
ನೀಟ್ ಮರುಪರೀಕ್ಷೆಗೆ ಪ್ರಶ್ನೆಪತ್ರಿಕೆಗಳನ್ನು ಸಾಗಾಟ ಮಾಡಲು ಸೇನಾ ವಿಮಾನಗಳನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
NEET| ಮರುಪರೀಕ್ಷೆಗೆ ಕೇಂದ್ರದ ಮಾಸ್ಟರ್ ಪ್ಲಾನ್: ಪೇಪರ್ ಲೀಕ್ ತಡೆಯಲು ವಾಯುಪಡೆ, ಭೂಸೇನೆ ನೆರವು
ಹವಾಮಾನ ವೈಪರೀತ್ಯ ಹಾಗೂ ಸಮಯದ ಅಭಾವ ಇರುವುದರಿಂದ, ಪ್ರಶ್ನೆಪತ್ರಿಕೆಗಳನ್ನು ತಡ ಮಾಡದೆ ಸುರಕ್ಷಿತವಾಗಿ ತಲುಪಿಸಲು ಭಾರತೀಯ ವಾಯುಪಡೆಯ ವಿಮಾನಗಳನ್ನು ಬಳಸಲಾಗುತ್ತಿದೆ.
ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರು ಬೀದಿಗಿಳಿದು ಹೋರಾಟ ಮಾಡಿದ್ದರು. ಬರೋಬ್ಬರಿ 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದ್ದ ದಂಧೆಕೋರರಿಗೆ ಸೆಡ್ಡು ಹೊಡೆಯಲು ಕೇಂದ್ರ ಸರ್ಕಾರ ಈಗ 'ಮಾಸ್ಟರ್ ಪ್ಲಾನ್' ಮಾಡಿದೆ. ಜೂನ್ 21 ರಂದು ನಡೆಯಲಿರುವ ಮರುಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಡೆಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ನಡೆದ ಹೈ-ಲೆವೆಲ್ ಮೀಟಿಂಗ್‌ನಲ್ಲಿ ಬಿಗ್ ಡಿಸಿಷನ್ ತೆಗೆದುಕೊಳ್ಳಲಾಗಿದೆ.
ಈ ಬಾರಿಯ ಮರುಪರೀಕ್ಷೆ ಭಿನ್ನವೇಕೆ?
ಹವಾಮಾನ ವೈಪರೀತ್ಯ ಹಾಗೂ ಸಮಯದ ಅಭಾವ ಇರುವುದರಿಂದ, ಪ್ರಶ್ನೆಪತ್ರಿಕೆಗಳನ್ನು ತಡ ಮಾಡದೆ ಸುರಕ್ಷಿತವಾಗಿ ತಲುಪಿಸಲು ಭಾರತೀಯ ವಾಯುಪಡೆಯ ವಿಮಾನಗಳನ್ನು ಬಳಸಲಾಗುತ್ತಿದೆ. ಪ್ರಶ್ನೆಪತ್ರಿಕೆಗಳು ಸಾಗಣೆಯಾಗುವಾಗ ಎಲ್ಲಿಯೂ ಲೀಕ್ ಆಗದಂತೆ ತಡೆಯಲು ಭಾರತೀಯ ಭೂಸೇನೆಯ ಲಾಜಿಸ್ಟಿಕ್ಸ್ ನೆರವನ್ನು ಪಡೆಯಲು ಸರ್ಕಾರ ಚಿಂತನೆ ನಡೆಸಿದೆ. ದೇಶದ ಪ್ರಮುಖ ಭದ್ರತಾ ಮತ್ತು ತನಿಖಾ ಸಂಸ್ಥೆಗಳು ಈ ಇಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ವ್ಯವಸ್ಥೆಯನ್ನು ಸಂಪೂರ್ಣ 'ಲೀಕ್-ಪ್ರೂಫ್' ಮಾಡಲಾಗಿದೆ.
ಮುಕ್ತಾಯವಾಗಲಿದೆ 'ಪೇಪರ್-ಪೆನ್' ಯುಗ!
ಪ್ರಶ್ನೆಪತ್ರಿಕೆ ಸೋರಿಕೆಯಂತಹ ಪಿಡುಗನ್ನು ದೇಶದಿಂದ ಶಾಶ್ವತವಾಗಿ ಕಿತ್ತೊಗೆಯಲು ಶಿಕ್ಷಣ ಇಲಾಖೆ ಭಾರಿ ಬದಲಾವಣೆಗೆ ಸಜ್ಜಾಗಿದೆ. 2027ರ ಹಣಕಾಸು ವರ್ಷದಿಂದ ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿ (CBT – Computer Based Testing) ಪರಿವರ್ತಿಸಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ. ಈ ಡಿಜಿಟಲ್ ಕ್ರಾಂತಿಯಿಂದಾಗಿ ಇನ್ಮುಂದೆ ಪ್ರಶ್ನೆಪತ್ರಿಕೆ ಪ್ರಿಂಟ್ ಆಗುವ ಅಥವಾ ಸಾಗಣೆಯಾಗುವ ಪ್ರಮೇಯವೇ ಇರುವುದಿಲ್ಲ. ಇದರಿಂದಾಗಿ ಪೇಪರ್ ಲೀಕ್ ಮಾಡಲು ದಂಧೆಕೋರರಿಗೆ ಯಾವುದೇ ಅವಕಾಶ ಸಿಗುವುದಿಲ್ಲ ಎಂದು ಸರ್ಕಾರ ಭರವಸೆ ವ್ಯಕ್ತಪಡಿಸಿದೆ.
ಏನಿದು ಪ್ರಕರಣ
ಕಳೆದ ಮೇ 3 ರಂದು ದೇಶಾದ್ಯಂತ ನಡೆದಿದ್ದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ತನಿಖೆಯಲ್ಲಿ ಅಧಿಕೃತವಾಗಿ ದೃಢಪಟ್ಟಿತ್ತು. ಇದು ದೇಶದ ಸುಮಾರು 22 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳ ಭವಿಷ್ಯದ ಮೇಲೆ ನೇರ ಪರಿಣಾಮ ಬೀರಿದ್ದರಿಂದ, ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರವು ಹಳೆಯ ಪರೀಕ್ಷೆಯನ್ನು ರದ್ದುಗೊಳಿಸಿ, ಜೂನ್ 21 ಕ್ಕೆ ಮರುಪರೀಕ್ಷೆಯನ್ನು ನಿಗದಿಪಡಿಸಿದೆ.

