x

NEET 2026| ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಈಗ ಉತ್ತರ ಕೀ ವಿವಾದ; 'ಮೆರಿಟ್‌' ದಾಟಿದ OBC ವಿದ್ಯಾರ್ಥಿಗಳು

ಕಳೆದ 20 ದಿನಗಳಿಂದ ನಿರಶನ ಕೈಗೊಂಡ ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆ ಇಂದು ಅವರನ್ನು ಬಲವಂತವಾಗಿ ಸಪ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ನೀಟ್ ಪರೀಕ್ಷೆ ದೇಶದ ಶೈಕ್ಷಣಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿವಾದ ಸೃಷ್ಟಿಸಿದೆ. ಮೇ 3 ರಂದು ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ನಡೆದ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ ಅಂದರೆ ನೀಟ್‌ ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ದೇಶಾದ್ಯಂತ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ.

ರಾಜಸ್ತಾನದ ಸೀಕರ್‌ನಲ್ಲಿ ಸೋರಿಕೆಯಾದ ಪ್ರಶ್ನೆ ಪತ್ರಿಕೆ ಕೆಲ ಕ್ಷಣಗಳಲ್ಲೇ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಲ್ಲಿ ಹರಿದಾಡಿತು. 'ಗ್ಯಾಸ್ ಪೇಪರ್' ಹೆಸರಲ್ಲಿ ಮಧ್ಯವರ್ತಿಗಳು ಲಕ್ಷಾಂತರ ರೂಪಾಯಿಗೆ ಪ್ರಶ್ನೆ ಪತ್ರಿಕೆಯನ್ನು ಮಾರಾಟ ಮಾಡಿಕೊಂಡರು. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರ ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತು. ರಾಜಸ್ಥಾನ, ಬಿಹಾರ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಿಂಗ್ಪಿನ್ಗಳು, ಮಧ್ಯವರ್ತಿಗಳು ಹಾಗೂ ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದ ಸಿಬ್ಬಂದಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದರು.

ನೀಟ್ ಅಕ್ರಮಕ್ಕೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಒತ್ತಾಯಿಸಿ ಪರಿಸರ ಹೋರಾಟಗಾರ ಹಾಗೂ 2018 ರಲ್ಲಿ ಏಷ್ಯಾದ ನೊಬೆಲ್ ಎಂದೇ ಕರೆಯಲ್ಪಡುವ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಸೋನಂ ವಾಂಗ್ಚುಕ್ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಕಳೆದ 20 ದಿನಗಳಿಂದ ನಿರಶನ ಕೈಗೊಂಡ ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆ ಇಂದು ಅವರನ್ನು ಬಲವಂತವಾಗಿ ಸಪ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಜು.20 ರಂದು ಕಾಕ್ರೋಚ್ ಜನತಾ ಪಾರ್ಟಿ ಸಂಸತ್ ಚಲೋಗೆ ಕರೆ ನೀಡಿದ್ದು, ನೀಟ್ ಅಕ್ರಮದ ವಿರುದ್ಧ ಯುವ ದನಿ ಮಾರ್ದನಿಸುತ್ತಿದೆ. ಈ ಮಧ್ಯೆ, ಸೋನಂ ವಾಂಗ್ಚುಕ್ ನಿರಶನಕ್ಕೆ ಬೆಂಬಲ ಕೊಟ್ಟರೂ ಕಾಂಗ್ರೆಸ್ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿದೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶವ್ಯಾಪಿ ಛತ್ರೋನ್ ಕಿ ಗೂಂಜ್ ಅಭಿಯಾನ ನಡೆಸುತ್ತಿದ್ದು, ಪರೀಕ್ಷಾ ವ್ಯವಸ್ಥೆಯ ಸುಧಾರಣೆ ಹಾಗೂ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಡ ಹೇರುತ್ತಿದೆ. ದೇಶದಲ್ಲಿ ನೀಟ್ ಅಕ್ರಮ ಇಷ್ಟೆಲ್ಲಾ ಸದ್ದು ಮಾಡುತ್ತಿದ್ದರೂ ಬಿಜೆಪಿ ಮಾತ್ರ ಮೌನಕ್ಕೆ ಶರಣಾಗಿದೆ.

