ನು ಮುಂದೆ ಶೇ 100 ರಷ್ಟು ಎಥೆನಾಲ್ ಬಳಸಿ ವಾಹನ ಚಲಾಯಿಸಲು ಕಾನೂನುಬದ್ಧ ಅನುಮತಿ ನೀಡಲಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಮಹತ್ವದ ನಿರ್ಧಾರಕ್ಕೆ ಸಂಬಂಧಿಸಿದ ಕಡತಕ್ಕೆ ಶುಕ್ರವಾರ ರಾತ್ರಿ ಸಹಿ ಹಾಕಿದ್ದು, ಇದನ್ನು ಅಧಿಕೃತ ಕಾನೂನು ಪ್ರಕ್ರಿಯೆಗೆ ಒಳಪಡಿಸಲು ಕಳುಹಿಸಿಕೊಡಲಾಗಿದೆ. ಸಂಪೂರ್ಣ ಎಥೆನಾಲ್ ಇಂಧನ ಬಳಕೆಗೆ ಪೂರಕವಾದ ನಿಯಂತ್ರಕ ಚೌಕಟ್ಟು ಮತ್ತು ನಿಯಮಾವಳಿಗಳನ್ನು ಸದ್ಯದಲ್ಲೇ ಅಂತಿಮಗೊಳಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಮುಕ್ತ ಭಾರತದತ್ತ ಹೆಜ್ಜೆ

“ದೇಶದಲ್ಲಿ ನವೀಕರಿಸಬಹುದಾದ ಮತ್ತು ಶುದ್ಧ ಇಂಧನದ ಬಳಕೆ ಹೆಚ್ಚಿಸುವುದು ಹಾಗೂ ಕ್ರಮೇಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವಲಂಬನೆ ತಪ್ಪಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ," ಎಂದು ಗಡ್ಕರಿ ಹೇಳಿದ್ದಾರೆ. ಈ ಹೊಸ ನೀತಿಯಿಂದಾಗಿ ಬಿಲಿಯನ್ ಗಟ್ಟಲೆ ವಿದೇಶಿ ವಿನಿಮಯ ಉಳಿತಾಯವಾಗುವುದಲ್ಲದೆ, ದೇಶದ ಪರಿಸರ ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

ವಾಹನ ಮಾಲೀಕರಿಗಿರುವ ಸವಾಲುಗಳೇನು?

ಪ್ರಸ್ತುತ ಭಾರತೀಯ ರಸ್ತೆಗಳಲ್ಲಿ ಚಲಿಸುತ್ತಿರುವ ಬಹುತೇಕ ವಾಹನಗಳು ಶೇ 100ರಷ್ಟು ಎಥೆನಾಲ್ ಬಳಸಲು ಸೂಕ್ತವಾಗಿಲ್ಲ. ಕಾರು ಮತ್ತು ದ್ವಿಚಕ್ರ ವಾಹನಗಳು ಕೇವಲ ಕಡಿಮೆ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸಲು ಮಾತ್ರ ಶಕ್ತವಾಗಿವೆ.

ಶೇ 85 ಅಥವಾ ಶೇ 100ರಷ್ಟು ಎಥೆನಾಲ್ ಇಂಧನ ತಡೆದುಕೊಳ್ಳುವ ವಿಶೇಷ ಹಾರ್ಡ್ವೇರ್ ಸಾಮಗ್ರಿ ಮತ್ತು ಎಂಜಿನ್ ಪ್ಯಾರಾಮೀಟರ್‌ಗಳು ಸಾಮಾನ್ಯ ವಾಹನಗಳಲ್ಲಿ ಇಲ್ಲ. ಎಥೆನಾಲ್ ತುಕ್ಕು ಹಿಡಿಸುವ ಗುಣ ಹೊಂದಿರುವುದರಿಂದ, ಸಾಮಾನ್ಯ ಎಂಜಿನ್ಗಳು ಇದಕ್ಕೆ ಸ್ಪಂದಿಸುವುದಿಲ್ಲ.

