
ಆತ್ಮಹತ್ಯೆಗೆ ಶರಣಾದ ತಮಿಳುನಾಡು ವಿದ್ಯಾರ್ಥಿನಿ ಅನುಕೀರ್ತನಾ
ನೀಟ್ ಮರು ಪರೀಕ್ಷೆ ಆತಂಕ: ಗುಜರಾತ್, ತಮಿಳುನಾಡಿನಲ್ಲಿ ಇಬ್ಬರು ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣು!
ಗುರುವಾರ ಮುಂಜಾನೆ ಸುಮಾರು 2.55 ರ ಸುಮಾರಿಗೆ ನೀಟ್ ಆಕಾಂಕ್ಷಿಯಾಗಿದ್ದ ಬಾಲಕ ತನ್ನ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾನೆ" ಎಂದು ಸಬರಮತಿ ಪೊಲೀಸ್ ಇನ್ಸ್‌ಪೆಕ್ಟರ್ ವೈ. ಆರ್. ವಘೇಲಾ ತಿಳಿಸಿದ್ದಾರೆ.
ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ರಾಷ್ಟ್ರೀಯ ಅರ್ಹತಾ-ಪ್ರವೇಶ ಪರೀಕ್ಷೆ (NEET-UG) ಮರು ಪರೀಕ್ಷೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಪರೀಕ್ಷಾ ಒತ್ತಡ ಮತ್ತು ಖಿನ್ನತೆಗೆ ಇಬ್ಬರು ಯುವ ಆಕಾಂಕ್ಷಿಗಳು ಬಲಿಯಾಗಿರುವ ದಾರುಣ ಘಟನೆಗಳು ವರದಿಯಾಗಿವೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ 17 ವರ್ಷದ ಬಾಲಕ ಹಾಗೂ ತಮಿಳುನಾಡಿನ ಕೊಯಮತ್ತೂರಿನಲ್ಲಿ 19 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
6ನೇ ಮಹಡಿಯಿಂದ ಬಿದ್ದು ಸಾವು
ಜೂ. 21 ರಂದು ನಡೆಯಬೇಕಿದ್ದ ನೀಟ್ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬ ಗುರುವಾರ ಮುಂಜಾನೆ ಅಹಮದಾಬಾದ್‌ನ ಅಪಾರ್ಟ್‌ಮೆಂಟ್ ಒಂದರ 6ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ. ಬಾಲಕ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದ್ದು, ಸದ್ಯಕ್ಕೆ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಹಮದಾಬಾದ್‌ನ ಟ್ರಾಗಡ್ ಪ್ರದೇಶದ 'ಅರಿಸ್ಟೋ ಆನಂದಮ್' ಫ್ಲಾಟ್‌ನ ಬಿ ಬ್ಲಾಕ್‌ನಲ್ಲಿ ಈ ದಾರುಣ ಘಟನೆ ಸಂಭವಿಸಿದೆ. "ಗುರುವಾರ ಮುಂಜಾನೆ ಸುಮಾರು 2.55 ರ ಸುಮಾರಿಗೆ ನೀಟ್ ಆಕಾಂಕ್ಷಿಯಾಗಿದ್ದ ಬಾಲಕ ತನ್ನ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾನೆ" ಎಂದು ಸಬರಮತಿ ಪೊಲೀಸ್ ಇನ್ಸ್‌ಪೆಕ್ಟರ್ ವೈ. ಆರ್. ವಘೇಲಾ ಮಾಹಿತಿ ನೀಡಿದ್ದಾರೆ.
