ಪಹಲ್ಗಾಂ ದಾಳಿ ಪ್ರಕರಣ: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಎನ್ಐಎ ಆರೋಪಪಟ್ಟಿ ಸಲ್ಲಿಕೆ
x

ಪಹಲ್ಗಾಂ ದಾಳಿ ಪ್ರಕರಣ: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಎನ್ಐಎ ಆರೋಪಪಟ್ಟಿ ಸಲ್ಲಿಕೆ

ಜಮ್ಮುವಿನ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಈ ದೋಷಾರೋಪಣಾ ಪಟ್ಟಿಯು, ಗಡಿಯಾಚೆಗಿನ ಭಯೋತ್ಪಾದನೆಯ ಸಂಚಿನ ಹಿಂದೆ ಇರುವ ಪಾಕಿಸ್ತಾನದ ಕುಮ್ಮಕ್ಕನ್ನು ಬಯಲು ಮಾಡಿದೆ.


Click the Play button to hear this message in audio format

ದೇಶದ ಭದ್ರತೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯೊಂದರಲ್ಲಿ, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸೋಮವಾರದಂದು ಪಹಲ್ಗಾಂ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಲಷ್ಕರ್-ಎ-ತೈಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಆರೋಪಿಯನ್ನಾಗಿ ಹೆಸರಿಸಿ ಪೂರಕ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ.

ಜಮ್ಮುವಿನ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಈ ದೋಷಾರೋಪಣಾ ಪಟ್ಟಿಯು, ಗಡಿಯಾಚೆಗಿನ ಭಯೋತ್ಪಾದನೆಯ ಸಂಚಿನ ಹಿಂದೆ ಇರುವ ಪಾಕಿಸ್ತಾನದ ಕುಮ್ಮಕ್ಕನ್ನು ಬಯಲು ಮಾಡಿದೆ. ಎನ್ಐಎ ದಾಖಲಿಸಿರುವ ದೋಷಾರೋಪಣಾ ಪಟ್ಟಿಯ ಪ್ರಕಾರ, ಹಫೀಜ್ ಸಯೀದ್‌ನನ್ನು ಕೇವಲ ವ್ಯಕ್ತಿಗತವಾಗಿ ಮಾತ್ರವಲ್ಲದೆ, ನಿಷೇಧಿತ ಲಷ್ಕರ್-ಎ-ತೋಯ್ಬಾ ಮತ್ತು ಅದರ ಸಕ್ರಿಯ ಪ್ರಭಾವಿ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್‌ನ ಮುಖ್ಯಸ್ಥನಾಗಿಯೂ ಆರೋಪಿಯನ್ನಾಗಿ ಪರಿಗಣಿಸಲಾಗಿದೆ. ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023 ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, 1967ರ ವಿವಿಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತದ ವಿರುದ್ಧ ಯುದ್ಧ ಸಾರಿದ್ದು ಮತ್ತು ಗಡಿಯಾಚೆಯಿಂದಲೇ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದಕ್ಕಾಗಿ ಸಯೀದ್‌ನನ್ನು ಮುಖ್ಯ ಆರೋಪಿಯನ್ನಾಗಿ ಮಾಡಲಾಗಿದೆ.

ಏನಿದು ಪಹಲ್ಗಾಂ ದಾಳಿ ಪ್ರಕರಣ?

