
ಮಹಾರಾಷ್ಟ್ರದ ನವಿ ಮುಂಬೈನ ತುರ್ಭೆಯ ತೈಲ ಗೋದಾಮಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಪಕ್ಕದ ಎರಡು ಕಟ್ಟಡಗಳಿಗೂ ವ್ಯಾಪಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ನವಿ ಮುಂಬೈ ತೈಲ ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ
ಕಲಂಬೋಲಿ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಗೋದಾಮಿನ ಮಾಲೀಕ ನಾಪತ್ತೆಯಾಗಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಾಥಮಿಕ ಪರಿಶೀಲನೆಯಲ್ಲಿ ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ನವಿ ಮುಂಬೈನ ತುರ್ಭೆ ಪ್ರದೇಶದಲ್ಲಿರುವ ತೈಲ ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಮೆಫ್ಕೋ ಮಾರುಕಟ್ಟೆ ಪ್ರದೇಶದಲ್ಲಿರುವ ತೈಲ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪಕ್ಕದ ಎರಡು ಕಟ್ಟಡಗಳಿಗೂ ವ್ಯಾಪಿಸಿದ ಬೆಂಕಿ
ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ತೀವ್ರಗೊಂಡಿದ್ದು, ಅಕ್ಕಪಕ್ಕದ ಕಟ್ಟಡಗಳಿಗೂ ವ್ಯಾಪಿಸಿದೆ. ಪ್ರತ್ಯಕ್ಷದರ್ಶಿ ರಾಕೇಶ್ ನೀಡಿರುವ ಮಾಹಿತಿ ಪ್ರಕಾರ, ಬೆಂಕಿ ಎರಡು ಕಟ್ಟಡಗಳಿಗೆ ವ್ಯಾಪಿಸಿದ್ದು, ಎರಡೂ ಕಟ್ಟಡಗಳು ಜ್ವಾಲೆಗೆ ಸಿಲುಕಿವೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ. ಘಟನೆಯಿಂದ ಉಂಟಾಗಿರುವ ನಷ್ಟ ಹಾಗೂ ಯಾವುದೇ ಪ್ರಾಣಾಪಾಯ ಸಂಭವಿಸಿದೆಯೇ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಈ ಹಿಂದೆಯೂ ಗೋದಾಮಿನಲ್ಲಿ ಸ್ಫೋಟ, ಅಗ್ನಿಶಾಮಕ ಸಿಬ್ಬಂದಿಗೆ ಗಾಯ
ಇದೇ ನವೆಂಬರ್ ತಿಂಗಳ ಆರಂಭದಲ್ಲಿ ನವಿ ಮುಂಬೈನ ಕಲಂಬೋಲಿ ಉಕ್ಕಿನ ಮಾರುಕಟ್ಟೆಯಲ್ಲಿರುವ ಗ್ಯಾರೇಜ್ ಮತ್ತು ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಶನಿವಾರ ರಾತ್ರಿ ಸುಮಾರು 10.30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆ ಗೋದಾಮಿನಲ್ಲಿದ್ದ ಥಿನ್ನರ್ ತುಂಬಿದ ಹಲವು ಡ್ರಮ್‌ಗಳು ಏಕಾಏಕಿ ಸ್ಫೋಟಗೊಂಡಿದ್ದವು. ಪರಿಣಾಮ ಓರ್ವ ಅಗ್ನಿಶಾಮಕ ಸಿಬ್ಬಂದಿಗೆ ಶೇ.5ರಿಂದ 6ರಷ್ಟು ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉಪ ಅಗ್ನಿಶಾಮಕ ಅಧಿಕಾರಿ ಮನೀಶ್ ಬ್ರಹ್ಮಣ್ಕರ್ ಮಾಹಿತಿ ನೀಡಿದ್ದರು.
ಗೋದಾಮಿನ ಮಾಲೀಕ ನಾಪತ್ತೆ
ಕಲಂಬೋಲಿ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಗೋದಾಮಿನ ಮಾಲೀಕ ನಾಪತ್ತೆಯಾಗಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಾಥಮಿಕ ಪರಿಶೀಲನೆಯಲ್ಲಿ ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