ಅಪಾರ್ಟ್‌ಮೆಂಟ್‌ನ ಖಾಲಿ ಜಾಗದಲ್ಲಿ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣ ನಿವಾಸಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮೃತ ಬಾಲಕ ಈ ಹಿಂದೆ ನಡೆದಿದ್ದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕ ಯಾವುದೇ ರೀತಿಯ ಮಾನಸಿಕ ಒತ್ತಡದಲ್ಲಿದ್ದಂತೆ ಕಂಡುಬಂದಿರಲಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದು, ಪೊಲೀಸರು ಅಪಘಾತದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ
ಇನ್ನೊಂದೆಡೆ, ತಮಿಳುನಾಡಿನ ಕೊಯಮತ್ತೂರಿನ 19 ವರ್ಷದ ನೀಟ್ ವಿದ್ಯಾರ್ಥಿನಿ ಅನುಕೀರ್ತನಾ ಮರು ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ಹೇಳಿ ಸಾವಿನ ಹಾದಿ ಹಿಡಿದಿದ್ದಾಳೆ. ಸಿಐಟಿಯು ಮುಖಂಡ ಸೆಂಥಿಲ್ ಪ್ರಭು ಅವರ ಪುತ್ರಿಯಾಗಿದ್ದ ಅನುಕೀರ್ತನಾ, ಸಾಯುವ ಮುನ್ನ ತನ್ನ ಚಿಕ್ಕಪ್ಪ ಮತ್ತು ಹತ್ತಿರದ ಸಂಬಂಧಿಕರಿಗೆ ಸುದೀರ್ಘ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದಾಳೆ.
"ನಾನು ನೀಟ್ ಪರೀಕ್ಷೆ ಬರೆದು ವೈದ್ಯಕೀಯ ಕಾಲೇಜಿಗೆ ಪ್ರವೇಶಕ್ಕಾಗಿ ಕಾಯುತ್ತಿದ್ದೆ, ಆದರೆ ಪರೀಕ್ಷೆ ರದ್ದಾಗಿದೆ. ಈಗ ಮತ್ತೆ ಪರೀಕ್ಷೆ ಬರೆಯಲು ಭಯವಾಗುತ್ತಿದೆ. ನನ್ನ ತಂದೆ ನನಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ, ಮತ್ತು ನಾನು ಅವರನ್ನು ಮತ್ತೆ ಹೇಗೆ ಎದುರಿಸಬೇಕೆಂದು ನನಗೆ ತಿಳಿದಿಲ್ಲ" ಎಂದು ಆಕೆ ತನ್ನ ಸಂದೇಶದಲ್ಲಿ ಅಳಲು ತೋಡಿಕೊಂಡಿದ್ದಾಳೆ.
ಸಂದೇಶ ಓದಿದ ಕುಟುಂಬದವರು ತಕ್ಷಣ ಮನೆಗೆ ಧಾವಿಸಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ.
ಹೆಚ್ಚುತ್ತಿರುವ ನೀಟ್ ಬಲಿಗಳು
ಮೇ 3 ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ಜೂನ್ 21 ರಂದು ಮರು ಪರೀಕ್ಷೆ ಘೋಷಿಸಲಾಗಿತ್ತು. ಒಮ್ಮೆ ಕಷ್ಟಪಟ್ಟು ಪರೀಕ್ಷೆ ಬರೆದ ವಿದ್ಯಾರ್ಥಿಗಳು, ಮತ್ತೊಮ್ಮೆ ಪರೀಕ್ಷೆ ಎದುರಿಸಲು ಸಾಧ್ಯವಾಗದೆ ತೀವ್ರ ಖಿನ್ನತೆಗೆ ಜಾರುತ್ತಿರುವುದು ದೇಶಾದ್ಯಂತ ದೊಡ್ಡ ಕಳವಳ ಮೂಡಿಸಿದೆ.
ಇತ್ತೀಚಿನ ದಿನಗಳಲ್ಲಿ ನೀಟ್ ಹೆಸರಿನಲ್ಲಿ ನಡೆದಿರುವ ನಾಲ್ಕನೇ ಆತ್ಮಹತ್ಯೆ ಇದಾಗಿದ್ದು, ಜೂ. 16 ರಂದು ಡೆಹ್ರಾಡೂನ್‌ನಲ್ಲಿ 23 ವರ್ಷದ ರಿಯಾ ಥಾಪಾ ಮತ್ತು ಲಖನೌದಲ್ಲಿ 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೇ 12 ರ ಬಳಿಕ ದೇಶಾದ್ಯಂತ ಸುಮಾರು 12 ವಿದ್ಯಾರ್ಥಿಗಳು ಜೀವ ಕಳೆದುಕೊಂಡಿರುವುದು ಪರೀಕ್ಷಾ ವ್ಯವಸ್ಥೆಯ ಮೇಲಿನ ಆಕ್ರೋಶಕ್ಕೆ ಕಾರಣವಾಗಿದೆ.