ಮಾರುಕಟ್ಟೆಗೆ ಬರಲಿವೆ 'ಫ್ಲೆಕ್ಸ್-ಇಂಧನ' ವಾಹನಗಳು

ಸರ್ಕಾರದ ಈ ನಿರ್ಧಾರಕ್ಕೆ ತಕ್ಕಂತೆ ಆಟೋಮೊಬೈಲ್ ವಲಯ ಈಗಾಗಲೇ ಸಜ್ಜಾಗುತ್ತಿದೆ. ದೇಶದ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳಾದ ಮಾರುತಿ ಸುಜುಕಿ, ಹೀರೊ ಮೊಟೊಕಾರ್ಪ್, ಟೊಯೊಟಾ, ಸುಜುಕಿ ಮತ್ತು ಹುಂಡೈ ಕಂಪನಿಗಳು ಅಧಿಕ ಪ್ರಮಾಣದ ಅಥವಾ ಸಂಪೂರ್ಣ ಎಥೆನಾಲ್ ಇಂಧನದಿಂದಲೇ ಓಡಬಲ್ಲ ವಿಶೇಷ 'ಫ್ಲೆಕ್ಸ್-ಇಂಧನ ವಾಹನಗಳನ್ನು' ಮಾರುಕಟ್ಟೆಗೆ ಬಿಡುಗಡೆ ಮಾಡಲು ಆರಂಭಿಸಿವೆ.

ಮುಂಬರುವ ದಿನಗಳಲ್ಲಿ ದ್ವಿಚಕ್ರ ವಾಹನಗಳು ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಶೇ 100ರಷ್ಟು ಎಥೆನಾಲ್ ವಾಹನಗಳ ಉತ್ಪಾದನೆಗೆ ಕಂಪನಿಗಳು ಹೆಚ್ಚಿನ ಆದ್ಯತೆ ನೀಡಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಕೃಷಿ ವಲಯಕ್ಕೆ ಬೂಸ್ಟರ್ ಡೋಸ್?

ಎಥೆನಾಲ್ ಎಂಬುದು ಸಂಪೂರ್ಣ ನವೀಕರಿಸಬಹುದಾದ ಜೈವಿಕ ಇಂಧನ. ಭಾರತದಲ್ಲಿ ಇದನ್ನು ಪ್ರಾಥಮಿಕವಾಗಿ ಕಬ್ಬು, ಜೋಳ, ಹಾಳಾದ ಧಾನ್ಯಗಳು ಮತ್ತು ಕೃಷಿ ತ್ಯಾಜ್ಯಗಳ ಉಪ ಉತ್ಪನ್ನವಾದ 'ಮೊಲಾಸಿಸ್'ನಿಂದ ಉತ್ಪಾದಿಸಲಾಗುತ್ತದೆ. ಹೀಗಾಗಿ, ಎಥೆನಾಲ್ ಬಳಕೆ ಹೆಚ್ಚಾದಷ್ಟೂ ದೇಶದ ರೈತರಿಗೆ ಹೆಚ್ಚಿನ ಆರ್ಥಿಕ ಲಾಭ ಸಿಗಲಿದೆ. ಗ್ರಾಮೀಣ ಆರ್ಥಿಕತೆ ಬಲಗೊಳ್ಳಲಿದೆ.

ಜಾಗತಿಕ ಮಾದರಿ ಮತ್ತು ಭಾರತದ ಪ್ರಯೋಗ

ಜಗತ್ತಿನಾದ್ಯಂತ ಬ್ರೆಜಿಲ್ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಈಗಾಗಲೇ ಶೇ 85ರಷ್ಟು ಎಥೆನಾಲ್ ಮಿಶ್ರಿತ ವಾಹನಗಳು ಯಶಸ್ವಿಯಾಗಿ ರಸ್ತೆಗಿಳಿದಿವೆ. ಭಾರತದಲ್ಲೂ ಇದು ಹಂತ ಹಂತವಾಗಿ ವಿಕಸನಗೊಂಡಿದೆ. ಕೇಂದ್ರ ಸರ್ಕಾರದ ಈ ಕ್ರಾಂತಿಕಾರಿ ನಿರ್ಧಾರವು ಭಾರತವನ್ನು ಇಂಧನ ಸ್ವಾವಲಂಬನೆಯತ್ತ ಕೊಂಡೊಯ್ಯುವಲ್ಲಿ ಮೈಲಿಗಲ್ಲಾಗಲಿದೆ ಎಂದು ಆಟೋಮೊಬೈಲ್ ಮತ್ತು ಕೃಷಿ ವಲಯದ ತಜ್ಞರು ವಿಶ್ಲೇಷಿಸಿದ್ದಾರೆ.

Read More
Next Story