ನೇಪಾಳದ ಭೀಕರ ಪ್ರವಾಹಕ್ಕೆ 157 ಬಲಿ; ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಸಂತಾಪ
x

ಭೋಟೆಕೋಶಿ ನದಿಯ ದಿಢೀರ್ ಪ್ರವಾಹದ ಬಳಿಕ ಸುಮಾರು 105 ಭಾರತೀಯರು ನಾಪತ್ತೆಯಾಗಿದ್ದಾರೆ.

ನೇಪಾಳದ ಭೀಕರ ಪ್ರವಾಹಕ್ಕೆ 157 ಬಲಿ; ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಸಂತಾಪ

ನೇಪಾಳದ ಭೋಟೆಕೋಶಿ ನದಿಯಲ್ಲಿ ಸಂಭವಿಸಿದ ದಿಢೀರ್ ಪ್ರವಾಹಕ್ಕೆ 157 ಮಂದಿ ಬಲಿಯಾಗಿದ್ದು, ಸುಮಾರು 400 ಮಂದಿ ನಾಪತ್ತೆಯಾಗಿದ್ದಾರೆ. 105 ಭಾರತೀಯರೂ ನಾಪತ್ತೆ ಎನ್ನಲಾಗಿದೆ.


Click the Play button to hear this message in audio format

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಸಂತಾಪ ಸೂಚಿಸಿದ್ದಾರೆ. ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳೊಂದಿಗೆ ಅಮೆರಿಕ ನಿಲ್ಲಲಿದೆ ಎಂದು ಅವರು ತಿಳಿಸಿದ್ದಾರೆ. ನೇಪಾಳದಲ್ಲಿರುವ ಅಮೆರಿಕ ನಾಗರಿಕರು ಅಲ್ಲಿನ ಅಮೆರಿಕ ರಾಯಭಾರ ಕಚೇರಿಯ ಸೂಚನೆಗಳನ್ನು ಪಾಲಿಸುವಂತೆ ಅವರು ಮನವಿ ಮಾಡಿದ್ದಾರೆ.

ಭೋಟೆಕೋಶಿ ನದಿಯ ಲ್ಹೆಂಡೆ ಉಪನದಿಯ ಹರಿವನ್ನು ಹಿಮಪಾತ ತಡೆದ ಪರಿಣಾಮ ಏಕಾಏಕಿ ಪ್ರವಾಹ ಉಂಟಾಗಿರಬಹುದು ಎಂದು ವರದಿಯಾಗಿದೆ. ಸ್ಥಳದಲ್ಲಿ ಹೆಚ್ಚಿನ ಮಳೆಯೇ ದಾಖಲಾಗಿರಲಿಲ್ಲ. ಹೀಗಾಗಿ ಪ್ರವಾಹದ ನಿಖರ ಕಾರಣವನ್ನು ಈಗಲೇ ಖಚಿತಪಡಿಸಲು ಸಾಧ್ಯವಿಲ್ಲ ಎಂದು ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ಸಹ ಪ್ರಾಧ್ಯಾಪಕಿ ಡಾ. ಸ್ವಪ್ನಮಿತಾ ಚೌಧರಿ ವೈದೇಸ್ವರನ್ ಹೇಳಿದ್ದಾರೆ.

ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಹಿಮನದಿ ಸರೋವರಗಳ ಮೇಲೆ ಹೆಚ್ಚಿನ ನಿಗಾ ಮತ್ತು ಮುನ್ನೆಚ್ಚರಿಕೆ ಅಗತ್ಯವಿದೆ ಎಂದು ಅವರು ಎಚ್ಚರಿಸಿದ್ದಾರೆ. ಇಂತಹ ಸರೋವರಗಳು ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಕಾಶ್ಮೀರಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆಯಿರುವುದರಿಂದ ಸಿದ್ಧತೆ ಹೆಚ್ಚಿಸಬೇಕಿದೆ ಎಂದಿದ್ದಾರೆ.

