
ಭೀಕರ ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದ ನೇಪಾಳದಲ್ಲಿ ಸಿಲುಕಿದ್ದ ಕಲಬುರಗಿಯ ಇಬ್ಬರು ಕನ್ನಡಿಗರನ್ನು ರಕ್ಷಣಾಪಡೆ ಸುರಕ್ಷಿತವಾಗಿ ಸ್ಥಳಾಂತರಿಸಿದೆ.
ನೇಪಾಳ ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ಕನ್ನಡಿಗರ ರಕ್ಷಣೆ
ನೇಪಾಳ ಪ್ರವಾಹದ ನಡುವೆ ಸಿಲುಕಿದ್ದ ಇಬ್ಬರು ಕನ್ನಡಿಗರ ರಕ್ಷಣೆಯಾಗಿದ್ದು, ಅವರನ್ನು ದೆಹಲಿಗೆ ಕರೆತರಲು ಕರ್ನಾಟಕದ ವಿಪತ್ತು ನಿರ್ವಹಣಾ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಿಂದ ಪರಿಸ್ಥಿತಿ ಗಂಭೀರವಾಗಿರುವ ನಡುವೆ ಕಲಬುರಗಿ ಜಿಲ್ಲೆಯ ಇಬ್ಬರು ಕನ್ನಡಿಗರನ್ನು ರಕ್ಷಣಾಪಡೆ ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಚಿಂಚೋಳಿ ತಾಲೂಕಿನ ಮಲ್ಲಿನಾಥ್ ಕೊಲಕುಂದಿ ಮತ್ತು ಸಂಗಮೇಶ್ ಕನಕಪುರ ಅವರನ್ನು ಅಪಾಯದ ಪ್ರದೇಶದಿಂದ ಹೊರಗೆ ಕರೆತರಲಾಗಿದೆ.
ಕರ್ನಾಟಕದ ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ಇಬ್ಬರನ್ನೂ ಸಂಪರ್ಕಿಸಿ ಅವರ ಸುರಕ್ಷತೆ ಹಾಗೂ ಪ್ರಸ್ತುತ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಇಬ್ಬರೂ ಸದ್ಯ ಸುರಕ್ಷಿತವಾಗಿದ್ದಾರೆ. ಅವರನ್ನು ನೇಪಾಳದಿಂದ ದೆಹಲಿಗೆ ಕರೆತರಲು ಕರ್ನಾಟಕ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ದೆಹಲಿಯ ಕರ್ನಾಟಕ ಭವನದಲ್ಲಿ ವಸತಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.
25 ಮಂದಿಯ ತಂಡದೊಂದಿಗೆ ನೇಪಾಳಕ್ಕೆ ತೆರಳಿದ್ದ ಕನ್ನಡಿಗರು
ಮಲ್ಲಿನಾಥ್ ಹಾಗೂ ಸಂಗಮೇಶ್ ಸೇರಿದಂತೆ ಒಟ್ಟು 25 ಮಂದಿ ನೇಪಾಳ ಪ್ರವಾಸ ಕೈಗೊಂಡಿದ್ದರು ಎನ್ನಲಾಗಿದೆ. ಈ ತಂಡದಲ್ಲಿ ಹೈದರಾಬಾದ್‌ನ 23 ಮಂದಿ ಇದ್ದರು. ಪ್ರವಾಹದ ಹಿನ್ನೆಲೆಯಲ್ಲಿ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ಲಭ್ಯವಾದಂತೆಯೇ ಕರ್ನಾಟಕದ ವಿಪತ್ತು ನಿರ್ವಹಣಾ ಅಧಿಕಾರಿಗಳು ಇಬ್ಬರು ಕನ್ನಡಿಗರೊಂದಿಗೆ ಸಂಪರ್ಕ ಸಾಧಿಸಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದರು. ಇದೀಗ ಇಬ್ಬರೂ ಸುರಕ್ಷಿತವಾಗಿರುವುದು ಅವರ ಕುಟುಂಬಸ್ಥರಿಗೆ ಹಾಗೂ ಅಧಿಕಾರಿಗಳಿಗೆ ನೆಮ್ಮದಿ ತಂದಿದೆ.
ಗಂಡಕ್ ನದಿ ನೀರಿನ ಮಟ್ಟದಲ್ಲಿ ಏರಿಕೆ
ನೇಪಾಳದ ಪ್ರವಾಹದ ಪರಿಣಾಮ ಗಂಡಕ್ ನದಿಯ ನೀರಿನ ಮಟ್ಟದಲ್ಲೂ ತೀವ್ರ ಏರಿಕೆಯಾಗಿದೆ. ಇದರಿಂದ ಬಿಹಾರ ಮತ್ತು ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗಂಡಕ್ ನದಿ ವ್ಯಾಪ್ತಿಯಲ್ಲಿ 20 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳನ್ನು ನಿಯೋಜಿಸಲಾಗಿದೆ. ನದಿ ಪಾತ್ರದಲ್ಲಿರುವ ಸೂಕ್ಷ್ಮ ಪ್ರದೇಶಗಳ ಮೇಲೆ ಅಧಿಕಾರಿಗಳು ನಿರಂತರ ನಿಗಾ ವಹಿಸಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್
ನೇಪಾಳದಿಂದ ಹರಿದು ಭಾರತ ಪ್ರವೇಶಿಸುವ ಗಂಡಕ್ ನದಿಯ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಹಾರದ ಪಶ್ಚಿಮ ಚಂಪಾರಣ್ ಮತ್ತು ಮುಜಫರ್‌ಪುರ ಸೇರಿದಂತೆ ಉತ್ತರ ಪ್ರದೇಶದ ಕುಶಿನಗರ ಹಾಗೂ ಮಹಾರಾಜ್‌ಗಂಜ್ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ನದಿ ತೀರದ ಗ್ರಾಮಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಗತ್ಯವಿದ್ದಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ರಕ್ಷಣಾ ತಂಡಗಳು ಸಿದ್ಧವಾಗಿವೆ.

