
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿಯ ಎಲ್ಲ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಸ್ವೀಕಾರ ಸ್ಥಗಿತಗೊಳಿಸಲು ಚಿಂತನೆ ನಡೆಸಿದ್ದು, ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ.
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನೋ ಕ್ಯಾಶ್; ಓನ್ಲಿ ಫಾಸ್ಟ್ಯಾಗ್; ಯುಪಿಐ?
ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಪ್ರಕ್ರಿಯೆ ನಿಧಾನವಾಗಿರುವ ಕಾರಣ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಪಾವತಿ ವಿವಾದಗಳು ಮತ್ತು ವಿಳಂಬಗಳೂ ನಿಯಮಿತವಾಗಿ ಕಂಡುಬರುತ್ತಿವೆ.
ರಾಷ್ಟ್ರೀಯ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಬರಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿಯ ಎಲ್ಲ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಸ್ವೀಕಾರ ಸ್ಥಗಿತಗೊಳಿಸಲು ಚಿಂತನೆ ನಡೆಸಿದ್ದು, ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ.
ಫಾಸ್ಟ್ಯಾಗ್ ಮತ್ತು UPI ಮಾತ್ರ ಮಾನ್ಯ
ಈ ನಿರ್ಧಾರ ಜಾರಿಗೆ ಬಂದರೆ, ದೇಶಾದ್ಯಂತ 1,150ಕ್ಕೂ ಹೆಚ್ಚು ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇ ಟೋಲ್ ಪ್ಲಾಜಾಗಳಲ್ಲಿ ಎಲ್ಲ ಪಾವತಿಗಳನ್ನು ಫಾಸ್ಟ್ಯಾಗ್ (RFID) ಅಥವಾ ಯುಪಿಐ (UPI) ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಫಾಸ್ಟ್ಯಾಗ್ ಬಳಕೆ 98% ಮೀರಿದ್ದು, ಹೆಚ್ಚಿನ ಟೋಲ್ ವಹಿವಾಟುಗಳು ಈಗಾಗಲೇ ಎಲೆಕ್ಟ್ರಾನಿಕ್ ರೂಪದಲ್ಲಿ ನಡೆಯುತ್ತಿವೆ ಎಂಬ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ನಗದು ಪಾವತಿಗೆ ಎರಡರಷ್ಟು ದಂಡ ಈಗಲೇ ಜಾರಿಯಲ್ಲಿ
ಪ್ರಸ್ತುತ ನಿಯಮದ ಪ್ರಕಾರ, ಸಕ್ರಿಯ ಫಾಸ್ಟ್ಯಾಗ್ ಇಲ್ಲದೆ ಟೋಲ್ ಪ್ಲಾಜಾಗೆ ಬಂದ ವಾಹನ ನಗದಿನಲ್ಲಿ ಪಾವತಿ ಮಾಡಿದರೆ ನಿಗದಿತ ಶುಲ್ಕದ ಎರಡರಷ್ಟು ಹಣ ಪಡೆಯಲಾಗುತ್ತಿದೆ. ಯುಪಿಐ ಮೂಲಕ ಪಾವತಿ ಮಾಡಿದ ಸಂದರ್ಭದಲ್ಲಿ ಮಾತ್ರ ನಿಗದಿತ ಶುಲ್ಕದ 1.25 ಪಟ್ಟು ಮಾತ್ರ ವಿಧಿಸಲಾಗುತ್ತಿದೆ. ಇದಕ್ಕೂ ಮೀರಿ ಏಪ್ರಿಲ್ 1ರ ನಂತರ ನಗದು ಸ್ವೀಕಾರ ಸಂಪೂರ್ಣ ನಿಲ್ಲಿಸುವ ಯೋಜನೆ ಇದಾಗಿದೆ.
ದಟ್ಟಣೆ ಕಡಿಮೆ
ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಪ್ರಕ್ರಿಯೆ ನಿಧಾನವಾಗಿರುವ ಕಾರಣ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಪಾವತಿ ವಿವಾದಗಳು ಮತ್ತು ವಿಳಂಬಗಳೂ ನಿಯಮಿತವಾಗಿ ಕಂಡುಬರುತ್ತಿವೆ ಎಂದು ಪ್ರಾಧಿಕಾರ ನಡೆಸಿದ ಪ್ಲಾಜಾ-ಮಟ್ಟದ ಮೌಲ್ಯಮಾಪನಗಳು ಸ್ಪಷ್ಟಪಡಿಸಿವೆ. ಡಿಜಿಟಲ್ ಮಾತ್ರ ವ್ಯವಸ್ಥೆ ಜಾರಿಯಿಂದ ಲೇನ್ ಸಂಚಾರ ಸುಧಾರಿಸುತ್ತದೆ, ಗರಿಷ್ಠ ದಟ್ಟಣೆ ವೇಳೆ ಕಾಯುವ ಅವಧಿ ತಗ್ಗುತ್ತದೆ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಪಾರದರ್ಶಕತೆ ಬರುತ್ತದೆ ಎಂದು ಪ್ರಾಧಿಕಾರ ವಿಶ್ವಾಸ ವ್ಯಕ್ತಪಡಿಸಿದೆ.
ನಿರ್ಧಾರ ಇನ್ನೂ ಅಂತಿಮವಾಗಿಲ್ಲ
ಆದರೆ ಗಮನಿಸಬೇಕಾದ ಅಂಶವೆಂದರೆ, ಪ್ರಾಧಿಕಾರ ಇದನ್ನು "ಚಿಂತನೆ ನಡೆಸಲಾಗುತ್ತಿದೆ" ಎಂದಷ್ಟೇ ಇದುವರೆಗೆ ಘೋಷಿಸಿದ್ದು, ಅಂತಿಮ ಆದೇಶ ಹೊರಡಿಸಿಲ್ಲ. ಆದ್ದರಿಂದ ಏಪ್ರಿಲ್ 1ರ ಒಳಗೆ ಈ ನಿಯಮ ಸ್ಪಷ್ಟವಾದ ಅಧಿಕೃತ ಆದೇಶದ ರೂಪದಲ್ಲಿ ಬರಬಹುದು ಎಂಬ ನಿರೀಕ್ಷೆ ಇದ್ದು, ರಾಷ್ಟ್ರೀಯ ಹೆದ್ದಾರಿ ಬಳಕೆದಾರರು ತಮ್ಮ ವಾಹನದ ಫಾಸ್ಟ್ಯಾಗ್ ಸಕ್ರಿಯ ಸ್ಥಿತಿಯಲ್ಲಿದೆಯೇ ಎಂಬುದನ್ನು ಮತ್ತು ಯುಪಿಐ ಸೌಲಭ್ಯ ಇದೆಯೇ ಎಂಬುದನ್ನು ಈಗಲೇ ಖಚಿತಪಡಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

