
ನಯಾರ ಎನರ್ಜಿ ಬಂಕ್
ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ: ಪೆಟ್ರೋಲ್, ಡೀಸೆಲ್ ದರ ಕಡಿತಗೊಳಿಸಿದ ನಯಾರಾ ಎನರ್ಜಿ!
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಕಡಿಮೆಯಾಗಿರುವುದು ಮತ್ತು ಪ್ರಮುಖ ಸಮುದ್ರ ಮಾರ್ಗಗಳು ಮತ್ತೆ ಮುಕ್ತವಾಗಿರುವುದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಧನಾತ್ಮಕ ಬದಲಾವಣೆ ತಂದಿದೆ.
ಭಾರತದ ಅತಿದೊಡ್ಡ ಖಾಸಗಿ ಇಂಧನ ಚಿಲ್ಲರೆ ಮಾರಾಟ ಸಂಸ್ಥೆಯಾದ 'ನಯಾರ ಎನರ್ಜಿ' ದೇಶಾದ್ಯಂತ ತನ್ನ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಬುಧವಾರದಿಂದ(ಜು.1) ಜಾರಿಗೆ ಬರುವಂತೆ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 5 ರೂ. ಹಾಗೂ ಡೀಸೆಲ್ ಬೆಲೆಯಲ್ಲಿ 3 ರೂ. ಕಡಿತಗೊಳಿಸುವುದಾಗಿ ಕಂಪನಿ ಪ್ರಕಟಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತಿಳಿಗೊಂಡ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಕುಸಿದಿವೆ. ಇದರ ಬೆನ್ನಲ್ಲೇ ಕಳೆದ ಎರಡು ವರ್ಷಗಳಿಗೂ ಹೆಚ್ಚು ಅವಧಿಯಲ್ಲಿ ತೈಲ ಕಂಪನಿಯೊಂದರಿಂದ ಇಂಧನ ದರದಲ್ಲಿ ಆದ ಮೊದಲ ಕಡಿತ ಇದಾಗಿದೆ.
ಜಾಗತಿಕ ಮಾರುಕಟ್ಟೆ ಚೇತರಿಕೆ
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಕಡಿಮೆಯಾಗಿರುವುದು ಮತ್ತು ಪ್ರಮುಖ ಸಮುದ್ರ ಮಾರ್ಗಗಳು ಮತ್ತೆ ಮುಕ್ತವಾಗಿರುವುದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಧನಾತ್ಮಕ ಬದಲಾವಣೆ ತಂದಿದೆ. ಇದರಿಂದಾಗಿ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ (ಎಲ್‌ಎನ್‌ಜಿ) ಪೂರೈಕೆ ಪುನಾರಂಭಗೊಂಡಿದ್ದು, ಮಾರುಕಟ್ಟೆಯಲ್ಲಿದ್ದ ಆತಂಕ ದೂರವಾಗಿದೆ. ಇದರ ನೇರ ಲಾಭ ಈಗ ಗ್ರಾಹಕರಿಗೆ ಸಿಗತೊಡಗಿದೆ.
ರಾಜ್ಯದಿಂದ ರಾಜ್ಯಕ್ಕೆ ದರ ವ್ಯತ್ಯಾಸ
ದೇಶಾದ್ಯಂತ ಇರುವ ನಯಾರಾ ಕಂಪನಿಯ 7 ಸಾವಿರಕ್ಕೂ ಹೆಚ್ಚು ಇಂಧನ ಕೇಂದ್ರಗಳಲ್ಲಿ (ಪೆಟ್ರೋಲ್ ಬಂಕ್) ಪರಿಷ್ಕೃತ ದರಗಳು ಈಗಾಗಲೇ ಜಾರಿಗೆ ಬಂದಿವೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಆದಾಗ್ಯೂ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ನಂತಹ ಸ್ಥಳೀಯ ಸುಂಕಗಳನ್ನು ಅವಲಂಬಿಸಿ ವಾಸ್ತವಿಕ ಪಂಪ್ ಬೆಲೆಗಳು ವಿವಿಧ ರಾಜ್ಯಗಳಲ್ಲಿ ವ್ಯತ್ಯಾಸವಾಗಲಿವೆ.
ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬದಲಾವಣೆ ಇಲ್ಲ
ಖಾಸಗಿ ವಲಯದ ನಯಾರಾ ದರ ಕಡಿತ ಮಾಡಿದ್ದರೂ, ಸಾರ್ವಜನಿಕ ವಲಯದ ಇಂಧನ ಚಿಲ್ಲರೆ ವ್ಯಾಪಾರಿಗಳು ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ. ದೇಶದ ಶೇ. 90 ಕ್ಕಿಂತ ಹೆಚ್ಚು ಇಂಧನ ಕೇಂದ್ರಗಳ ಪಾಲನ್ನು ಹೊಂದಿರುವ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (ಹೆಚ್‌ಪಿಸಿಎಲ್) ಕಂಪನಿಗಳು ಯಾವುದೇ ದರ ಪರಿಷ್ಕರಣೆ ಪ್ರಕಟಿಸಿಲ್ಲ. ಸದ್ಯ ದೆಹಲಿಯಲ್ಲಿ ಐಒಸಿ ಔಟ್‌ಲೆಟ್‌ಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 102.12 ರೂ. ಹಾಗೂ ಡೀಸೆಲ್ ಲೀಟರ್‌ಗೆ 95.20 ರೂ. ಮುಂದುವರಿದಿದೆ.
ಮಾರ್ಚ್ ತಿಂಗಳ ಏರಿಕೆ ವಾಪಸ್
ಇರಾನ್ ಸಂಘರ್ಷದ ಸಮಯದಲ್ಲಿ ಜಾಗತಿಕ ತೈಲ ಬೆಲೆ ಏರಿಕೆಯಾದಾಗ, ನಯಾರಾ ಕಂಪನಿಯು ಮಾ. 26 ರಂದು ಪೆಟ್ರೋಲ್ ಬೆಲೆಯನ್ನು 5 ರೂ. ಮತ್ತು ಡೀಸೆಲ್ ಬೆಲೆಯನ್ನು 3 ರೂ. ಹೆಚ್ಚಿಸಿತ್ತು. ತದನಂತರ ಮೇ ತಿಂಗಳ ದ್ವಿತೀಯಾರ್ಧದಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳೂ ಸಹ ಇಂಧನ ದರವನ್ನು ತಲಾ 7.50 ರೂ. ಹೆಚ್ಚಿಸಿದ್ದವು. ಆದರೆ ಈಗ ಬುಧವಾರದ ನಯಾರಾ ನಿರ್ಧಾರದಿಂದಾಗಿ ಮಾರ್ಚ್ ತಿಂಗಳಲ್ಲಾಗಿದ್ದ ದರ ಏರಿಕೆ ಸಂಪೂರ್ಣವಾಗಿ ಹಿಂಪಡೆದಂತಾಗಿದೆ.
ಗುಜರಾತ್‌ನ ವಡಿನಾರ್‌ನಲ್ಲಿ ವಾರ್ಷಿಕ 20 ಮಿಲಿಯನ್ ಟನ್ ತೈಲ ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ನಯಾರಾ ಎನರ್ಜಿ, ದೇಶದ ಇಂಧನ ಬೇಡಿಕೆಯನ್ನು ಪೂರೈಸಲು ತನ್ನ ಇಡೀ ಜಾಲವನ್ನು ಸಂಪೂರ್ಣವಾಗಿ ಸಜ್ಜುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

