NEET UG 2026 cancellation: NTA takes important decision after paper leak; orders investigation
x

ಸಾಂದರ್ಭಿಕ ಚಿತ್ರ

NEET UG ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಟ್ ಪರೀಕ್ಷೆಯಲ್ಲಿ ಮಹತ್ವದ ಸುಧಾರಣೆಗಳನ್ನು ಘೋಷಿಸಿದ್ದಾರೆ. ಮುಂದಿನ ವರ್ಷದಿಂದ CBT ಮಾದರಿ ಜಾರಿ ಮತ್ತು ಜೂನ್ 21ರ ಪರೀಕ್ಷೆಯ ಸಂಪೂರ್ಣ ಅಪ್‌ಡೇಟ್ ಇಲ್ಲಿದೆ.


Click the Play button to hear this message in audio format

ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ನೀಟ್-ಯುಜಿ (NEET UG) ಪರೀಕ್ಷಾ ಅಕ್ರಮದ ಬೆನ್ನಲ್ಲೇ ಕೇಂದ್ರ ಸರ್ಕಾರ ದೊಡ್ಡ ಸುಧಾರಣೆಯನ್ನು ಪ್ರಕಟಿಸಿದೆ. ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ಘೋಷಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವರ್ಷದ ಮರುಪರೀಕ್ಷೆ ಮತ್ತು ಭವಿಷ್ಯದ ಬದಲಾವಣೆಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಜೂನ್ 21ರ ಪರೀಕ್ಷೆಗೆ ತಯಾರಿ

ಜೂನ್ 21 ರಂದು ನಡೆಯಲಿರುವ ನೀಟ್ ಮರುಪರೀಕ್ಷೆಯ ಪ್ರವೇಶ ಪತ್ರಗಳನ್ನು ಜೂನ್ 14 ರಂದು ಬಿಡುಗಡೆ ಮಾಡಲಾಗುವುದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷೆಗೆ ಒಂದು ವಾರ ಮೊದಲು ತಮಗೆ ಬೇಕಾದ ಪರೀಕ್ಷಾ ನಗರವನ್ನು (Exam City) ಆಯ್ಕೆ ಮಾಡಲು ಎನ್‌ಟಿಎ (NTA) ಅವಕಾಶ ನೀಡಲಿದೆ.

ರದ್ದಾದ ಪರೀಕ್ಷೆಯ ಶುಲ್ಕವನ್ನು ಅಭ್ಯರ್ಥಿಗಳಿಗೆ ಮರುಪಾವತಿಸಲಾಗುವುದು ಮತ್ತು ಮುಂಬರುವ ಮರುಪರೀಕ್ಷೆಯನ್ನು ಸಂಪೂರ್ಣ ಉಚಿತವಾಗಿ ನಡೆಸಲಾಗುವುದು. ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಾಧ್ಯವಿರುವ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು.

ಪೇಪರ್ ಲೀಕ್ ಒಪ್ಪಿಕೊಂಡ ಸಚಿವರು:

ಮೇ 3 ರಂದು ನಡೆದಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ಸಚಿವರು ಅಧಿಕೃತವಾಗಿ ಖಚಿತಪಡಿಸಿದರು. "ಮೇ 7 ರಂದು 'ಗೆಸ್ ಪೇಪರ್' ಬಗ್ಗೆ ದೂರುಗಳು ಬಂದವು. ಕೇಂದ್ರ ಸಂಸ್ಥೆಗಳು ತನಿಖೆ ನಡೆಸಿದಾಗ ಪತ್ರಿಕೆ ಸೋರಿಕೆಯಾಗಿರುವುದು ದೃಢಪಟ್ಟಿತು. ವಿದ್ಯಾರ್ಥಿಗಳ ಭವಿಷ್ಯದ ಜೊತೆ ರಾಜಿ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಮೇ 12 ರಂದು ಪರೀಕ್ಷೆಯನ್ನು ರದ್ದುಗೊಳಿಸಿದೆವು" ಎಂದು ಪ್ರಧಾನ್ ವಿವರಿಸಿದರು.

ಅಕ್ರಮ ಎಸಗುವವರ ವಿರುದ್ಧ ಕಠಿಣ ಎಚ್ಚರಿಕೆ:

ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಸಿಬಿಐ (CBI) ತನಿಖೆಗೆ ಆದೇಶಿಸಲಾಗಿದೆ. "ಪರೀಕ್ಷಾ ಮಾಫಿಯಾಗಳು ಶ್ರಮಜೀವಿ ವಿದ್ಯಾರ್ಥಿಗಳ ಸೀಟುಗಳನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ. ಪರೀಕ್ಷಾ ಅಕ್ರಮವನ್ನು ನಾವು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಅಕ್ರಮದಲ್ಲಿ ಭಾಗಿಯಾದವರು ಎಷ್ಟೇ ಪ್ರಭಾವಿಯಾಗಿದ್ದರೂ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ" ಎಂದು ಅವರು ಎಚ್ಚರಿಸಿದರು.

ಎನ್‌ಟಿಎ (NTA) ಸುಧಾರಣೆ

ಸುಪ್ರೀಂ ಕೋರ್ಟ್ ಶಿಫಾರಸಿನಂತೆ ಸ್ಥಾಪನೆಯಾದ ಎನ್‌ಟಿಎ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ತರುವ ಅಗತ್ಯವಿದೆ. ರಾಧಾಕೃಷ್ಣನ್ ಸಮಿತಿಯ ಶಿಫಾರಸುಗಳ ಹೊರತಾಗಿಯೂ ಕೆಲವು ಲೋಪಗಳು ಸಂಭವಿಸಿವೆ. ಇವುಗಳನ್ನು ಸರಿಪಡಿಸಿ ದೋಷ ರಹಿತ ಪರೀಕ್ಷಾ ವ್ಯವಸ್ಥೆಯನ್ನು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ ಎಂದು ಸಚಿವರು ಭರವಸೆ ನೀಡಿದರು.

Read More
Next Story