
ಎಐಕ್ಯೂ ಹಾಗೂ ರಾಜ್ಯ ಕೋಟಾ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಿದ ಎಂಸಿಸಿ
ಆಗಸ್ಟ್ 4ರಿಂದ ನೀಟ್-ಯುಜಿ ಕೌನ್ಸೆಲಿಂಗ್ ಆರಂಭ; ಸೆ.8ರಿಂದ ಶೈಕ್ಷಣಿಕ ವರ್ಷ
ಆಗಸ್ಟ್ 4ರಿಂದ ನೀಟ್-ಯುಜಿ 2026 ಕೌನ್ಸೆಲಿಂಗ್ ಆರಂಭವಾಗಲಿದೆ. ಸೆಪ್ಟೆಂಬರ್ 8ರಿಂದ ಶೈಕ್ಷಣಿಕ ವರ್ಷ ಶುರುವಾಗಲಿದ್ದು, ಆನ್‌ಲೈನ್ ರಾಜೀನಾಮೆ ಹಾಗೂ ಸೀಟು ಅಪ್‌ಗ್ರೇಡ್ ಸೌಲಭ್ಯ ಜಾರಿಯಾಗಿದೆ.
2026-27ನೇ ಸಾಲಿನ ಎಂಬಿಬಿಎಸ್ ಹಾಗೂ ಇತರೆ ಪದವಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ನೀಟ್-ಯುಜಿ (NEET-UG) ಕೌನ್ಸೆಲಿಂಗ್ ಆಗಸ್ಟ್ 4ರಿಂದ ಆರಂಭವಾಗಲಿದೆ. ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC) ಪ್ರಕಟಿಸಿರುವ ವೇಳಾಪಟ್ಟಿಯಂತೆ, ಹೊಸ ಶೈಕ್ಷಣಿಕ ವರ್ಷವು ಸೆಪ್ಟೆಂಬರ್ 8ರಿಂದ ಆರಂಭವಾಗಲಿದೆ.
ಎಐಕ್ಯೂ , ಡೀಮ್ಡ್ ಹಾಗೂ ಕೇಂದ್ರ ವಿಶ್ವವಿದ್ಯಾಲಯಗಳ ಮೊದಲ ಹಂತದ ಕೌನ್ಸೆಲಿಂಗ್ ಆಗಸ್ಟ್ 4ರಿಂದ 17ರವರೆಗೆ ನಡೆಯಲಿದ್ದು, ಅಭ್ಯರ್ಥಿಗಳು ಆಗಸ್ಟ್ 22ರೊಳಗೆ ಕಾಲೇಜಿಗೆ ಸೇರ್ಪಡೆಯಾಗಬೇಕು. ಎರಡನೇ ಹಂತದ ಕೌನ್ಸೆಲಿಂಗ್ ಆಗಸ್ಟ್ 24ರಿಂದ ಸೆಪ್ಟೆಂಬರ್ 2ರವರೆಗೆ, ಮೂರನೇ ಹಂತದ ಕೌನ್ಸೆಲಿಂಗ್ ಸೆಪ್ಟೆಂಬರ್ 10ರಿಂದ 18ರವರೆಗೆ ನಡೆಯಲಿದೆ. ಸ್ಟ್ರೇ ವ್ಯಾಕೆನ್ಸಿ ಸುತ್ತು ಸೆಪ್ಟೆಂಬರ್ 28ರಿಂದ ಅಕ್ಟೋಬರ್ 3ರವರೆಗೆ ನಡೆಯಲಿದ್ದು, ಅಕ್ಟೋಬರ್ 10ರೊಳಗೆ ಸೇರ್ಪಡೆ ಪೂರ್ಣಗೊಳಿಸಬೇಕು.
ರಾಜ್ಯ ಕೋಟಾ ಕೌನ್ಸೆಲಿಂಗ್ ವೇಳಾಪಟ್ಟಿ
ರಾಜ್ಯ ಕೋಟಾದ ಸೀಟುಗಳ ಮೊದಲ ಹಂತದ ಕೌನ್ಸೆಲಿಂಗ್ ಆಗಸ್ಟ್ 13ರಿಂದ 22ರವರೆಗೆ ನಡೆಯಲಿದೆ. ಅಭ್ಯರ್ಥಿಗಳು ಆಗಸ್ಟ್ 28ರೊಳಗೆ ಪ್ರವೇಶ ಪಡೆಯಬೇಕು. ಎರಡನೇ ಹಂತದ ಕೌನ್ಸೆಲಿಂಗ್ ಆಗಸ್ಟ್ 31ರಿಂದ ಸೆಪ್ಟೆಂಬರ್ 8ರವರೆಗೆ ಹಾಗೂ ಮೂರನೇ ಹಂತ ಸೆಪ್ಟೆಂಬರ್ 16ರಿಂದ 26ರವರೆಗೆ ನಡೆಯಲಿದೆ. ರಾಜ್ಯ ಕೋಟಾದ ಸ್ಟ್ರೇ ವ್ಯಾಕೆನ್ಸಿ ಸುತ್ತು ಅಕ್ಟೋಬರ್ 3ರಿಂದ 5ರವರೆಗೆ ನಡೆಯಲಿದೆ.