ನೇಪಾಳಕ್ಕೆ ಭಾರತದಿಂದ ಮಾನವೀಯ ನೆರವು

ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಮಾತನಾಡಿ ಪ್ರವಾಹದಲ್ಲಿ ಸಂಭವಿಸಿದ ಸಾವುಗಳಿಗೆ ಸಂತಾಪ ಸೂಚಿಸಿದ್ದಾರೆ. ಕಷ್ಟದ ಸಮಯದಲ್ಲಿ ನೇಪಾಳದ ಜನರೊಂದಿಗೆ ಭಾರತ ದೃಢವಾಗಿ ನಿಂತಿದ್ದು, ಅಗತ್ಯವಿರುವ ಎಲ್ಲ ಮಾನವೀಯ ನೆರವು ನೀಡಲು ಸಿದ್ಧವಿದೆ ಎಂದು ಮೋದಿ ಹೇಳಿದ್ದಾರೆ.

ಭಾರತ ಮತ್ತು ನೇಪಾಳದ ತಂಡಗಳು ರಕ್ಷಣಾ ಹಾಗೂ ಪರಿಹಾರ ಕಾರ್ಯಗಳಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ಭಾರತದಿಂದ ವಿಪತ್ತು ನಿರ್ವಹಣೆ, ಮಾನವೀಯ ನೆರವು ಮತ್ತು ವೈದ್ಯಕೀಯ ನೆರವು ಕಠ್ಮಂಡುವಿಗೆ ತಲುಪಿದ್ದು, ಮತ್ತಷ್ಟು ನೆರವು ಕಳುಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

105 ಭಾರತೀಯರು ನಾಪತ್ತೆ

ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಾಥಮಿಕ ಮಾಹಿತಿಯ ಪ್ರಕಾರ, ರಸುವಾ ಪ್ರದೇಶದಲ್ಲಿ ಭೋಟೆಕೋಶಿ ನದಿಯ ದಿಢೀರ್ ಪ್ರವಾಹದ ಬಳಿಕ ಸುಮಾರು 105 ಭಾರತೀಯರು ನಾಪತ್ತೆಯಾಗಿದ್ದಾರೆ. ಪ್ರವಾಸೋದ್ಯಮ ಮತ್ತು ಪ್ರಯಾಣ ಸಂಸ್ಥೆಗಳಿಂದ ಪಡೆದ ಪ್ರಾಥಮಿಕ ದಾಖಲೆಗಳ ಆಧಾರದ ಮೇಲೆ ಈ ಮಾಹಿತಿ ನೀಡಲಾಗಿದೆ.

157 ಮಂದಿ ಸಾವು, 400ಕ್ಕೂ ಹೆಚ್ಚು ನಾಪತ್ತೆ

ಬುಧವಾರ ಮಧ್ಯಾಹ್ನಕ್ಕೂ ಮುನ್ನ ಸಂಭವಿಸಿದ ಭೀಕರ ಪ್ರವಾಹವು ನೇಪಾಳದ ಮೂರು ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಉಂಟುಮಾಡಿದೆ. ಕನಿಷ್ಠ 157 ಮಂದಿ ಮೃತಪಟ್ಟಿದ್ದು, ಸುಮಾರು 400 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ವಿದೇಶಿ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಯೂ ಇದ್ದಾರೆ.

ಪ್ರವಾಹದ ರಭಸಕ್ಕೆ ಮನೆಗಳು, ವಾಹನಗಳು, ಸೇತುವೆಗಳು ಹಾಗೂ ಇತರ ಮೂಲಸೌಕರ್ಯಗಳು ಕೊಚ್ಚಿಹೋಗಿವೆ. ಒಂಬತ್ತು ಜಲವಿದ್ಯುತ್ ಯೋಜನೆಗಳು, ಒಂಬತ್ತು ವಾಣಿಜ್ಯ ಬ್ಯಾಂಕ್ ಶಾಖೆಗಳು, 19 ವಾಹನ ಸಂಚಾರ ಸೇತುವೆಗಳು ಮತ್ತು ಸುಮಾರು 40 ಕಿಲೋಮೀಟರ್ ಹೆದ್ದಾರಿ ಹಾನಿಗೊಳಗಾಗಿವೆ ಎಂದು ಪ್ರಾಥಮಿಕ ಅಂದಾಜು ತಿಳಿಸಿದೆ.

Read More
Next Story