Lieutenant General Dheeraj Seth appointed as new Chief of Indian Army
x

ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್

ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕ

ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (NDA) ಹಳೆಯ ವಿದ್ಯಾರ್ಥಿಯಾಗಿರುವ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು, ಡಿಸೆಂಬರ್ 1986 ರಲ್ಲಿ ಆರ್ಮರ್ಡ್ ಕಾರ್ಪ್ಸ್‌ಗೆ ನಿಯೋಜನೆಗೊಂಡಿದ್ದರು.


Click the Play button to hear this message in audio format

ಭಾರತೀಯ ಸೇನೆಯ ನೂತನ ಮುಖ್ಯಸ್ಥರನ್ನಾಗಿ (COAS) ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಪ್ರಸ್ತುತ, ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಜೂ. 30, ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸದ್ಯದ ಸೇನಾ ಮುಖ್ಯಸ್ಥರಾಗಿರುವ ಜನರಲ್ ಉಪೇಂದ್ರ ದ್ವಿವೇದಿ ಅವರು ಅದೇ ದಿನದಂದು ಸೇವೆಯಿಂದ ನಿವೃತ್ತರಾಗಲಿದ್ದು, ಅವರ ಸ್ಥಾನವನ್ನು ಧೀರಜ್ ಸೇಠ್ ಅಲಂಕರಿಸಲಿದ್ದಾರೆ.

ನಾಲ್ಕು ದಶಕಗಳ ವಿಶಿಷ್ಟ ಸೇವೆ

ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (NDA) ಹಳೆಯ ವಿದ್ಯಾರ್ಥಿಯಾಗಿರುವ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು, ಡಿಸೆಂಬರ್ 1986 ರಲ್ಲಿ ಆರ್ಮರ್ಡ್ ಕಾರ್ಪ್ಸ್‌ಗೆ ನಿಯೋಜನೆಗೊಂಡಿದ್ದರು. ಸುಮಾರು 40 ವರ್ಷಗಳ ಸುದೀರ್ಘ ಹಾಗೂ ವಿಶಿಷ್ಟ ಮಿಲಿಟರಿ ವೃತ್ತಿಜೀವನದಲ್ಲಿ ಅವರು ಕಾರ್ಯಾಚರಣೆ, ಕಾರ್ಯತಂತ್ರ, ಸಾಮರ್ಥ್ಯ ಅಭಿವೃದ್ಧಿ ಮತ್ತು ಸಾಂಸ್ಥಿಕ ರಂಗಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ.

ಪ್ರಮುಖ ಜವಾಬ್ದಾರಿಗಳು

ಮರುಭೂಮಿ ಪ್ರದೇಶದಲ್ಲಿ ಆರ್ಮ್‌ಡ್‌ ರೆಜಿಮೆಂಟ್‌ಗೆ ನೇತೃತ್ವ ವಹಿಸಿದ್ದರು. ಅಭಿವೃದ್ಧಿ ಹೊಂದಿದ ವಲಯದಲ್ಲಿ ಆರ್ಮ್‌ಡ್‌ ಬ್ರಿಗೇಡನ್ನು ಮುನ್ನಡೆಸಿದ್ದರು. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಪಡೆಯ ಕಮಾಂಡೆಂಟ್‌, ಸುದರ್ಶನ್ ಚಕ್ರ ಕಾರ್ಪ್ಸ್‌ನ ನೇತೃತ್ವ ಸಹ ವಹಿಸಿದ್ದರು. ದೆಹಲಿ ಏರಿಯಾದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಸೇವೆ, ಪುಣೆ ಕೇಂದ್ರಿತ ದಕ್ಷಿಣ ಕಮಾಂಡ್‌ಗೆ ನೇತೃತ್ವ ವಹಿಸಿ ಆಪರೇಶನ್ ಸಿಂಧೂರ್ ವೇಳೆ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.

