
ಎಐ ಆಧಾರಿತ ಚಿತ್ರ
ನೀಟ್ ಯುಜಿ 2026 ಮರುಪರೀಕ್ಷೆ; ದೇಶಾದ್ಯಂತ ಟೆಲಿಗ್ರಾಮ್ ಆಪ್ ತಾತ್ಕಾಲಿಕ ನಿಷೇಧ!
ಕೇವಲ ಆಪ್ ನಿಷೇಧ ಅಷ್ಟೇ ಅಲ್ಲದೆ, ಟೆಲಿಗ್ರಾಮ್‌ನ ಪ್ರಮುಖ ವೈಶಿಷ್ಟ್ಯವಾದ 'ಸಂದೇಶ ಸಂಪಾದನೆ' ಆಯ್ಕೆಯನ್ನು ಜೂ. 30 ರವರೆಗೆ ನಿಷ್ಕ್ರಿಯಗೊಳಿಸುವಂತೆ ಸರ್ಕಾರ ಸೂಚಿಸಿದೆ.
ದೇಶದ ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ 'ನೀಟ್ ಯುಜಿ 2026' ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾರಿ ಮಹತ್ವದ ಕ್ರಮ ಕೈಗೊಂಡಿದೆ. ಪರೀಕ್ಷಾ ಪತ್ರಿಕೆ ಸೋರಿಕೆ ಹಾಗೂ ವಂಚನೆ ಜಾಲಗಳಿಗೆ ಲಗಾಮು ಹಾಕುವ ಉದ್ದೇಶದಿಂದ, ಜನಪ್ರಿಯ ಮೆಸೇಜಿಂಗ್ ಆಪ್ ಆದ 'ಟೆಲಿಗ್ರಾಮ್' ಅನ್ನು ಜೂ. 22ರವರೆಗೆ ದೇಶಾದ್ಯಂತ ತಾತ್ಕಾಲಿಕವಾಗಿ ನಿರ್ಬಂಧಿಸಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಆದೇಶ ಹೊರಡಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಶಿಫಾರಸಿನ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
'ಮೆಸೇಜ್ ಎಡಿಟಿಂಗ್' ವೈಶಿಷ್ಟ್ಯ ಸ್ಥಗಿತ
ಕೇವಲ ಆಪ್ ನಿಷೇಧ ಅಷ್ಟೇ ಅಲ್ಲದೆ, ಟೆಲಿಗ್ರಾಮ್‌ನ ಪ್ರಮುಖ ವೈಶಿಷ್ಟ್ಯವಾದ 'ಸಂದೇಶ ಸಂಪಾದನೆ' ಆಯ್ಕೆಯನ್ನು ಜೂ. 30 ರವರೆಗೆ ನಿಷ್ಕ್ರಿಯಗೊಳಿಸುವಂತೆ ಸರ್ಕಾರ ಸೂಚಿಸಿದೆ. ಈ ಹಿಂದೆ ವಂಚಕರು ಹಳೆಯ ಸಂದೇಶಗಳನ್ನೇ ಎಡಿಟ್ ಮಾಡಿ, ಮೂಲ ಸಮಯವನ್ನು ಹಾಗೇ ಉಳಿಸಿಕೊಂಡು ಹೊಸ ಪಿಡಿಎಫ್ ಫೈಲ್‌ಗಳನ್ನು ಅಪ್‌ಲೋಡ್ ಮಾಡುವ ಮೂಲಕ ನಕಲಿ ಪೇಪರ್ ಲೀಕ್ ಹಗರಣಗಳನ್ನು ಸೃಷ್ಟಿಸುತ್ತಿದ್ದರು. ಈ ತಾಂತ್ರಿಕ ದುರುಪಯೋಗಕ್ಕೆ ಬ್ರೇಕ್ ಹಾಕಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಹೊರಡಿಸಿರುವ ಪ್ರಕಟಣೆ
ವಂಚನೆ ದಂಧೆಗೆ ಬಳಕೆಯಾಗುತ್ತಿತ್ತು ಟೆಲಿಗ್ರಾಮ್!
ಜೂ. 21 ರಂದು ನಡೆಯಲಿರುವ ನೀಟ್ ಮರುಪರೀಕ್ಷೆಯ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ಹಲವು ವಂಚನೆ ದಂಧೆಗಳು ಸಕ್ರಿಯವಾಗಿದ್ದವು. ʼಪೇಪರ್ ಲೀಕ್ಡ್ ನೀಟ್ʼ, ʼರೀ-ನೀಟ್ 2026ʼ ಮತ್ತು ʼಖಾಸಗಿ ಮಾಫಿಯಾʼ ಎಂಬ ಹೆಸರಿನಲ್ಲಿ ನಕಲಿ ಚಾನೆಲ್‌ಗಳು, ಗ್ರೂಪ್‌ಗಳು ಹಾಗೂ ಬಾಟ್‌ಗಳನ್ನು ಸೃಷ್ಟಿಸಿ, ಪ್ರಶ್ನೆ ಪತ್ರಿಕೆ ನೀಡುವುದಾಗಿ ನಂಬಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಸಾವಿರಾರು ರೂ. ಗಳಿಂದ ಲಕ್ಷಾಂತರ ರೂ. ಗಳವರೆಗೆ ಹಣ ವಸೂಲಿ ಮಾಡಲಾಗುತ್ತಿತ್ತು. ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ವಂಚಕ ಜಾಲಗಳನ್ನು ಮಟ್ಟಹಾಕಲು ವೇದಿಕೆ ಮಟ್ಟದ ಹಸ್ತಕ್ಷೇಪ ಅಗತ್ಯವಾಗಿತ್ತು ಎಂದು ಎನ್‌ಟಿಎ ತಿಳಿಸಿದೆ.
ಬಳಕೆದಾರರ ಅನಾನುಕೂಲಕ್ಕೆ ವಿಷಾದ
"ಟೆಲಿಗ್ರಾಮ್ ಅನ್ನು ಶೈಕ್ಷಣಿಕ, ವೃತ್ತಿಪರ ಮತ್ತು ವೈಯಕ್ತಿಕ ಅಗತ್ಯಗಳಿಗಾಗಿ ಬಳಸುವ ದೇಶದ ಲಕ್ಷಾಂತರ ನಾಗರಿಕರಿಗೆ ಈ ತಾತ್ಕಾಲಿಕ ನಿರ್ಬಂಧದಿಂದ ಉಂಟಾಗಿರುವ ಅನಾನುಕೂಲತೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಆದರೆ ದೇಶದ ಅತ್ಯಂತ ಪ್ರಮುಖ ಪರೀಕ್ಷೆಯೊಂದರ ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಈ ಕಠಿಣ ಕ್ರಮ ಅನಿವಾರ್ಯವಾಗಿದೆ." ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಹೇಳಿದೆ.
ಈ ಹಿಂದೆ ನಡೆದಿದ್ದ ನೀಟ್ ಯುಜಿ 2026 ಪರೀಕ್ಷೆಯಲ್ಲಿ ಪತ್ರಿಕೆ ಸೋರಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಪ್ರಸ್ತುತ ಜೂ. 21 ರಂದು ದೇಶಾದ್ಯಂತ ಮರುಪರೀಕ್ಷೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