ಕಳೆದ ವರ್ಷ ಅಂದರೆ 2025ರ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪ್ರವಾಸಿತಾಣವಾದ ಪಹಲ್ಗಾಂನಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದರು. ಈ ಹೇಯ ಕೃತ್ಯದಲ್ಲಿ 25 ಪ್ರವಾಸಿಗರು ಮತ್ತು ಓರ್ವ ಸ್ಥಳೀಯರು ಸೇರಿದಂತೆ ಒಟ್ಟು 26 ಮಂದಿ ಬಲಿಯಾಗಿದ್ದರು. ಆರಂಭದಲ್ಲಿ ಪಹಲ್ಗಾಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು, ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ಗೃಹ ಸಚಿವಾಲಯವು ಎನ್ಐಎಗೆ ಹಸ್ತಾಂತರಿಸಿತ್ತು. ಎನ್ಐಎ ಈ ಹಿಂದೆ 2025ರ ಡಿಸೆಂಬರ್ 15ರಂದು ಸಲ್ಲಿಸಿದ್ದ 1,597 ಪುಟಗಳ ಮೂಲ ದೋಷಾರೋಪಣಾ ಪಟ್ಟಿಯ ಮುಂದುವರಿದ ಭಾಗವಾಗಿ ಈಗಿನ ಪೂರಕ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ. ಈ ತನಿಖೆಯು ವೈಜ್ಞಾನಿಕ ಸಾಕ್ಷ್ಯಾಧಾರಗಳು ಮತ್ತು ನೆಲದ ಮೇಲಿನ ಪರಿಶೀಲನೆಗಳ ಮೂಲಕ ಪಾಕಿಸ್ತಾನದ ಭಯೋತ್ಪಾದಕ ಜಾಲವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ದಾಳಿಯ ಸಂಪೂರ್ಣ ಸಂಚು ಪಾಕಿಸ್ತಾನದಲ್ಲಿ ರೂಪಿಸಲ್ಪಟ್ಟಿದ್ದು, ಲಷ್ಕರ್-ಎ-ತೈಬಾ ಮತ್ತು ಅದರ ಮರುನಾಮಕರಣಗೊಂಡ ರೂಪವಾದ ಟಿಆರ್‌ಎಫ್ ಇದರಲ್ಲಿ ನೇರವಾಗಿ ಭಾಗಿಯಾಗಿವೆ ಎಂದು ಎನ್ಐಎ ಸ್ಪಷ್ಟಪಡಿಸಿದೆ. ಮೂಲ ದೋಷಾರೋಪಣಾ ಪಟ್ಟಿಯಲ್ಲಿ ಫೈಸಲ್ ಜಾಟ್, ಹಬೀಬ್ ತಾಹಿರ್ ಮತ್ತು ಹಮ್ಜಾ ಅಫ್ಘಾನಿ ಎಂಬ ಮೂವರು ಪಾಕಿಸ್ತಾನಿ ಉಗ್ರರನ್ನು ಗುರುತಿಸಲಾಗಿತ್ತು. ಇವರು ಜುಲೈ 2025ರಲ್ಲಿ ನಡೆದ ಆಪರೇಷನ್ ಮಹಾದೇವ್ ಕಾರ್ಯಾಚರಣೆಯ ವೇಳೆ ಭಾರತೀಯ ಭದ್ರತಾ ಪಡೆಗಳಿಂದ ಹತ್ಯೆಗೀಡಾಗಿದ್ದರು. ಪಾಕಿಸ್ತಾನದ ಹ್ಯಾಂಡ್ಲರ್ ಸಾಜಿದ್ ಸೈಫುಲ್ಲಾ ಜಾಟ್ ಅಲಿಯಾಸ್ ಲಾಂಗಡಾನನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ. ಇದರೊಂದಿಗೆ, ಕಳೆದ ವರ್ಷ ಜೂನ್‌ನಲ್ಲಿ ಬಂಧಿತರಾದ ಇಬ್ಬರು ಸ್ಥಳೀಯ ಸಹಚರರಾದ ಬಶೀರ್ ಅಹಮದ್ ಮತ್ತು ಪರ್ವೈಜ್ ಅಹಮದ್ ಅವರ ಪಾತ್ರವನ್ನೂ ಉಲ್ಲೇಖಿಸಲಾಗಿದೆ.