ಪಶ್ಚಿಮ ಗಡಿಯಲ್ಲಿ ನಡೆದ ತ್ರಿಸೇನೆಗಳ ಜಂಟಿ ಸಮರಾಭ್ಯಾಸಗಳನ್ನು ಮೇಲ್ವಿಚಾರಣೆ ಮಾಡಿದ್ದರು. ಸೇನಾ ಕಮಾಂಡರ್ ಆಗಿ ಬಡ್ತಿ ಪಡೆದ ನಂತರ, ಇವರು 'ಸೌತ್ ವೆಸ್ಟರ್ನ್ ಕಮಾಂಡ್' ಮತ್ತು 'ಸದರ್ನ್ ಕಮಾಂಡ್' ಎರಡನ್ನೂ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಎರಡೂವರೆ ವರ್ಷಗಳ ಅವಧಿಯಲ್ಲಿ ಎರಡು ಪ್ರಮುಖ ಕಾರ್ಯಾಚರಣೆಯ ಸೇನಾ ಕಮಾಂಡ್‌ಗಳಿಗೆ ಮುಖ್ಯಸ್ಥರಾಗಿ ಕಾರ್ಯತಂತ್ರದ ಮೇಲ್ವಿಚಾರಣೆ ಒದಗಿಸಿದ ಅಪರೂಪದ ಹೆಗ್ಗಳಿಕೆ ಇವರದ್ದಾಗಿದೆ.

ಸೇನೆಯ ಆಧುನೀಕರಣಕ್ಕೆ ಒತ್ತು

ಭಾರತೀಯ ಸೇನೆಯನ್ನು ಭವಿಷ್ಯದ ಯುದ್ಧಭೂಮಿ ತಂತ್ರಜ್ಞಾನಕ್ಕೆ ಸಜ್ಜುಗೊಳಿಸುವಲ್ಲಿ ಇವರ ಕೊಡುಗೆ ಅಪಾರ. ಸೇನಾ ಪ್ರಧಾನ ಕಚೇರಿಯ ಕಾರ್ಯತಂತ್ರದ ಯೋಜನೆ ಮತ್ತು ಸಾಮರ್ಥ್ಯ ಅಭಿವೃದ್ಧಿ ವಿಭಾಗಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿರುವ ಇವರು, ಸೇನೆಯ ದೀರ್ಘಕಾಲೀನ ರೂಪಾಂತರ ಹಾಗೂ ಆಧುನೀಕರಣದ ಮಾರ್ಗಸೂಚಿಯನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ಮಿಲಿಟರಿ ಶಿಕ್ಷಣ

ಭಾರತದ ಉನ್ನತ ಮಿಲಿಟರಿ ಕೋರ್ಸ್‌ಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಧೀರಜ್ ಸೇಠ್ ಅವರು ಹೈಯರ್ ಕಮಾಂಡ್ ಕೋರ್ಸ್ ಮತ್ತು ರಾಷ್ಟ್ರೀಯ ರಕ್ಷಣಾ ಕಾಲೇಜಿನ ಪದವೀಧರರಾಗಿದ್ದಾರೆ. ಇದರೊಂದಿಗೆ ಪ್ಯಾರಿಸ್‌ನ ಪ್ರತಿಷ್ಠಿತ 'ಕಮಾಂಡ್ ಅಂಡ್ ಸ್ಟಾಫ್ ಕೋರ್ಸ್'ನಲ್ಲೂ ಭಾಗವಹಿಸಿ ಜಾಗತಿಕ ಮಿಲಿಟರಿ ವ್ಯವಹಾರಗಳ ಬಗ್ಗೆ ವ್ಯಾಪಕ ಜ್ಞಾನ ಹೊಂದಿದ್ದಾರೆ. ದೇಶದ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಇವರ ನಾಯಕತ್ವವು ಭಾರತೀಯ ಸೇನೆಗೆ ಹೊಸ ದಿಕ್ಸೂಚಿ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

Read More
Next Story