ಬಿಗ್‌ ಅಪ್ಡೇಟ್ಸ್‌! ಜೂನ್ 21ಕ್ಕೆ NEET-UG ಮರುಪರೀಕ್ಷೆ ನಿಗದಿ
x
ನೀಟ್‌ ಮರುಪರೀಕ್ಷೆ ದಿನಾಂಕ ನಿಗದಿ

ಬಿಗ್‌ ಅಪ್ಡೇಟ್ಸ್‌! ಜೂನ್ 21ಕ್ಕೆ NEET-UG ಮರುಪರೀಕ್ಷೆ ನಿಗದಿ

ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆಯಿಂದ ರದ್ದಾಗಿದ್ದ ಪರೀಕ್ಷೆ ಈಗ ಜೂನ್ 21ಕ್ಕೆ ನಡೆಯಲಿದೆ. ಸಿಬಿಐ ಈಗಾಗಲೇ ಐವರನ್ನು ಬಂಧಿಸಿದ್ದು, ಕೋಚಿಂಗ್ ಸೆಂಟರ್‌ಗಳ ಶಾಮೀಲಾತಿ ಬಗ್ಗೆ ತನಿಖೆ ಮುಂದುವರೆದಿದೆ.


Click the Play button to hear this message in audio format

ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್-ಯುಜಿ (NEET-UG) 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮೇ 3 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಈಗ ಮರುಪರೀಕ್ಷೆಗೆ ಜೂನ್ 21 ರ ಹೊಸ ದಿನಾಂಕವನ್ನು ಘೋಷಿಸಲಾಗಿದೆ.

ಸಚಿವ ಧರ್ಮೇಂದ್ರ ಪ್ರಧಾನ್ ತುರ್ತು ಸಭೆ

ಗುರುವಾರ ತಡರಾತ್ರಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ನಿವಾಸದಲ್ಲಿ ಉನ್ನತ ಮಟ್ಟದ ತುರ್ತು ಸಭೆ ನಡೆಸಿದರು. ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು, ಎನ್‌ಟಿಎ (NTA) ಮಹಾನಿರ್ದೇಶಕರು ಮತ್ತು ಸಿಬಿಎಸ್‌ಇ ಅಧ್ಯಕ್ಷರು ಪಾಲ್ಗೊಂಡಿದ್ದ ಈ ಸಭೆಯಲ್ಲಿ, ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಮತ್ತು ಭವಿಷ್ಯದಲ್ಲಿ ಸೋರಿಕೆ ತಡೆಯಲು ಕೈಗೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಗಹನವಾಗಿ ಚರ್ಚಿಸಲಾಯಿತು.

ಸಿಬಿಐ ತನಿಖೆ: ಲಕ್ಷಾಂತರ ರೂ. ಡೀಲ್ ಬಯಲು!

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ (CBI), ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಒಳಗಿನವರ ಕೈವಾಡದ ಬಗ್ಗೆಯೂ ಶಂಕೆ ವ್ಯಕ್ತಪಡಿಸಿದೆ. ಈಗಾಗಲೇ ಐವರು ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದು, ಇದೊಂದು “ಸಂಘಟಿತ ಗ್ಯಾಂಗ್” ನಡೆಸುತ್ತಿರುವ ದಂಧೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. ರಾಜಸ್ಥಾನದ ಸೀಕರ್ ಜಿಲ್ಲೆಯ ಕೋಚಿಂಗ್ ಸೆಂಟರ್‌ಗಳಿಗೆ ಸೋರಿಕೆಯಾದ ಪತ್ರಿಕೆಗಳು ತಲುಪಿದ್ದು, ಪ್ರತಿ ವಿದ್ಯಾರ್ಥಿಯಿಂದ 2 ರಿಂದ 5 ಲಕ್ಷ ರೂ. ವರೆಗೆ ಹಣ ವಸೂಲಿ ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.

ದೇಶಾದ್ಯಂತ ಆಕ್ರೋಶ ಮತ್ತು ದುರಂತ

ಪರೀಕ್ಷಾ ಅಕ್ರಮದ ವಿರುದ್ಧ ದೆಹಲಿ ಮತ್ತು ಅಹಮದಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ವಿದ್ಯಾರ್ಥಿ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಶಿಕ್ಷಣ ಸಚಿವರ ರಾಜೀನಾಮೆಗೆ ಮತ್ತು ಎನ್‌ಟಿಎ ರದ್ದುಪಡಿಸಲು ಒತ್ತಾಯ ಕೇಳಿಬರುತ್ತಿದೆ. ಈ ನಡುವೆ, ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಪರೀಕ್ಷೆ ರದ್ದಾದ ಆತಂಕದಿಂದ 21 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ವರದಿಯಾಗಿದೆ.

FORDA ಕಡೆಯಿಂದ ಪ್ರಧಾನಿಗೆ ಪತ್ರ

ವಸತಿ ವೈದ್ಯರ ಸಂಘದ ಒಕ್ಕೂಟ (FORDA) ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದು, ಪೆನ್-ಪೇಪರ್ ಮಾದರಿಯ ಬದಲಿಗೆ ಐಐಟಿ-ಜೆಇಇ ಮಾದರಿಯಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಸುವಂತೆ ಸಲಹೆ ನೀಡಿದೆ. ಇದು ಪಾರದರ್ಶಕತೆಯನ್ನು ಕಾಪಾಡಲು ನೆರವಾಗಲಿದೆ ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.

Read More
Next Story