'ಆಪರೇಷನ್ ಸಿಂದೂರ್': ತಕ್ಕ ಪ್ರತ್ಯುತ್ತರ

ಪಹಲ್ಗಾಂ ದಾಳಿಯ ನಂತರ ಭಾರತ ಸರ್ಕಾರವು ಅತ್ಯಂತ ಕಠಿಣ ನಿರ್ಧಾರ ಕೈಗೊಂಡಿತ್ತು. 2025ರ ಮೇ 7ರಂದು ಮುಂಜಾನೆ ಭಾರತವು 'ಆಪರೇಷನ್ ಸಿಂದೂರ್' ಅನ್ನು ಪ್ರಾರಂಭಿಸಿತು. ಈ ಮಿಲಿಟರಿ ಕಾರ್ಯಾಚರಣೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದನಾ ಮೂಲಸೌಕರ್ಯಗಳನ್ನು ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ಪ್ರತಿದಾಳಿಯಾಗಿತ್ತು. ಈ ಕಾರ್ಯಾಚರಣೆಯು ಮೇ 10ರಂದು ಕದನ ವಿರಾಮ ಜಾರಿಗೆ ಬರುವವರೆಗೆ ಮುಂದುವರಿದಿತ್ತು. ಎನ್ಐಎ ತನಿಖೆಯು ಮತ್ತೊಂದು ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ. ಪಹಲ್ಗಾಂ ದಾಳಿಯು ಪ್ರವಾಸಿಗರ ಮೇಲೆ ನಡೆಸಿದ ಸಾಮಾನ್ಯ ದಾಳಿಯಾಗಿರಲಿಲ್ಲ, ಬದಲಾಗಿ, ಇದು ಧರ್ಮ ಆಧಾರಿತ ಹತ್ಯೆ ನಡೆಸುವ ಪಾಕಿಸ್ತಾನದ ಕುತಂತ್ರದ ಭಾಗವಾಗಿತ್ತು ಎಂದು ಸಂಸ್ಥೆ ದೃಢಪಡಿಸಿದೆ. ಅಮಾಯಕರನ್ನು ಬಲಿ ಪಡೆದು ಕಣಿವೆಯಲ್ಲಿ ಭಯದ ವಾತಾವರಣ ಸೃಷ್ಟಿಸಲು ಲಷ್ಕರ್-ಎ-ತೈಬಾ ಇಂತಹ ಕೃತ್ಯಗಳನ್ನು ನಡೆಸುತ್ತಿದೆ ಎಂದು ವರದಿ ತಿಳಿಸಿದೆ.

"ಗಡಿಯಾಚೆಯಿಂದ ಭಾರತದ ನೆಲದ ಮೇಲೆ ಭಯೋತ್ಪಾದನೆಯನ್ನು ಸಕ್ರಿಯವಾಗಿ ಪ್ರಾಯೋಜಿಸುತ್ತಿರುವ ಪಾಕಿಸ್ತಾನದ ಪೂರ್ಣ ಸಂಚನ್ನು ಬಯಲು ಮಾಡಲು ಎನ್ಐಎ ತನಿಖೆಯನ್ನು ಮುಂದುವರಿಸಿದೆ ಎಂದು ಹೇಳಿದೆ. ಹಫೀಜ್ ಸಯೀದ್‌ನಂತಹ ಕುಖ್ಯಾತ ಉಗ್ರರನ್ನು ಕಾನೂನಿನ ಕಟಕಟೆಗೆ ತರುವ ಮೂಲಕ, ಭಾರತವು ತನ್ನ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸಂದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ರವಾನಿಸಿದೆ. ಈ ಪ್ರಕರಣವು ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ತಾಂತ್ರಿಕ ಸಾಕ್ಷ್ಯಾಧಾರಗಳು ಮತ್ತು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಎನ್ಐಎ ಮಂಡಿಸಿರುವ ಈ ದೋಷಾರೋಪಣಾ ಪಟ್ಟಿಯು, ಮುಂದಿನ ದಿನಗಳಲ್ಲಿ ಹಫೀಜ್ ಸಯೀದ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತನನ್ನು ಮೂಲೆಗುಂಪು ಮಾಡಲು ಬಲವಾದ ಸಾಕ್ಷಿಯಾಗಿ ಬಳಕೆಯಾಗಲಿದೆ.

Read More
Next Story