ಪ್ರತಿ ಹಂತದ ಕೌನ್ಸೆಲಿಂಗ್ ಬಳಿಕ ಸೇರ್ಪಡೆಯಾದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಗಾಗಿ ಎಂಸಿಸಿ ಮತ್ತು ರಾಜ್ಯ ಕೌನ್ಸೆಲಿಂಗ್ ಪ್ರಾಧಿಕಾರಗಳಿಗೆ ಪ್ರತ್ಯೇಕ ವೇಳಾಪಟ್ಟಿಯನ್ನೂ ನಿಗದಿಪಡಿಸಲಾಗಿದೆ.
ಸೆಪ್ಟೆಂಬರ್ 8ರಿಂದ ಶೈಕ್ಷಣಿಕ ವರ್ಷ ಆರಂಭ
ಎಂಸಿಸಿ ಪ್ರಕಟಿಸಿರುವ ವೇಳಾಪಟ್ಟಿಯಂತೆ, 2026-27ನೇ ಸಾಲಿನ ವೈದ್ಯಕೀಯ ಪದವಿ ಕೋರ್ಸ್‌ಗಳ ಶೈಕ್ಷಣಿಕ ವರ್ಷ ಸೆಪ್ಟೆಂಬರ್ 8ರಿಂದ ಆರಂಭವಾಗಲಿದೆ. ನಂತರದ ಕೌನ್ಸೆಲಿಂಗ್ ಸುತ್ತುಗಳು ಖಾಲಿ ಉಳಿದಿರುವ ಸೀಟುಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಮುಂದುವರಿಯಲಿವೆ.
ಕೌನ್ಸೆಲಿಂಗ್ ಪ್ರಕ್ರಿಯೆ ನಿಗದಿತ ಅವಧಿಯಲ್ಲೇ ಪೂರ್ಣಗೊಳ್ಳುವಂತೆ ಎಲ್ಲಾ ವೈದ್ಯಕೀಯ ಕಾಲೇಜುಗಳು, ರಾಜ್ಯ ಕೌನ್ಸೆಲಿಂಗ್ ಪ್ರಾಧಿಕಾರಗಳು ಹಾಗೂ ಸಂಬಂಧಿತ ಸಂಸ್ಥೆಗಳು ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಂಸಿಸಿ ಸೂಚಿಸಿದೆ. ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳನ್ನೂ ಕಾರ್ಯದಿನಗಳೆಂದು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.
ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹೊಸ ಬದಲಾವಣೆಗಳು
ಈ ಬಾರಿ ನೀಟ್-ಯುಜಿ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಲವು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಸೀಟು ಅಪ್‌ಗ್ರೇಡ್ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ಮುಂದಿನ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಕಾಲೇಜಿಗೆ ಕಡ್ಡಾಯವಾಗಿ ಖುದ್ದಾಗಿ ಹಾಜರಾಗುವ ಅಗತ್ಯವಿರುವುದಿಲ್ಲ. ಅವರ ಪ್ರವೇಶವು ಕೌನ್ಸೆಲಿಂಗ್ ವ್ಯವಸ್ಥೆಯಲ್ಲೇ ಮಾನ್ಯವಾಗಿರುತ್ತದೆ.
ಇದರ ಜೊತೆಗೆ, ಹಂಚಿಕೆಯಾದ ಸೀಟಿಗೆ ಆನ್‌ಲೈನ್ ಮೂಲಕವೇ ರಾಜೀನಾಮೆ ಸಲ್ಲಿಸುವ ಅವಕಾಶವನ್ನು ಎಂಸಿಸಿ ಪರಿಚಯಿಸಿದೆ. ನಿಗದಿತ ನಿಯಮಗಳು ಹಾಗೂ ಅವಧಿಯೊಳಗೆ ಅಭ್ಯರ್ಥಿಗಳು ಕೌನ್ಸೆಲಿಂಗ್ ಪೋರ್ಟಲ್ ಮೂಲಕವೇ ತಮ್ಮ ಸೀಟನ್ನು ತ್ಯಜಿಸಬಹುದಾಗಿದೆ.
ಎನ್‌ಆರ್‌ಐ ಅಭ್ಯರ್ಥಿಗಳಿಗೆ ಆನ್‌ಲೈನ್ ದಾಖಲೆ ಸಲ್ಲಿಕೆ
ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಎನ್‌ಆರ್‌ಐ ಮೀಸಲಾತಿಯಡಿ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಅಗತ್ಯ ದಾಖಲೆಗಳನ್ನು ಕೌನ್ಸೆಲಿಂಗ್ ಪೋರ್ಟಲ್‌ನಲ್ಲೇ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುವ ಅವಕಾಶವನ್ನು ಎಂಸಿಸಿ ಕಲ್ಪಿಸಿದೆ. ಈ ಕ್ರಮದಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನಷ್ಟು ಪಾರದರ್ಶಕ ಹಾಗೂ ವಿದ್ಯಾರ್ಥಿ ಸ್ನೇಹಿಯಾಗಲಿದೆ ಎಂದು ಸಮಿತಿ ತಿಳಿಸಿದೆ.

