
ವಿದ್ಯಾರ್ಥಿಗಳ ವಿರುದ್ಧದ FIR ಹಿಂಪಡೆಯಲು ರಾಜ್ಯಗಳಿಗೆ ಅಧಿಕಾರ ಇದೆ- ಸುಪ್ರೀಂ ಕೋರ್ಟ್
ನೀಟ್ (NEET) ಪೇಪರ್ ಸೋರಿಕೆ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ FIR ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನೀಟ್ (NEET) ಪೇಪರ್ ಸೋರಿಕೆ ಖಂಡಿಸಿ ದೇಶಾದ್ಯಂತ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ (FIR) ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಅಥವಾ ರದ್ದುಗೊಳಿಸಲು ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ. ಚಾಲ್ತಿಯಲ್ಲಿರುವ ಕಾನೂನು ನಿಯಮಗಳಿಗೆ ಒಳಪಟ್ಟು ರಾಜ್ಯಗಳು ಈ ರೀತಿಯ ಕ್ರಮ ಕೈಗೊಳ್ಳಬಹುದು ಎಂದು ಅತ್ಯುನ್ನತ ನ್ಯಾಯಾಲಯ ತಿಳಿಸಿದೆ.
ತನ್ನ ಹಳೆಯ ಆದೇಶದ ಕುರಿತು ಸ್ಪಷ್ಟನೆ ನೀಡಿದ ಸುಪ್ರೀಂ ಕೋರ್ಟ್, ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಕಾನೂನುಬದ್ಧವಾಗಿ ಅವಕಾಶವಿದೆ ಎಂದಿದೆ. ಸುಪ್ರೀಂ ಕೋರ್ಟ್‌ನ ಈ ಮಹತ್ವದ ಆದೇಶ ಪ್ರತಿಭಟನೆಯಲ್ಲಿ ಭಾಗವಹಿಸಿ ಸಂಕಷ್ಟಕ್ಕೆ ಸಿಲುಕಿದ್ದ ನೂರಾರು ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ರಿಲೀಫ್ ನೀಡುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರದಿಂದ ಭರವಸೆ ಪುನರುಚ್ಛಾರ
ಕೇಂದ್ರ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ವಿಷಯದಲ್ಲಿ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ತಿಳಿಸಿದರು. "ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ಗಳ ವಿಷಯದಲ್ಲಿ ಏನು ಮಾಡಬೇಕು ಎಂಬುದರ ಕುರಿತು ಕೆಲವು ತಪ್ಪು ತಿಳುವಳಿಕೆ ಅಥವಾ ಸಂವಹನ ಕೊರತೆ ಉಂಟಾಗಿತ್ತು. ಆದರೆ, ವಿದ್ಯಾರ್ಥಿಗಳಿಗೆ ನೀಡಿರುವ ಬದ್ಧತೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಲು ನನಗೆ ಸೂಚನೆ ಬಂದಿದೆ" ಎಂದು ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ವಿವರಿಸಿದರು.
ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸ್ಪಷ್ಟನೆಗೆ ಮನವಿ
ಹಿರಿಯ ವಕೀಲೆ ವೃಂದಾ ಗ್ರೋವರ್ ಅವರು, ಈ ಕ್ರಿಮಿನಲ್ ಪ್ರಕರಣಗಳನ್ನು ಅಧಿಕೃತವಾಗಿ ಹಿಂಪಡೆಯಲಾಗುತ್ತದೆಯೇ ಅಥವಾ ರದ್ದುಗೊಳಿಸಲಾಗುತ್ತದೆಯೇ ಎಂಬುದರ ಕುರಿತು ಸ್ಪಷ್ಟನೆ ಕೋರಿದರು.
"ಇದು ಕೇವಲ ವ್ಯಕ್ತಿಗತ ಮೊಕದ್ದಮೆಗಳ ವಿಷಯವಲ್ಲ, ಬದಲಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಯುವ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದೆ. ಈ ಯುವಕರ ಮುಂದೆ ಇಡೀ ಜೀವನವೇ ಇದೆ. ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಉತ್ತರ ಪ್ರದೇಶ ಮತ್ತು ದೆಹಲಿಗಳಲ್ಲಿ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿವೆ. ರಾಜ್ಯಗಳೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ ನಂತರ ನಾವು ಮತ್ತೆ ಈ ನ್ಯಾಯಾಲಯಕ್ಕೆ ಬರಲಿದ್ದೇವೆ," ಎಂದು ಗ್ರೋವರ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಾನೂನಾತ್ಮಕವಾಗಿ ಸಾಧ್ಯವಾಗುವ ಯಾವುದೇ ಮಾರ್ಗದಲ್ಲಾದರೂ ಸರಿ, ಕೇಂದ್ರ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸಲಿದೆ ಎಂದರು.
'ಕ್ರಿಮಿನಲ್ ಹಿನ್ನೆಲೆ' ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟನೆ
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು, ಗಂಭೀರ ಹಾಗೂ ಹೇಯ ಅಪರಾಧಗಳಲ್ಲಿ ಭಾಗಿಯಾಗದ ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್‌ಗಳನ್ನು ಮುಚ್ಚಲು ಅಥವಾ ಹಿಂಪಡೆಯಲು ದೆಹಲಿ ಮತ್ತು ಇತರ ರಾಜ್ಯ ಸರ್ಕಾರಗಳಿಗೆ ಮುಕ್ತ ಅವಕಾಶವಿದೆ ಎಂದು ಸ್ಪಷ್ಟಪಡಿಸಿತು.
ಅಲ್ಲದೆ, ಪ್ರಕರಣದಲ್ಲಿ ಉಲ್ಲೇಖಿಸಲಾಗಿರುವ ಕ್ರಿಮಿನಲ್ ಹಿನ್ನೆಲೆ ಎಂಬ ಪದವು ಕೇವಲ ಗಂಭೀರ ಹಾಗೂ ಹೇಯ ಅಪರಾಧಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಸಾಮಾನ್ಯ ಪ್ರತಿಭಟನೆಗಳಿಗಲ್ಲ ಎಂದು ನ್ಯಾಯಪೀಠ ತಿಳಿಸಿದೆ.

