
11 ಉಗ್ರರ ವಿರುದ್ಧ ಎನ್‌ಐಎ ಗುವಾಹಟಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದೆ.
ಬಾಂಗ್ಲಾದೇಶದ 11 ಉಗ್ರರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ
ಭಾರತದಲ್ಲಿ ನಿಷೇಧಿತ ಜೆಎಂಬಿ ಉಗ್ರ ಸಂಘಟನೆಯ ಅಂಗಸಂಸ್ಥೆಯಾದ ಇಮಾಮ್ ಮಹಮೂದರ್ ಕಾಫಿಲಾ ಮೂಲಕ ದೇಶವಿರೋಧಿ ಸಂಚು ರೂಪಿಸಿ, ಯುವಕರನ್ನು ಜಿಹಾದ್ ಕಡೆಗೆ ಪ್ರಚೋದಿಸುತ್ತಿದ್ದ 11 ಉಗ್ರರ ವಿರುದ್ಧ ಎನ್‌ಐಎ ಗುವಾಹಟಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದೆ.
ದೇಶದಲ್ಲಿ ಉಗ್ರಗಾಮಿ ನೆಟ್‌ವರ್ಕ್ ವಿಸ್ತರಿಸಲು ಸಂಚು ರೂಪಿಸಿದ್ದ ನಿಷೇಧಿತ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ (JMB) ಸಂಘಟನೆಯ ಅಂಗಸಂಸ್ಥೆಗೆ ಸೇರಿದ 11 ಮಂದಿ ಬಾಂಗ್ಲಾದೇಶಿ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ ಚಾರ್ಜ್‌ಶೀಟ್ ಸಲ್ಲಿಸಿದೆ.
ಗುವಾಹಟಿಯ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023 ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) 1967 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಈ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
ಯುವಕರ ಬ್ರೈನ್‌ವಾಶ್, ದೇಶವಿರೋಧಿ ಸಂಚು
ಎನ್‌ಐಎ ತನಿಖೆಯಿಂದ ಲಭ್ಯವಾಗಿರುವ ಪ್ರಮುಖ ಮಾಹಿತಿ ಇಲ್ಲಿದೆ:ನೆಟ್‌ವರ್ಕ್ ವಿಸ್ತರಣೆ: ಜಿಎಂಬಿ ಉಗ್ರ ಸಂಘಟನೆಯ ಹಿರಿಯ ಸದಸ್ಯ ಇಮಾಮ್ ಮಹಮೂದ್ ಹಬೀಬುಲ್ಲಾ ಎಂಬಾತ ಭಾರತದಲ್ಲಿ ತನ್ನ ನೆಟ್‌ವರ್ಕ್ ಬೆಳೆಸಲು 'ಇಮಾಮ್ ಮಹಮುದರ್ ಕಾಫಿಲಾ' ಎಂಬ ಹೊಸ ಘಟಕವನ್ನು ಸ್ಥಾಪಿಸಿದ್ದ.ಈ ಘಟಕದ ಮೂಲಕ ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ತ್ರಿಪುರಾದಲ್ಲಿ ಮುಗ್ಧ ಯುವಕರನ್ನು ಉಗ್ರವಾದದತ್ತ ಸೆಳೆಯಲು ಸಂಚು ರೂಪಿಸಲಾಗಿತ್ತು. ಆರೋಪಿಗಳು ದೇಶದ ವಿವಿಧೆಡೆ ರಹಸ್ಯ ಸಭೆಗಳನ್ನು ನಡೆಸುವುದು, ಉಗ್ರಗಾಮಿ ಸಾಹಿತ್ಯವನ್ನು ಹಂಚುವುದು ಹಾಗೂ ಡಿಜಿಟಲ್ ವೇದಿಕೆಗಳ ಮೂಲಕ ಭಾರತ ವಿರೋಧಿ ಪ್ರಚಾರ ನಡೆಸುತ್ತಿರುವುದು ಪತ್ತೆಯಾಗಿದೆ.
ಪ್ರಮುಖ ಆರೋಪಿಗಳ ಬಂಧನ
ಈ ಇಡೀ ಜಾಲದಲ್ಲಿ ಅಸ್ಸಾಂನಲ್ಲಿ ಕಾರ್ಯಾಚರಣೆ ಮುನ್ನಡೆಸುತ್ತಿದ್ದ ನಸೀಮುದ್ದೀನ್ ಮತ್ತು ತ್ರಿಪುರಾದಲ್ಲಿ ಉಗ್ರ ಚಟುವಟಿಕೆಗಳ ನೇತೃತ್ವ ವಹಿಸಿದ್ದ ಜಾಗೀರ್ ಮಿಯಾ ಎಂಬ ಇಬ್ಬರು ಕಿಂಗ್‌ಪಿನ್‌ಗಳನ್ನು ಎನ್‌ಐಎ ಗುರುತಿಸಿದೆ. ತನಿಖೆಯ ವೇಳೆ ಇವರಿಂದ ಹಲವು ಡಿಜಿಟಲ್ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಮತ್ತಷ್ಟು ತನಿಖೆಯನ್ನು ಮುಂದುವರಿಸಿದ್ದಾರೆ.