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಎಚ್ಚೆತ್ತುಕೊಂಡ ನ್ಯಾಷನಲ್‌ ಟೆಸ್ಟ್‌ ಏಜೆನ್ಸಿ, ಮೊದಲ ಪರೀಕ್ಷೆ ರದ್ದು ಮಾಡಿ ಜೂನ್ 21ರಂದು ಮರುಪರೀಕ್ಷೆ ನಡೆಸಿತು. ಸುಮಾರು 20 ಲಕ್ಷ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆದರು. ಆದರೆ, ನೀಟ್‌ ಪರೀಕ್ಷೆ ರದ್ದು ಮಾಡಿದ ನಂತರ 20 ಕ್ಕೂ ಹೆಚ್ಚು ಅಮಾಯಕ ವಿದ್ಯಾರ್ಥಿಗಳು ಮಾನಸಿಕ ಒತ್ತಡ, ಅನಿಶ್ಚಿತತೆ ಮತ್ತು ಭವಿಷ್ಯದ ಆತಂಕದಿಂದ ಆತ್ಮಹತ್ಯೆಗೆ ಶರಣಾದರು. ಆಗಲೇ ಈ ವಿವಾದದ ಅಮಾನವೀಯ ಮುಖ, ದೇಶದ ಮುಂದೆ ಬಟಾಬಯಲಾಯಿತು.

ಆದರೆ... ವಿವಾದ ಮುಗಿಯಲಿಲ್ಲ. ಮರುಪರೀಕ್ಷೆಯ ನಂತರ ಪ್ರಕಟವಾದ ಅಂತಿಮ ಫಲಿತಾಂಶವೂ ಈಗ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರು, ಎನ್‌ಟಿಎ ಪ್ರಕಟಿಸಿದ್ದ ಅಂತಿಮ ಕೀ ಉತ್ತರಗಳನ್ನು ಆಧರಿಸಿ ಲೆಕ್ಕ ಹಾಕಿದ ಅಂಕಗಳಿಗೂ ಫಲಿತಾಂಶದಲ್ಲಿ ನೀಡಿರುವ ಅಂಕಗಳಿಗೂ ಹೊಂದಾಣಿಕೆ ಇಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಕೆಲ ಅಭ್ಯರ್ಥಿಗಳು ತಮ್ಮ ಅಂಕಗಳು 10ರಿಂದ 25 ಅಂಕಗಳವರೆಗೆ ಕಡಿಮೆಯಾಗಿವೆ ಎಂದು ಹೇಳುತ್ತಿದ್ದಾರೆ. ಇದರ ಪರಿಣಾಮ ಸಾವಿರಾರು ರ್ಯಾಂಕ್ಗಳ ಕುಸಿತವಾಗಿದೆ ಎಂದು ದೂರಿದ್ದಾರೆ. ವೈದ್ಯಕೀಯ ಕಾಲೇಜು ಪ್ರವೇಶದ ಅವಕಾಶಗಳ ಮೇಲೂ ಇದರ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಕರ್ನಾಟಕದ ಕೆಲವು ವಿದ್ಯಾರ್ಥಿಗಳೂ ಇದೇ ರೀತಿಯ ಆರೋಪ ಮಾಡಿದ್ದಾರೆ. ಅಂತಿಮ ಕೀ ಉತ್ತರಗಳ ಪ್ರಕಾರ ಹೆಚ್ಚು ಅಂಕ, ಬರಬೇಕಾಗಿದ್ದರೂ ಫಲಿತಾಂಶದಲ್ಲಿ ಕಡಿಮೆ ಅಂಕ ನೀಡಲಾಗಿದೆ ಎಂದು ಎನ್‌ಟಿಎಗೆ ಲಿಖಿತ ದೂರು ನೀಡಿದ್ದಾರೆ. ಈ ಆರೋಪಗಳು ಸತ್ಯವೇ ಅಥವಾ ಅಲ್ಲವೇ ಎಂಬುದು ಅಧಿಕೃತ ಪರಿಶೀಲನೆಯ ನಂತರವೇ ಸ್ಪಷ್ಟವಾಗಬೇಕಿದೆ. ಆದರೆ ಪಾರದರ್ಶಕತೆ ಬಗ್ಗೆ ವಿದ್ಯಾರ್ಥಿಗಳ ಪ್ರಶ್ನೆಗಳು ಮಾತ್ರ ನಿರ್ಲಕ್ಷಿಸುವಂತವಲ್ಲ.

Read More
Next Story